ಪ್ರಮುಖ ಸುದ್ದಿ

ಸಮಾಜದಲ್ಲಿ ಕಾನೂನು ಪ್ರಜ್ಞೆ ಮೂಡಿದಾಗ ಮಾತ್ರ ಅಪರಾಧದಿಂದ ಮುಕ್ತ:  ನ್ಯಾ.ಸದಾನಂದ ಎನ್.ನಾಯಕ

ಯಾದಗಿರಿಃ ಕಾನೂನು ಅರಿವು-ನೆರವು ಕಾರ್ಯಕ್ರಮ

ಸಾರ್ವಜನಿಕರಲ್ಲಿ ಕಾನೂನು ತಿಳುವಳಿಕೆ ಅಗತ್ಯ

ಯಾದಗಿರಿ: ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ನಾಗರಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಗೌರವಾನ್ವಿತ ಶ್ರೀ ಸದಾನಂದ ಎನ್.ನಾಯಕ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿವಿಧ ಪ್ರಕರಣಕ್ಕೆ ಒಳಗಾದ ಜನರು ಕಾನೂನಿನ ಪ್ರಜ್ಞೆ ಇಲ್ಲದೆ ಅಲೆದಾಡಬೇಕಾಗಿದೆ, ಇದಕ್ಕಾಗಿ ಉಚಿತ ಕಾನೂನು ಸೇವಾ ಕೇಂದ್ರಗಳಿದ್ದು, ಇಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ನುಡಿದರು.

ಆ್ಯಸಿಡ್ ದಾಳಿ, ಅತ್ಯಾಚಾರ, ದೌರ್ಜನ್ಯ, ಮಾನಸಿಕವಾಗಿ ಆತ್ಮಹತ್ಯೆ ಸೇರಿದಂತೆ ಪ್ರಕರಣಕ್ಕೆ ಒಳಗಾದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಮೂರು ಲಕ್ಷ ರೂಪಾಯಿಗಳ ಪರಿಹಾರ ಕಲ್ಪಿಸುವ ಯೋಜನೆ ಇದೆ. ಒಂದು ಲಕ್ಷಕಿಂತ ಕಡಿಮೆ ಆದಾಯ ಹೊಂದಿದ್ದವರಿಗೆ ಇದು ಅನ್ವಯಿಸುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಯಾವುದೇ ಆದಾಯದ ಮಿತಿ ಇರುವುದಿಲ್ಲ ಎಂದು ಅವರು ವಿವರಿಸಿದರು.

ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ಬಲಿಯಾದವರಿಗಾಗಿ ಪ್ರತಿಯೊಂದು ತಾಲೂಕ ಕೇಂದ್ರಗಳಲ್ಲಿ ಸ್ಥಾಪಿಸಲಾದ ಉಚಿತ ಕಾನೂನು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಾನೂನು ನೆರವು ಪಡೆಯಬಹುದಾಗಿದೆ ಎಂದರು.

ಕೃಷಿ ವ್ಯವಸಾಯ, ಬೀಜ ವಿತರಣೆ, ರಾಸಾಯನಿಕ ಗೊಬ್ಬರ, ಭೂಮಿ, ಕಲಬೆರಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರ ಮತ್ತು ಯೋಜನೆಗಳಿಗೆ ತನ್ನದೆಯಾದ ಕಾನೂನು ನಿಯಮಗಳಿವೆ. ಆದರೆ, ಜನರಿಗೆ ತಿಳುವಳಿಕೆ ಕೊರತೆ ಇದ್ದು, ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ನವೆಂಬರ್ 9 ರಿಂದ 18 ರವರೆಗೂ ಮನೆ-ಮನೆಗೆ ಕಾನೂನಿನ ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತಾಪಿ ಜನರು ಇದರ ಬಗ್ಗೆ ತಿಳಿದುಕೋಳ್ಳಬೇಕು ಎಂದು ಅವರು ತಿಳಿಸಿದರು.

ನ್ಯಾಯಂಗ ಬಂಧನಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಒದಗಿಸಿಕೊಡಲು ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ನ್ಯಾಯವಾದಿಗಳು ನೇಮಿಸಲಾಗಿರುತ್ತದೆ ಇವರಿಂದ ಅಪರಾಧಕ್ಕೆ ಒಳಗಾದವರು ಯಾವುದೇ ಹಣವಿಲ್ಲದೆ ಉಚಿತ ನ್ಯಾಯ ಪಡೆಯಬಹುದಾಗಿದೆ ಎಂದು ಕಾನೂನಿನ ಬಗ್ಗೆ ವಿವವರಿಸಿದರು.

ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮ ಜಾರಿಗೆ ಬಂದ ದಿನವಾದ್ದರಿಂದ ಇಂದು ನಾವೆಲ್ಲರೂ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸುತ್ತೇವೆ, ಇದರ ಪ್ರಯುಕ್ತವಾಗಿ ಸಾರ್ವಜನಿಕರಿಗೆ ಪ್ರತಿವರ್ಷ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಕಾನೂನು ಅರಿವು-ನೆರವು ಕಾರ್ಯಕ್ರಮದ ನಿಮಿತ್ತವಾಗಿ ಬೈಕ್ ರ್ಯಾಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ನಾಮದೇವ ಕೆ.ಸಾಲಮಂಟಪಿ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಪ್ರಭು ಎನ್.ಬಡಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಕಾಡಪ್ಪ ಹುಕ್ಕೇರಿ, ಸರ್ಕಾರಿ ಅಭಿಯೋಜಕರಾದ ಗೋಪಲರಾವ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಿಶ್ವನಾಥ ಉಭಾಳೆ ಸೇರಿದಂತೆ ಇತರರಿದ್ದರು.
ಮುಖ್ಯ ಲಿಪಿಕಾಧಿಕಾರಿ ಪ್ರಕಾಶ ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್‍ಡಿಎ ಹಣಮಂತ ಅವರು ವಂದಿಸಿದರು.

Related Articles

2 Comments

  1. Nivu ennu bariyabekaddu bahalane ede.
    Mukyavagi shahapur taluka dalle eggillade nadiyuttiruva Indian gas navarabagge bariri.?

    1. ಇಂಡಿಯನ್ ಗ್ಯಾಸ್ ಬಗ್ಗೆ ನಿನಗೆ ಅನ್ಯಾಯವಾಗಿದ್ರೆ ಅವರ ವಿರುದ್ಧ ಅನ್ಯಾಯದ ವಿರುದ್ಧ ಹೋರಾಟ ಮಾಡು. ಕೇಸ್ ದಾಖಲು ಮಾಡು FIR copy. ತಂದು ಕೊಡು ಬರಿಯುವ. ಎಲ್ಲವನ್ನು ಪತ್ರಕರ್ತರೇ ಬರೆಯೋದು ಅಲ್ಲ ಅನ್ಯಾಯದ ವಿರುದ್ಧ ಹೋರಾಟ ಮಾಡೋದು ಕಲಿ.ಆಗ ನೀ ಬರಿ ಅನ್ನೋದು ಬೇಕಿಲ್ಲ ನಿನ್ನ ಹುಡುಕಿಕೊಂಡು ಬಂದು statement ತೊಗೋತಾರ ತಿಳೀತಾ.

Leave a Reply

Your email address will not be published. Required fields are marked *

Back to top button