ಜನರೊಂದಿಗೆ ಪೊಲೀಸ್‍ರು ಸೌಜನ್ಯದಿಂದ ವರ್ತಿಸಲಿ- ನ್ಯಾ.ಬಡಿಗೇರ
ಅನಕ್ಷರಸ್ಥರು ಠಾಣೆಗೆ ಬಂದಾಗ ಕಾನೂನು ಮಾಹಿತಿ ನೀಡಿ
ಯಾದಗಿರಿಃ ಪೊಲೀಸರು ಜನ ಸಾಮಾನ್ಯರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕಲ್ಲದೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕು. ಬಡವರು ಶ್ರೀಮಂತರಿಗೊಂದು ನ್ಯಾಯ ಒದಗಿಸಬಾರದು ಎಂದು ಹಿರಿಯ ಶ್ರೇಣಿ ನ್ಯಾಯಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ನಗರದ ಸಮೀಪದ ಭೀಮರಾಯನ ಗುಡಿ ಪೊಲೀಸ್ ಠಾಣೆ ಆವರಣದಲ್ಲಿ ವಕೀಲರ ಸಂಘ, ಅರಣ್ಯ ಇಲಾಣೆ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಠಾಣೆಗೆ ದೂರು ನೀಡಲು ಬರುವ ಅಕ್ಷರಸ್ಥರಿಗೆ ಕಾನೂನು ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಮತ್ತು ಕಾನೂನಿನಡಿಯಲ್ಲಿ ದೊರೆಯುವ ಪರಿಹಾರ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಿಬೇಕು. ಕಾನೂನು ಮೀರಿ ನಡೆಯಬಾರದು. ಮೀರಿದ್ದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಸಂದೇಶ ನೀಡುವ ಜತೆಗೆ ನ್ಯಾಯಕ್ಕೆ ಜಯ ದೊರೆಯಲಿದೆ.
ಅನ್ಯಾಯಕ್ಕೊಳಗಾದವರ ರಕ್ಷಣೆಗೆ ನಾವಿದ್ದೇವೆ ಎಂಬ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಉಳಿದ ರಾಜ್ಯಗಳಿಗಿಂತ ನಮ್ಮ ರಾಜ್ಯದ ಪೊಲೀಸರು ಉತ್ತಮರು ಎಂದರು.
ಉಪನ್ಯಾಸಕ ಎಸ್.ಎಂ.ಸಜ್ಜನ್ ಮಾತನಾಡಿ, ನ್ಯಾಯ ಒದಗಿಸಬೇಕಿದ್ದವರೇ ದೌರ್ಜನ್ಯ ಎಸಗಲು ಮುಂದಾದಾಗ ಜನರು ಅಸಹಾಯಕತೆಗೆ ಬರುತ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದಾಗ, ಸಾಮಾನ್ಯ ಜನರ ಸ್ಥಿತಿ ಅದೋಗತಿ. ಹೀಗಾಗಿ ಅಂತಹ ಸಂದರ್ಭದಲ್ಲಿ ಜನರು ಜಿಲ್ಲೆಯ ಕಾನೂನು ಹಾಗೂ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ದೂರು ನೀಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಸಿಪಿಐ ಮಹ್ಮದ್ ಸಿರಾಜ್, ಪಿಎಸ್‍ಐ ತಿಪ್ಪಣ್ಣ ರಾಠೋಡ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಪ್ರೆಡ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಉಪಸ್ಥಿತರಿದ್ದರು. ನ್ಯಾಯವಾದಿಗಳಾದ ಬಸಮ್ಮ ರಾಂಪೂರೆ, ಸತ್ತಮ್ಮ ಹೊಸ್ಮನಿ, ಗುರುರಾಜ ದೇಶಪಾಂಡೆ, ಸಂತೋಷ ದೇಶಮುಖ ಸೇರಿದಂತೆ ಇತರರಿದ್ದರು.