ಅಂಕಣಕಥೆ

ಸೌಂದರ್ಯ ಎಲ್ಲಿದೆ..ಗೊತ್ತೆ.? ಡಾ.ಈಶ್ವರಾನಂದ ಬರಹ

ದಿನಕ್ಕೊಂದು ಕಥೆ

ಸೌಂದರ್ಯ ಎಲ್ಲಿದೆ..ಗೊತ್ತೆ.? 

ಸೌಂದರ್ಯ ಎಲ್ಲಿದೆ ಎಂದು ನಮ್ಮನ್ನು ಯಾರಾದರೂ ಕೇಳಿದರೆ, ನಾವು-ನೀವು ಕೊಡುವ ಉತ್ತರಗಳು ಒಂದೇ ಆಗಿರಲಿಕ್ಕಿಲ್ಲ! ಆದರೆ ‘ಬ್ಯೂಟಿ ಲೈಸ್ ಇನ್ ದಿ ಐಸ್ ಆಫ್ ದಿ ಬಿಹೋಲ್ಡರ್’ ಎಂಬ ಇಂಗ್ಲಿಷ್‌ನ ಮಾತೊಂದು ಇದೆಯಲ್ಲವೇ? (ಸೌಂದರ್ಯ ಅಡಗಿರುವುದು ನೋಡುವವರ ಕಣ್ಣಲ್ಲಿ) ಮಾತನ್ನು ಪುಷ್ಟೀಕರಿಸುವ ವಿಶ್ವವಿಖ್ಯಾತ ಕತೆಯು ಲೈಲಾ-ಮಜನೂ ಅವರದ್ದು! ಅದನ್ನು ಕೇಳದೆ ಇರುವವರು ಯಾರು? ಅವರಿಬ್ಬರೂ ಹನ್ನೊಂದನೆಯ ಶತಮಾನದಲ್ಲಿ ಅರಬ್ ದೇಶದಲ್ಲಿ ಇದ್ದವರಂತೆ.

ಅವರಿಬ್ಬರ ಅಮರ ಪ್ರೇಮದ ಕತೆಯ ಬಗ್ಗೆ ಉರ್ದುವಿನಲ್ಲಿ ಹಲವಾರು ಮಹಾಕಾವ್ಯಗಳು ಇವೆಯಂತೆ. ಅವುಗಳಲ್ಲಿ ಅಮೀರ್ ಕುಸ್ರೋ ದೆಹಲವಿ ಅವರು 1299ರಲ್ಲಿ ಬರೆದ ಮೊಟ್ಟಮೊದಲನೆಯ ಕಾವ್ಯ ‘ಮಜುನು ಓ ಲೈಲಿ’.
ನಂತರ ಅನೇಕ ಕವಿಗಳು ಅವರಿಬ್ಬರ ಬಗ್ಗೆ ನೂರಾರು ಕಾವ್ಯಗಳನ್ನೂ, ಕಾದಂಬರಿಗಳನ್ನೂ ಬರೆದಿದ್ದಾರೆ.

ಕುತೂಹಲಕಾರಿಯಾದ ಕತೆಗಳು! ಆ ಯುವಕನ ನಿಜವಾದ ಹೆಸರು ಖಾಯಸ್ ಇಬ್‌ನ್‌ ಅಲ್ -ಮುಲಾವ್ಹಾ. ಆಶ್ಚರ್ಯವೆಂದರೆ ಆತ ತನ್ನ ಬದುಕಿನಲ್ಲಿ ಲೈಲಾಳನ್ನು ನೋಡಿದ್ದುದು ಒಂದೇ ಒಂದು ಬಾರಿ. ಮೊದಲ ನೋಟದಲ್ಲೇ ಆತ ಪರವಶನಾಗುತ್ತಾನೆ. ಆಕೆಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಆತನ ಪರವಶತೆ ಎಷ್ಟು ಗಾಢವಾಗಿತ್ತೆಂದರೆ ಆತ ಎಲ್ಲೆಲ್ಲಿಯೂ ಲೈಲಾಳನ್ನೇ ಕಾಣತೊಡಗುತ್ತಾನೆ. ಲೈಲಾ-ಲೈಲಾ ಎಂದೇ ಕನವರಿಸುತ್ತಾನೆ. ಅದನ್ನು ಕಂಡ ಊರಿನ ಜನ ಆತನನ್ನು ಮಜನೂ ಎಂದು ಕರೆಯತೊಡಗುತ್ತಾರೆ (ಮಜನೂ ಎಂದರೆ ಅರೆಹುಚ್ಚ ಎಂಬರ್ಥ). ಆದರೆ ಮಜನೂವಿನ ವಿವಾಹ ಪ್ರಸ್ತಾಪವನ್ನು ಉನ್ನತ ವಂಶಸ್ಥರೂ, ಶ್ರೀಮಂತರೂ ಆದ ಲೈಲಾಳ ತಂದೆ ನಿರಾಕರಿಸುತ್ತಾರೆ.

ಮಗಳನ್ನು ಬಡವನೂ, ಅರೆಹುಚ್ಚನೂ ಆದವನಿಗೆ ಕೊಟ್ಟು ಮದುವೆ ಮಾಡಿದರೆ ಪ್ರತಿಷ್ಠೆಗೆ ಕುಂದಾಗುತ್ತದೆಂದು ಭಾವಿಸುತ್ತಾರೆ. ಅವರು ಅವಸರವಸರದಲ್ಲಿ ದೂರದ ಊರಿನ ಶ್ರೀಮಂತ ಯುವಕನೊಂದಿಗೆ ಲೈಲಾಳ ಮದುವೆ ಮಾಡಿ ಕಳುಹಿಸಿಬಿಡುತ್ತಾರೆ.

ಪ್ರೇಮದಲ್ಲಿ ವಿಫಲಗೊಂಡ ಮಜನೂವಿನ ಹುಚ್ಚು ಇನ್ನೂ ಹೆಚ್ಚಾಗುತ್ತದೆ. ಆತ ಲೈಲಾಳ ಬಗ್ಗೆ ಕವಿತೆಗಳನ್ನು ಬರೆಯುತ್ತಾ, ತನಗೇ ತಾನು ಹಾಡಿಕೊಳ್ಳುತ್ತಾ ಸುತ್ತಾಡುತ್ತಿರುತ್ತಾನೆ. ಆತನ ಅಮರ ಪ್ರೇಮದ ಕತೆ ಬಾಯಿಂದ ಬಾಯಿಗೆ ಹರಡುತ್ತದೆ.

ಆ ದೇಶದ ರಾಜನ ಕಿವಿಗೂ ಮುಟ್ಟುತ್ತದೆ. ಕುತೂಹಲಗೊಂಡ ರಾಜರು ಮಜುನುವನ್ನು ಕರೆಸಿ ‘ನಿನ್ನ ಪ್ರೇಮದ ಬಗ್ಗೆ ಕೇಳಿದ್ದೇನೆ. ನೀನು ಅಷ್ಟೊಂದು ಪ್ರೀತಿಸುತ್ತಿರುವ ಲೈಲಾ ಅಷ್ಟೇನೂ ರೂಪಸಿಯಲ್ಲವೆಂದು ಜನರು ಹೇಳುತ್ತಾರೆ. ನನ್ನ ಅರಮನೆಯಲ್ಲೇ ಹತ್ತಾರು ಜನ ಅತೀ ಸುಂದರಿಯರಾದ ಯುವತಿಯರಿದ್ದಾರೆ.
ನೀನು ಅವರನ್ನು ನೋಡು. ನೀನು ಇಷ್ಟ ಪಡುವವರೊಂದಿಗೆ ಮದುವೆ ಮಾಡಿಸುತ್ತೇನೆ’ ಎಂದು ಹೇಳಿದರು.

ಹತ್ತಾರು ಯುವತಿಯರನ್ನು ಕರೆಸಿದರು.  ಮಜನೂವಿನ ಮುಂದೆ ನಿಲ್ಲಿಸಿದರು. ಮಜನೂ ಒಬ್ಬೊಬ್ಬ ಯುವತಿಯನ್ನೂ ನೋಡುತ್ತಿದ್ದ, ‘ಇವಳು ನನ್ನ ಲೈಲಾ ಅಲ್ಲ’ ಎನ್ನುತ್ತಿದ್ದ ಅಥವಾ ‘ಈಕೆ ಲೈಲಾಳಷ್ಟು ಸುಂದರಿಯಲ್ಲ’ ಎನುತ್ತಿದ್ದ. ಹತ್ತೂ ಯುವತಿಯರನ್ನು ನೋಡಿದ. ಎಲ್ಲರನ್ನೂ ನಿರಾಕರಿಸಿದ. ರಾಜರು ಆಶ್ಚರ್ಯದಿಂದ ‘ನಮ್ಮ ರಾಜ್ಯದ ಅತ್ಯಂತ ಸ್ಪುರದ್ರೂಪಿ ಯುವತಿಯರನ್ನೆಲ್ಲಾ ನೀನು ಕಣ್ಣಾರೆ ಕಂಡಿದ್ದೀಯ. ಆದರೆ ಯಾರೂ ನಿನಗೆ ಸುಂದರಿಯರಾಗಿ ಕಾಣಲಿಲ್ಲವೇ?’ ಎಂದು ಕೇಳಿದರು.

ಆಗ ಮಜನೂ ರಾಜರಿಗೆ ‘ನನ್ನನ್ನು ಕ್ಷಮಿಸಿಬಿಡಿ. ಇವರೆಲ್ಲ ಸುಂದರಿಯರಾಗಿ ನಿಮಗೆ ಕಾಣುತ್ತಿರಬಹುದು. ಏಕೆಂದರೆ ನೀವು ನೋಡುತ್ತಿರುವುದು ನಿಮ್ಮ ಕಣ್ಣಿನಿಂದ.
ನೀವು ನನ್ನ ಕಣ್ಣುಗಳಿಂದ ನೋಡಿದರೆ ಇವರ ಸೌಂದರ್ಯ ಲೈಲಾಳ ಸೌಂದರ್ಯದ ಮುಂದೆ ಏನೇನೂ ಅಲ್ಲ ವೆಂದು ಅರ್ಥವಾಗುತ್ತದೆ. ಏಕೆಂದರೆ ಲೈಲಾಳ ಸೌಂದರ್ಯ ಅಡಗಿರುವುದು ನನ್ನ ಕಣ್ಣುಗಳಲ್ಲಿ. ಮತ್ತಾರ ಕಣ್ಣುಗಳಲ್ಲೂ ಅಲ್ಲ’ ಎಂದು ಹೇಳಿ ಬಿಟ್ಟ.

ಮಹಾರಾಜರು ನಿರಾಶರಾಗಿ ಕೈಚೆಲ್ಲಿದರು. ಈ ಕತೆಯನ್ನು ಓದಿದ ಮೇಲೆ ಸೌಂದರ್ಯ ಎಲ್ಲಿದೆ? ಎಂದು ಪ್ರಶ್ನಿಸಿದರೆ, ನಾವೂ ಸೌಂದರ್ಯ ಅಡಗಿರುವುದು ನೋಡುಗರ ಕಣ್ಣುಗಳಲ್ಲಿ ಎಂಬ ಮಾತನ್ನು ಒಪ್ಪಿಕೊಳ್ಳುತ್ತೇವೆ ಅಲ್ಲವೇ?

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button