ಮರೆಯದ ಮಾಣಿಕ್ಯ —(೨)
(ನೆನಪಿನ ದೋಣಿಯಲಿ ತೇಲಿ ಹೋದವರು)
ಅಡಿವೆಪ್ಪ ಕಡಿ ಸ್ಥಬ್ಧವಾಯ್ತು ಕನ್ನಡದ ನುಡಿ
ಸರಳತೆ ಹಾಗೂ ಸಹಜತೆಗೆ ಹೆಸರು ,ಧಾನಧರ್ಮ ಪರೋಪಕಾರದಲ್ಲಿ ಎತ್ತಿದ ಕೈ,ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಕ್ಕೆ ನಿಂತರೆ ಮುಗಿಸುವವರೆಗೆ ಟೊಂಕಕಟ್ಟಿ ನಿಲ್ಲುವ ಧೃಡತೆ,ಎಲ್ಲರನ್ನೂ ಪ್ರೀತಿಸುವ ಸೌಹಾರ್ದತೆ,ಕೂಡಿ ಬಾಳೋಣ ,ಕೂಡಿ ಉಣ್ಣೊಣ ಎಂಬ ಉಕ್ತಿಯ ಶಕ್ತಿ ಮೈಗೂಡಿಸಿಕೊಂಡಿದ್ದವರು ದಿ. ಶ್ರೀ ಅಡಿವೆಪ್ಪ ಕಡಿ,ಖ್ಯಾತ ವರ್ತಕರು ,ಕಸಾಪ ತಾಲೂಕ ಘಟಕದ ಮಾಜಿ ಅಧ್ಯಕ್ಷರು,ಮುದ್ದೇಬಿಹಾಳ ಅವರು.
ಮುದ್ದೇಬಿಹಾಳದ ಬಸವೇಶ್ವರ ಸರ್ಕಲ್ಲಿನ ಷಟಸ್ಥಲ ಧ್ವಜ ! ಒಂದು ಸಲ ಗಾಳಿಗೂ ಬೀಸದೇ ನಿಂತ ಅನುಭವ, ದಡಕ್ ಅಂತ ಮುಗಿಲ ಜರ್ದು ಬಿದ್ದಂಗ ಆಗುವ ಮನಸಿನ ಅಲ್ಲೋಲ ಕಲ್ಲೋಲ ಸ್ಥಿತಿ ,ಯಾಕಿಂದು ಹಿಂಗಾಕ್ಹತೈತಿ ಅಂದ್ರ ಎದುರ ಬಂದವ್ರು ಹೇಳ್ತಾರ ….ಸರ್ರಾ…..ಅಡಿವೆಪ್ಪಣ್ಣ ಕಡಿ ಅವರು ಇನ್ನಿಲ್ಲವಾದರು,ಆ ಬಸವನ ಸನ್ನಿಧಿಗೆ ಆತ್ಮ ಅರ್ಪಿತ ಆತು, ಅಂದಾಗ ಗೊತ್ತಾತು….ಇದೆಲ್ಲ ಹಳಹಳಿಗಿ ಕಾರಣ ಇದು ಅಂತ…..
ಏಷ್ಯಾದ ಅತ್ಯಂತ ಎತ್ತರದ ಬಸವಣ್ಣನ ಅಶ್ವರೋಹಿ ಮೂರ್ತಿಯ ಸ್ಥಾಪನೆ ಸಮಿತಿಯ ಅಧ್ಯಕ್ಷಾರಾಗಿದ್ದರು.ಹಗಲಿರುಳು ಕಾಲಿಗಿ ಚಕ್ರ ಹಾಕಿಕೊಂಡವರಂತೆ ತಿರುಗಾಡಿ ಆ ಕಾರ್ಯವನ್ನು ಯಶಸ್ವಿಗೊಳಿಸಿದರು ಎಂದು ಅಭಿಮಾನದ ಕಣ್ಣಿರಾಕ್ಷರ ಹೊರಡಿಸುವ ಶ್ರೀ ಅಶೋಕ ಮಣಿ ಅವರು ಹೇಳುತ್ತಾರೆ.
ಅಡಿವೆಪ್ಪ ಕಾಕ ಕಡಿ ಅವರ ಮತ್ತೊರ್ವ ಒಡನಾಡಿ ,ಬಹುತ್ವದ ಅಮರಪ್ರೇಮಿ ಅಬ್ದುಲ್ ರಹಿಮಾನ್ ಬಿದರಕುಂದಿ ಅವರು ಹೇಳುವಂತೆ
“ಸ್ನೇಹಕ್ಕೆ ಜೀವ ಕೊಡು ಮನುಷ್ಯಾ,ಗಟ್ಟಿ ಮಾತ ಹೇಳಿದ್ರ ಅದನ್ನ ಯಾರೂ ಅಲ್ಲಗಳಿಯುವಂತಿಲ್ಲ,ನೇರ ನಿಷ್ಠುರವಾದಿ,ಛಲದಂಕಮಲ್ಲ ,ಮಾನವತಾವಾದಿ ,ಶರಣ ತತ್ವದ ಹರಿಕಾರ,ಕನ್ನಡ ನುಡಿ ಸೇವೆಯ ಭಂಟ,
ಸೌಹಾರ್ದತೆಯ ಸಂತ” ಎಂದೆಲ್ಲ ಕಂಬನಿ ಮಿಡಿಯುತ್ತಾರೆ.
A3 ಫೇಮಸ್ ಹೆಸರು , ಅಡಿವೆಪ್ಪ ಕಡಿ,ಕಡಿಯವರ ನುಡಿಗಿ ಜೋಡಿ ನುಡಿಯಾದವರು ಅಬ್ದುಲ್ ರಹಿಮಾನ್ ಬಿದರಕುಂದಿ ಹಾಗೂ ಅಶೋಕ ಮಣಿ ,ಈ ಎರಡು ಹೊನ್ನಮಣಿ ಗಳಿದ್ದದ್ದು ಕಡಿಯವರಿಗೆ ಗಡಿಮೀರಿದ ಖುಷಿ.ಹಿಂದು ಮುಸ್ಲಿಂ ಜೈನ್ ಧರ್ಮಿಯವರಾದರೂ ಮೂವರೂ ಮಾನವ ಧರ್ಮದ ಪ್ರತಿಪಾದಕರು.ಸೌಹರ್ದತೆಯ ಸಾಹುಕಾರ ಅಡಿವೆಪ್ಪಣ್ಣ ಕಡಿ ಅವರು.
ಕಿರಾಣಿ ಅಂಗಡಿ, ಅಡತಿ ವ್ಯಾಪಾರ,ಸಂಸಾರ ,ಸಾಹಿತ್ಯದ ಒಡನಾಟ ,ರಾಜಕೀಯದ ಏಳುಗಳ ನಡುವೆ ಸಂಭ್ರಮ ಪಡುವಂತ ಸ್ನೇಹಿತ ವರ್ಗ ,ಎದೆಯೆತ್ತರದ ಮಕ್ಕಳು ಕೆಲಸಕ್ಕೆ ನಿಂತಮ್ಯಾಲ ಸಾಮಾಜಿಕ ಕೆಲಸವೇ ದೇವರ ಕೆಲಸ ಅನ್ನೋ ರೀತಿ ವ್ಯಕ್ತಿ ಒಂದು ಶಕ್ತಿಯಾಗಿ ಕೆಲಸ ಮಾಡಿದರು.
ಮನಿ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುವ ಈ ಕಾಲಮಾನದಾಗ ,ತಾಲ್ಲೂಕು ಸಮ್ಮೇಳನ ಮಾಡಬೇಕಾದಾಗ ಹೆಸರು ಬರೆಸಿದ ದಾನಿಗಳ ಪಟ್ಟಿ ದೊಡದಿತ್ತು,ಆದ್ರ ಕೂಡಿಸಿದ ಒಟ್ಟು ಮೊತ್ತ ದೊಡ್ಡದಾಗಲಿಲ್ಲ.ಹಂಗಂತ ಹಿಂದೇಟ ಹಾಕಿದವರಲ್ಲ,”ಸಂಸಾರದ ರೊಕ್ಕ – ಸಾಹಿತ್ಯದ ಲೆಕ್ಕ”
ಬ್ಯಾರಿಲ್ಲ ಬಿಡು ಅಂತ ನಿರ್ಭಿಡೆಯಿಂದ ಖರ್ಚುಮಾಡಿ ಸಮ್ಮೇಳನ ಯಶಸ್ವಿಯಾಗಿ ಮಾಡಿದ ಕೀರ್ತಿ ಅಡಿವೆಪ್ಪಣ್ಣ ಕಡಿ ಅವರದ್ದು ಎಂದು ಖ್ಯಾತ ಸಂಶೋಧಕರಾದ ಶ್ರೀ ಎ.ಎಲ್ ನಾಗೂರ ,ಕನ್ನಡ ಉಪನ್ಯಾಸಕರು ,ಸಿಕ್ಯಾಬ್ ಬಾಲಕರ ಪದವಿ ಪೂಋವ ಕಾಲೇಜ್ ವಿಜಯಪುರ ಅವರು ನುಡಿಗಂಬನಿ ಹರಿಸುತ್ತಾರೆ.
ರೈತರಿಗೆ ಅನುಕೂಲ ಆಗ್ತಾದ ಅಂದ್ರ ಸಕ್ಕರಿ ಪ್ಯಾಕ್ಟರಿಗೆ ಜಮೀನ ನೀಡತಾರ ,ಜನಮನದ ಸೇವಾ ಕಾರ್ಯಕ್ಕೆ ಸದಾ ಉತ್ಸಾಹಿಗಳು ಇವರಾಗಿದ್ದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿದ್ದರು.ಎಳೆಂಟು ಷಟ್ಪದಿಯ ಕೃತಿಗಳು ,ಅನೇಕ ನಾಟಕಗಳನ್ನು ಬರೆದು ,ಎಲೆಮರೆಯ ಕಾಯಿಯಂತಿದ್ದ ಮಲ್ಕಣ್ಣ (ಮಲ್ಲಿಕಸಾಬ್) ಅಮರಗೋಳ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿ ,ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಹೆಚ್ಚಿಸಿದರೆಂದು ಅವರ ಒಡನಾಡಿಯಾಗಿರು ಚಿಂತಕ ಅಬ್ದುಲ್ ರಹಿಮಾನ್ ಬಿದರಕುಂದಿ ಅವರು ನೆನೆಯುತ್ತಾರೆ.
“ಖಡಿ ಖಡಿ ನೇರ ಮಾತಿನ ನುಡಿ ಅಣ್ಣ
ಮುದ್ದಬ್ಬೆಯ ಕುಡಿಯಣ್ಣ
ಗುರು ಹಿರಿಯರಿಗೆ ಗೌರವಿಸುವ ಕಣಿಯಣ್ಣ
ಜಾತ್ಯಾತೀತಕೆ ಸಾಥ ನಿಂದಣ್ಣ ,
ನಮ್ಮೆಲ್ಲರ ಬಿಟ್ಟು ಕಡಿಗಾದರೂ ಅಡಿವೆಪ್ಪ ಕಡಿಯಣ್ಣ ” ಎಂದು ಕಾವ್ಯದೊಡಲು ಕಂಬನಿ ಮಿಡಿದವರು ಕ್ರೀಯಾತ್ಮಕ ವೇದಿಕೆಯ ಮಲ್ಲಿಕಾರ್ಜುನ್ ಭೃಂಗಿಮಠ ಅವರು.
ಯಾಕ್ರಿ ಸರ್ರಾ ,ಹೆಂಗಾತ್ರಿ ,ಬಿದ್ದಿರಂತಲ್ಲ ,ಬಿದ್ದಮ್ಯಾಲ ಏಳುತನಕ ,ಎದ್ದಮ್ಯಾಲು ಮತ್ತೆಂದೂ ಬೀಳದತನಕ ಸಿಟ್ಟ ಸಾಯಿಸಬೇಕ್ರಿ,ಅಹಂ ಹೊಡೆದ್ಹಾಕಬೇಕ್ರಿ,ನಾವೇ ಅನಾನಕೂಲ ಅದಮ್ಯಾಲ ಸುಮ್ಮ ಇರೋದು ಕಲಿತಷ್ಟು ಚಂದ ನೋಡ್ರಿ ಅಂತ ವೇದಾಂತದ ಮಾತುಗಳನ್ನ ಅಡಿವೆಪ್ಪಣ್ಣ ಕಡಿ ಮಾತಾಡಿದ್ದು ಇನ್ನಾ ಮನಸಿನ್ಯಾಗ ಹಸಿಹಸಿ ಚಿತ್ರಮೂಡಿಸಕ್ಹತ್ಯಾವ ಅಷ್ಟರೊಳಗ ಇಲ್ಲಂದ್ರ ನಂಬುದು ಹೆಂಗ್ರಿ ಅಂತ ತಮ್ಮ ಬಾಂಧವ್ಯದ ಎಸಳನ್ನು ಎಳೆಎಳೆಯಾಗಿ ಬಿಚ್ಚಿಹೆಳಿ ಮನನೊಂದವರು ಖ್ಯಾತ ವಾಗ್ಮಿಗಳು ,ಹಿರಿಯ ಸಾಹಿತಿಗಳು ಶ್ರೀ ಬಿ ಎಮ್.ಹಿರೇಮಠ ಸರ್ ಅವರು.
ನಿಮ್ಮಂತಹ ಅಪರೂಪದ ವ್ಯಕ್ತಿಗಳು ಈ ಭೂಮಿಮ್ಯಾಗ ಇರ್ತಾರಂತ ಮಳಿಬೆಳಿ ಚಂದ ಅಗ್ತಾವ್ರಿ,ನೀವು ಬಿಟ್ಟುಹೋದ ನುಡಿಗಳು ,ಆದರ್ಶದ ಕನಸುಗಳು ,ನಿಮ್ಮ ಸೇವಾಕರ್ಯಗಳು ನಮಗೆ ಇನ್ನು ಮುಂದೆ ಕೈ ಹಿಡಿದು ನಡೆಸಲಿ.
ತಮ್ಮ ಅಗಲಿಕೆಯ ನೋವಿನಿಂದ ಸಂಕಟಪಡುವ ಸಹಸ್ರಾರು ಅಭಿಮಾನಿಗಳಿಗೆ ,ಒಡನಾಡಿಗಳಿಗೆ ,ಕುಟುಂಬ ವರ್ಗದವರಿಗೆ ,ಮಕ್ಕಳು,ಮೊಮ್ಮಕ್ಕಳಾದಿಯಾಗಿ ಸಮಸ್ತರಿಗೂ ಭಗವಂತ ತಾಳಿಕೊಳ್ಳುವ ಶಕ್ತಿ ನೀಡಲಿ.
ನಿಮ್ಮೆಲ್ಲರ ನೋವು ,ಹನಿಗಂಬನಿಯಲ್ಲಿ ನಾನೂ ಒಬ್ಬನೆಂದು ಹೆಳುತ್ತ ,ನನ್ನ ನುಡಿಗಂಬನಿಗೆ ಇತಿಶ್ರೀ ಹೇಳುವೆ ,
ಕಾಕ ನೀವು ಅಮರವಾದಿರಿ…..
ಅನಂತ ನಮನಗಳೊಂದಿಗೆ..
-ಸಾಹೇಬಗೌಡ ಯ ಬಿರಾದಾರ
ಶಿಕ್ಷಕರು,ಸಾಹಿತಿಗಳು
ಹೆಗ್ಗನದೊಡ್ಡಿ
7337653589.