ಚಿರತೆಗಳ ನಿರಂತರ ನಗರ ಯಾತ್ರೆ : ಮೃಗ ಮತ್ತು ಮಾನವ ಸಂಘರ್ಷಕ್ಕಿಲ್ಲ ಮಾತ್ರೆ!
-ಮಲ್ಲಿಕಾರ್ಜುನ ಮುದನೂರ್
ಬೆಂಗಳೂರು ನಗರದ ಖಾಸಗಿ ಶಾಲೆಗೆ ನುಗ್ಗಿದ್ದ ಚಿರತೆ ಒಂದು ಹಲವು ಅವಾಂತರಗಳನ್ನ ಸೃಷ್ಟಿಸಿತ್ತು. ಛಾಯಾಗ್ರಾಹಕರ ಮೇಲೆರಗಿ ಹೈರಾಣು ಮಾಡಿತ್ತು. ಇತ್ತೀಚೆಗಷ್ಟೇ ತುಮಕೂರು ನಗರದಲ್ಲಿ ಚಿರತೆಯೊಂದು ಮನೆಯೊಂದನ್ನು ಪ್ರವೇಶಿಸಿತ್ತು. ಅದೃಷ್ಟವಶಾತ್ ಅತ್ತೆ ಮತ್ತು ಸೊಸೆ ಶೌಚಾಲಯದಲ್ಲಿ ಅಡಗಿ ಕುಳಿತು ಬಚಾವಾಗಿದ್ದರು. ಹೀಗೆ ಅನೇಕ ಕಡೆ ಚಿರತೆಗಳು ಕಾಡಿನಿಂದ ಹೊರಬಂದು ನಗರ ಯಾತ್ರೆ ಮಾಡುವ ಮೂಲಕ ಅನೇಕ ಅವಾಂತರಗಳನ್ನು ಸೃಷ್ಠಿಸಿವೆ.
ಗಜಪಡೆಯಂತೂ ಪ್ರತಿದಿನ ಒಂದಲ್ಲಾ ಒಂದು ಕಡೆ ಪತ್ತೆಯಾಗಿ ಆತಂಕ ಮೂಡಿಸುತ್ತಿದೆ. ಅನೇಕ ಕಡೆ ಮನುಷ್ಯನ ಬಲಿ ಪಡೆದಿವೆ. ರೈತನ ಬೆಳೆ ಹಾನಿ ಮಾಡಿವೆ. ಇತ್ತೀಚೆಗಷ್ಟೇ ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಒಂದು ಸರಿಸುಮಾರು ಒಂದು ತಿಂಗಳು ಕಾಲ ಜೋಡಿ ಆನೆ ಸುತ್ತಾಡಿ ಭೀತಿ ಸೃಷ್ಠಿಸಿದ್ದವು. ಏಳೆಂಟು ಜನರ ಬಲಿ ಪಡೆದು ಹದಿನಾರಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದವು.
ಕರಡಿಗಳಂತೂ ಅನೇಕ ಕಡೆ ಪ್ರತ್ಯಕ್ಷವಾಗಿ ಮಾನವನ ಜೊತೆ ಸಂಘರ್ಷಕ್ಕಿಳಿದ ಅನೇಕ ನಿದರ್ಶನಗಳಿವೆ. ಲೆಕ್ಕವಿಲ್ಲದಷ್ಟು ಮನುಷ್ಯನನ್ನು ಕರಡಿಗಳು ಬಲಿ ಪಡೆದಿವೆ. ಕರಡಿ ದಾಳಿಗೆ ತುತ್ತಾಗಿರುವ ಅನೇಕರ ಜೀವನವೇ ಬರ್ಬಾದ್ ಆಗಿಹೋಗಿದೆ. ಅನೇಕ ಗ್ರಾಮಗಳಲ್ಲಿ ರೈತಾಪಿ ವರ್ಗ ಕಾಡುಪ್ರಾಣಿಗಳ ದಾಳಿಗೆ ಹೆದರಿ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವ ಸ್ಥಿತಿಯಿದೆ. ಕಾಡುಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಸಹ ಏನೂ ಕ್ರಮ ಕೈಗೊಳ್ಳದ ಸ್ಥಿತಿ ಅಧಿಕಾರಿಗಳದ್ದಾಗಿದೆ.
ಇಂದು ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಚಿರತೆಯೊಂದು ನುಗ್ಗಿದ್ದು ಮೊದಲಿಗೆ ಫಲಹಾರ್ ಕಾಲೋನಿಯಲ್ಲಿನ ನಿರ್ಮಾಣ ಹಂತದ ಕಟ್ಟಡ ಪ್ರವೇಶಿಸಿದೆ. ಬಳಿಕ ಹೌಸಿಂಗ್ ಕಾಲೋನಿಯಲ್ಲಿನ ಮನೆಯೊಂದರ ಆವರಣ ಪ್ರವೇಶಿಸಿದೆ. ಈ ವೇಳೆ ಚಿರತೆ ನೋಡಲು ಜನ ಮುಗಿಬಿದ್ದಾಗ ಮೂವರ ಮೇಲೆರಗಿದ ಚಿರತೆ ಗಾಯಗೊಳಿಸಿದ ಘಟನೆ ನಡೆದಿದೆ.
ಸುಮಾರು 8ವರ್ಷದ ಚಿರತೆ ಸಮೀಪದ ಅರಣ್ಯದಿಂದ ಆಹಾರವನ್ನು ಹುಡುಕಿಕೊಂಡು ಬೆಳಗ್ಗೆ ನಾಡಿಗೆ ಬಂದಿದೆ. ಸುಮಾರು ಐದಾರು ತಾಸುಗಳ ಕಾಲ ಚಿರತೆ ನಗರದ ನಿವಾಸಗಳಲ್ಲಿ ಆಶ್ರಯ ಪಡೆದಿದೆ. ಈ ವೇಳೆ ಚಿರತೆ ಸೆರೆ ಹಿಡಿಯಲು ತೆರಳಿದ ಅಧಿಕಾರಿಗಳ ಮೇಲೂ ಚಿರತೆ ದಾಳಿ ನಡೆಸಿದೆ. ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳೂ ಗಾಯಗೊಂಡಿದ್ದಾರೆ.
ಸುಮಾರು ತಾಸುಗಳ ಅರಣ್ಯ ಅಧಿಕಾರಿಗಳು ಪ್ಲಾನ್ ಮಾಡಿ ಕಬ್ಬಿಣದ ಗೇಜ್ ಬಳಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆ ಸೆರೆಯಾದ ಸುದ್ದಿ ತಿಳಿದು ಇಂಧೋರ್ ನಗರದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ನಗರಕ್ಕೆ ನುಗ್ಗಿದ ಚಿರತೆ ನಡು ರಸ್ತೆಯಲ್ಲೇ ಜನರ ಮೇಲೆ ದಾಳಿ ನಡೆಸಿದ ದೃಶ್ಯಗಳು ಎಲ್ಲಡೆ ವೈರಲ್ ಆಗಿದ್ದು ಭಾರೀ ಆತಂಕವನ್ನು ಸೃಷ್ಠಿಸಿದೆ.
ಕಾಡುಮೃಗಗಳು ನಾಡು ಪ್ರವೇಶಿಸಿ ಅನೇಕ ಅವಾಂತರಗಳನ್ನು ಸೃಷ್ಠಿಸುತ್ತಿರಲು ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆಯೇ. ಅಥವಾ ಕಾಡು ನಾಶವಾಗುತ್ತಿರುವ ದುಷ್ಪರಿಣಾಮದಿಂದಾಗಿ ಕಾಡುಮೃಗಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆಯೇ. ಅರಣ್ಯದ ಸಮೀಪ ಅಥವಾ ಕಾಡುಪ್ರಾಣಿಗಳ ಕಾರಿಡಾರ್ ನಲ್ಲೇ ಲೇಔಟ್ ಗಳ ನಿರ್ಮಾಣ ಆಗಿರುವುದೇ ಕಾರಣವೇ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಕಾಡುಮೃಗಗಳು ಮತ್ತು ಮಾನವನ ಸಂಘರ್ಷಕ್ಕೆ ಬ್ರೇಕ್ ಹಾಕಬೇಕಿದೆ.