ಕಥೆ

ಆ ಜೋತಿಷಿ ಹೇಳಿದ ಬದುಕಿನ ಭವಿಷ್ಯ ಅದೆಷ್ಟು ಸತ್ಯ!

ಅಪ್ಪನ ಮಾತು ಅಮೃತ!

ಈವತ್ತು ಯಾಕೋ ಬೆಳಗ್ಗೆ ತಡವಾಗಿ ವಾಕಿಂಗ್ ಹೋದೆ ಆದರಲ್ಲಿ ಅಸಲಿಗೆ ವಾಕಿಂಗೇ ಮರೆತೊಯ್ತು. ಅದಕ್ಕೆ ಕಾರಣ ಬಲಗಾಲಿಗೆ ಕೃತಕ ಕಾಲು ಅಳವಡಿಸಿಕೊಂಡಿದ್ದ ಆ ವ್ಯಕ್ತಿ. ನಟ ಅಂಬರೀಷನಷ್ಟೇ ಸ್ಪುರದೃಪಿಯಾಗಿರುವ ಆ ವ್ಯಕ್ತಿ ಅಷ್ಟೇ ಭಾರವೂ ಇದ್ದಾನೆ. ಆದರೂ ಕೃತಕ ಕಾಲಿನಲ್ಲೇ ತೆವಳುತ್ತ ಮೈದಾನದಲ್ಲಿ ವಾಕ್ ಮಾಡುತ್ತಿದ್ದ. ಸಹಜವಾಗಿಯೇ ಆತನತ್ತ ನನ್ನ ಗಮನ ಹರಿಯಿತು. ಎದುರಾದವರೆಲ್ಲಾ ಆತನಿಗೆ ನಮಸ್ತೆ ಗುರುಗಳೇ ಅನ್ನುತ್ತಿದ್ದರು. ಇನ್ನೂ ಕುತೂಹಲ ಹೆಚ್ಚಾಯಿತು. ಮೈದಾನದಲ್ಲಿ ಒಂದು ರೌಂಡ್ ಆಯಿತು, ಎರಡು ರೌಂಡ್ ಆಯಿತು. ಇನ್ನೇನು ಆ ವ್ಯಕ್ತಿ ವಿಶ್ರಾಂತಿ ಪಡೆಯಬಹುದು ಅಂದುಕೊಂಡು ಮುನ್ನಡೆಯ ತೊಡಗಿದೆ. ಆದರೆ, ಆ ವ್ಯಕ್ತಿ ಮಾತ್ರ ನಿಲ್ಲಲೇ ಇಲ್ಲ. ಸರಿಯಾಗಿ ಮೂರನೇ ಸುತ್ತು ಹೊರಟರು.

ನಾನು ಮೈದಾನದಲ್ಲಿದ್ದ ಬೆಂಚಿನ ಮೇಲೆ ಕುಳಿತೆ. ಮೂರನೇ ಸುತ್ತು ಪೂರ್ಣಗೊಳಿಸಿದ ಆ ವ್ಯಕ್ತಿಯೂ ನನ್ನ ಬಳಿ ಬಂದು ಕುಳಿತರು. ಕುತೂಹಲದಿಂದ ಕೇಳಿದೆ ಅಪಘಾತವಾಗಿತ್ತಾ ಸರ್. ಅಯ್ಯೋ ಪ್ರಾರಬ್ಧ ರೀ ಏನ್ಮಾಡೋದು ಅಂತ ಮಾತು ಶುರು ಮಾಡಿದರು. ಜೋತಿಷ್ಯ ಹೇಳ್ತೀನಿ, ಅದರಿಂದ ಹಲವರಿಗೆ ಉಪಯೋಗಾನೂ ಆಗಿದೆ. ಆದರೆ, ನನ್ನ ಭವಿಷ್ಯ ನನಗೇ ಗೊತ್ತಾಗಲಿಲ್ಲವಲ್ಲ ಇದು ಜನರ ಬಾಯಿಗೆ ಸಿಗುವ ಮಾತು ಎಂದು ನಕ್ಕರು.

ಈ ಮೊದಲು ಖ್ಯಾತ ಹೋಟೆಲೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದೆ ಕಣ್ರೀ. ಒಂದ್ಸಲ ಕಾಲು ನೋವು ಅಂತ ಡಾಕ್ಟರೊಬ್ಬರ ಹತ್ತಿರ ಹೋದೆ. ಆ ಪುಣ್ಯಾತ್ಮ ನರದಲ್ಲಿ ಬ್ಲಡ್ ಬ್ಲಾಕ್ ಆಗಿದೆ ಅಂಥೇಳಿ ಆಪರೇಷನ್ ಮಾಡಿದರು. ಆದರೆ, ಸಮರ್ಪಕ ಚಿಕಿತ್ಸೆ ನೀಡದೆ ಅವರು ಹಣ ಕೀಳುವ ಯೋಜನೆ ಹಾಕಿಕೊಂಡ ಕಾರಣ ನನ್ನ ಕಾಲು ಕೊಳೆಯಿತು. ಪರಿಣಾಮ ತೊಡೆ ಭಾಗದವರೆಗೆ ಕಟ್ ಮಾಡಿ ಕೃತಕ ಕಾಲು ಅಳವಡಿಸುವ ಸ್ಥಿತಿ ಬಂತು.

ಬೆಂಗಳೂರಿಗೆ ಹೋದರೆ ನನ್ನ ಬಳಿ ಭವಿಷ್ಯ ಕೇಳಿ ಒಳಿತು ಕಂಡಿದ್ದ ಡಾಕ್ಟರೊಬ್ಬರು ಅಲ್ಲಿ ಸಿಕ್ಕರು. ತಕ್ಷಣಕ್ಕೆ ಸ್ಪಂದಿಸಿ ಆಪರೇಷನ್ ಮಾಡಿ ಉತ್ತಮ ಸಲಹೆಗಳನ್ನು ನೀಡಿದರು. ಅಷ್ಟೇ ಅಲ್ಲ, ಆ ಡಾಕ್ಟ್ರು ನನ್ನ ಬಳಿ ನಯಾಪಸೆಯೂ ದುಡ್ಡು ಪಡೆಯಲಿಲ್ಲ ಈ ಡಾಕ್ಟ್ರು ಹಿಂಗೆ, ಆ ಡಾಕ್ಟ್ರು ಹಂಗೆ ಎಂದು ಮತ್ತೊಮ್ಮೆ ನಕ್ಕರು.

ಡಾಕ್ಟರ್ ಸಲಹೆ ಪ್ರಕಾರ ನಾವು ವಾಕಿಂಗ್ ಮಾಡಲೇಬೇಕು. ಆದರೆ, ಕೆಲವರು ಹೀಗಾಯಿತಲ್ಲ ಅಂತ ಡಿಪ್ರೆಶನ್ ಗೆ ಒಳಗಾಗಿ ಮನೆಬಿಟ್ಟು ಹೊರಗೆ ಬರೋದೇ ಇಲ್ಲ, ಹಾಗೇ ಮರೆಯಾಗಿ ಬಿಡುತ್ತಾರೆ. ನಮ್ಮೂರಿನಲ್ಲೂ ನನ್ನಂತವರು ನಾಲ್ಕಾರು ಜನರಿದ್ದಾರೆ. ನಾನು ಅವರನ್ನೆಲ್ಲಾ ಭೇಟಿಯಾಗಿ ವಾಕಿಂಗ್ ಗೆ ಬರುವಂತೆ ಹೇಳುತ್ತೇನೆ. ಆದರೆ, ಯಾರೊಬ್ಬರೂ ಬರುತ್ತಿಲ್ಲ, ಬದಲಾಗಿ ಕಾಲು ಕಳೆದುಕೊಂಡ ಚಿಂತೆಯಲ್ಲೇ ಕೊರಗುತ್ತಿದ್ದಾರೆ.

ನನಗಿಂತ ಚಿಕ್ಕ ವಯಸ್ಸಿನವರು, ಎಂಥೆಂಥ ಶ್ರೀಮಂತರ ಮಕ್ಕಳು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಾರೆ. ಬೆಂಗಳೂರಿಗೆ ಹೋದರೆ 20ಸಾವಿರದಿಂದ ಹಿಡಿದು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕೃತಕ ಕಾಲುಗಳನ್ನು ತೋರಿಸ್ತಾರೆ ಗೊತ್ತಾ ಎಂದು ಮೊಗದೊಮ್ಮೆ ನಕ್ಕರು.

ಹೀಗಾದ ಮೇಲೆ ಎಷ್ಟೆಲ್ಲಾ ಖರ್ಚು ಮಾಡಿದರೂ ಅಷ್ಟೇ, ಜೀವನೋತ್ಸಾಹ ಕಳೆದುಕೊಳ್ಳದೆ ಬಂದಂತೆ ಬದುಕಬೇಕು. ಜೀವನೋತ್ಸಾಹ ಕಳೆದುಕೊಂಡರೆ ಕಾಲು ಕಟ್ ಆಗಿರದಿದ್ದರೂ ಬದುಕು ವೇಸ್ಟ್ ಆಗುತ್ತದಲ್ಲವೇ. ನನ್ನ ಕಾಲು ದುರಂತದ ವಿಷಯದಲ್ಲಿ ನಮ್ಮ ಮನೆಯವರು ಕೊರಗುತ್ತಾರೆ. ನನ್ನಂತಾದ ಬೇರೆಯವರು ಮನೆಯಿಂದ ಹೊರಗೆ ಬರದ ಸ್ಥಿತಿಯಲ್ಲಿದ್ದಾರೆ. ನಾನು ಈ ಮೊದಲಿನಂತೆಯೇ ತಿರುಗಾಡುತ್ತಿದ್ದೇನೆ ಖುಷಿ ಪಡಿ ಅಂತ ನಾನೇ ಸಮಾಧಾನ ಹೇಳ್ತೀನಿ. ನನಗಿಂತ ಹೆಚ್ಚು ಆಕ್ಟಿವ್ ಆಗಿರುವವರ ಬಗ್ಗೆ ವಿವಿಧ ಶಿಬಿರಗಳಲ್ಲಿ ವೈದ್ಯರು ವಿವರಿಸುತ್ತಾರೆ. ಅಂಥವರನ್ನು ಕಂಡು ನಾನು ಮತ್ತಷ್ಟು ಇಂಪ್ರೂಮೆಂಟ್ ಆಗಲು ಬಯಸುತ್ತೇನೆಂದರು. ನಾನೊಮ್ಮೆ ಅವರಿಗೆ ನಮಸ್ಕರಿಸಿದೆ.

ನಮ್ಮ ಬಡತನ ನೆನೆದು ಚಿಂತಿಸುವುದಕ್ಕಿಂತ ನಮಗಿಂತ ಬಡತನದಲ್ಲಿರುವವರನ್ನು ನೋಡಿ ನಾವು ಅವರಿಗಿಂತ ಮೇಲ್ಮಟ್ಟದಲ್ಲಿ ಬದುಕುತ್ತಿದ್ದೇವಲ್ಲ ಎಂದು ಸಮಾಧಾನ ಪಡಬೇಕು. ನಮಗಿಂತ ಸಿರಿವಂತರನ್ನು ಕಂಡು ಹೊಟ್ಟೆಕಿಚ್ಚು ಪಡುವ ಬದಲು ನಾವೂ ಆ ಮಟ್ಟಕ್ಕೆ ಬೆಳೆಯಬೇಕೆಂದು ದುಡಿಯಬೇಕು ಎಂದು ನನ್ನ ಅಪ್ಪ ನಿವೃತ್ತ ಶಿಕ್ಷಕ ಸಂಗಪ್ಪ ಮುದನೂರ್ ಅವರು ಆಗಾಗ ಹೇಳುತ್ತಿದ್ದ ಮಾತು ನೆನಪಿಗೆ ಬಂತು…  ಸಮಾಧಾನದ ಬದುಕಿಗೆ ಈ ಸರಳ ಸೂತ್ರ ಸಾಕಲ್ಲವೇ? ಜೀವನ ಪ್ರೀತಿ, ಜೀವನೋತ್ಸಾಹ ಅಂದರೆ ಇದೇ ಅಲ್ಲವೇ?

-ಬಸವರಾಜ ಮುದನೂರ್

Related Articles

Leave a Reply

Your email address will not be published. Required fields are marked *

Back to top button