ನನ್ನೂರಿನ ಶಾಲೆ ವಿಕಾಸವಾಗಲಿ-ಡಾ.H ವೀರಭದ್ರಪ್ಪ
ಶಾಲಾ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ
ಯಾದಗಿರಿ, ಶಹಾಪುರ: ಶಾಲೆ ವಿದ್ಯಾರ್ಥಿಗಳ ಭವಿಷ್ಯದ ಕೇಂದ್ರ. ಶಿಕ್ಷಣದಿಂದ ಶಿಸ್ತು, ಸಂಯಮ, ಸಹಕಾರ, ಸ್ವಾವಲಂಬನೆ ಮತ್ತು ಜ್ಞಾನದ ವಿಕಾಸವಾಗಲಿದೆ ಎಂದು ಮಕ್ಕಳ ತಜ್ಞ ಡಾ.ಹೆಚ್.ವೀರಭದ್ರಪ್ಪ ತಿಳಿಸಿದರು.
ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಲಿ-ಕಲಿ ಕೇಂದ್ರಕ್ಕೆ 80 ಸಾವಿರ ರೂ. ಮೌಲ್ಯದ ಕಲಿಕಾ ಕಿಟ್ ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಿಟ್ ವಿತರಿಸಿ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬೇಕಾದ ಸೌಲಭ್ಯ ಕಲ್ಪಿಸಬೇಕಿದೆ. ನನ್ನೂರಿನ ಶಾಲೆ ವಿಕಾಸವಾಗಬೇಕು. ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಆಗ ಅವರ ಭವಿಷ್ಯ ಉಜ್ವಲವಾಗಲಿದೆ. ಅಕ್ಷರ ಕಲಿತ ಮನುಷ್ಯ ಮಾದರಿ ಜೀವನ ನಡೆಸಲು ಸಾಧ್ಯವಿದೆ.
ಮಕ್ಕಳ ಕಲಿಕೆಗೆ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ನಮ್ಮಿಂದ ಅಳಿಲು ಸೇವೆ ಸಲ್ಲಿಸಿರುವದು ಮನಸ್ಸಿಗೆ ತೃಪ್ತಿ ತಂದಿದೆ. ವಿದ್ಯಾರ್ಥಿಗಳು ನಲಿ-ಕಲಿ ಮೂಲಕ ಸಂತಸದ ಕಲಿಕೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಂಡೇಶಿ ಮರ್ಕಲ್, ಶಿಕ್ಷಣ ಇಲಾಖೆಯ ಶಂಕರಲಿಂಗ, ಗ್ರಾ.ಪಂ.ಉಪಾಧ್ಯಕ್ಷ ಬಂಡೆಪ್ಪ ಮಹಿಪಾಲರೆಡ್ಡಿ, ಚಂದ್ರಶೇಖರರಡ್ಡಿ ಸೇರಿದಂತೆ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಇದ್ದರು. ಮುಖ್ಯೋಪಾದ್ಯಾಯನಿ ರಾಧಾ ಸರ್ವರನ್ನು ಸ್ವಾಗತಿಸಿ ವಂದಿಸಿದರು.