ನಿನ್ನ ‘ಜಾತಿ’ಗೆ ನನ್ನ ಧಿಕ್ಕಾರ ಧಿಕ್ಕಾರ ಧಿಕ್ಕಾರ…!!!
ನೀನು ನಕ್ಕರೆ ಸಕ್ಕರೆಯಾಗುವ ಜಾತಿ, ನೀನು ಅತ್ತರೆ ಸತ್ತೇ ಹೋಗುವ ಜಾತಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಗೆಳತಿ, ನಿನ್ನದು ಯಾವ ಜಾತಿ ಅಂತ ನಾನ್ಯಾವತ್ತಾದರೂ ಕೇಳಿದ್ದೆನಾ? ಹೋಗಲಿ ತಿಳಿದುಕೊಳ್ಳುವ ಪ್ರಯತ್ನವನ್ನಾದರೂ ಮಾಡಿದ್ದೆನಾ? ನಿನ್ನ ಮೇಲಾಣೆ ಕಣೆ, ನನ್ನ ಕಿವಿಗೆ ಜಾತಿ ಅನ್ನುವ ಪದವೇ ಅಲರ್ಜಿ! ಆದರೆ, ನನ್ನ ಸ್ನೇಹ ಮಾಡಿ ಐದು ವರ್ಷಗಳ ನಂತರ ನಿನಗೇಕೆ ನನ್ನ ಜಾತಿ ನೆನಪಾಯಿತು. ಅದ್ಯಾರು ನಿನಗೆ ಜಾತಿ, ಧರ್ಮದ ಬೋಧನೆ ಮಾಡಿದವರು. ಪ್ಲೀಸ್ ಹೇಳಿಬಿಡು ಸಾಕು, ನಿನಗೊಂದು ದೊಡ್ಡ ನಮಸ್ಕಾರ…
ಈ ಭೂಮಿ, ಆ ಬಾನು, ಜೀವ ಜಲ, ಉಸಿರಾಡುವ ಗಾಳಿ ಯಾವ ಜಾತಿ ಹೇಳು. ದೇವರಿಗೂ ಜಾತಿ ಕಟ್ಟಿದ ಮನುಷ್ಯ ಜಾತಿಯೇ ಕೀಳು ಕಣೆ. ಜಾತಿಯ ಹಂಗಿಲ್ಲದೆ ಬದುಕುವ ದಾರಿ ತೋರಿದ ಬಸವನದು ನಿಜವಾದ ಮನುಜ ಜಾತಿ. ಇರಲಿ ಬಿಡು ಜಾತಿಯ ಪೆಡಂಭೂತ ಆವರಿಸಿಕೊಂಡಿರುವ ನಿನಗೆ ಇದೆಲ್ಲಾ ಎಲ್ಲಿ ಅರ್ಥವಾಗಬೇಕು.
ಮೊದಲೇ ನೀನು ನನಗೆ ಜಾತಿ ಕೇಳಿದ್ದು ಒಳ್ಳೆಯದೇ ಆಯಿತು ಕಣೆ. ನನಗೆ ಅಲರ್ಜಿ ಆಗುವ ಪದವನ್ನೇ ತಲೆಯಲ್ಲಿ ತುಂಬಿಕೊಂಡಿರುವ ನಿನ್ನೊಂದಿಗೆ ಬದುಕೆಂಬುದು ಕುಲಗೆಟ್ಟು ಹೋದೀತು. ಜಾತಿಯ ಅಡ್ಡಗೋಡೆ ನಿರ್ಮಿಸಿ ನನ್ನನ್ನು ದೂರ ಮಾಡಲು ಯತ್ನಿಸಿರಬಹುದು. ಆದರೆ, ಜಾತಿ ಕೇಳಿದ ನಿನ್ನ ‘ಜಾತಿ’ಯೇ ಸರಿಯಿಲ್ಲ ಅಂತ ನಾನೇ ನಿನ್ನ ಸಹವಾಸ ಬಿಡಲು ಯತ್ನಿಸ್ತೀನಿ. ಗುಡ್ ಬೈ…
ಅರೇ ಇಷ್ಟಕ್ಕೆ ಅದ್ಹೇಗೆ ಮಾತು ಮುಗಿಸಲು ಸಾಧ್ಯ ಹೇಳು. ಜಾತಿ ಕೇಳಿದವಳಿಗೆ ಉತ್ತರ ಹೇಳಲೇಬೇಕಲ್ಲವೇ. ನನ್ನದು ಪ್ರೀತಿಯ ಜಾತಿ ಕಣೆ. ನೀನು ನಕ್ಕರೆ ಸಕ್ಕರೆಯಾಗುವ ಜಾತಿ. ನೀನು ಅತ್ತರೆ ಸತ್ತೇ ಹೋಗುವ ಜಾತಿ. ಹೌದು, ಅಷ್ಟೊಂದು ಪ್ರೀತಿಯಿಂದ ನಿನ್ನೊಂದಿಗೆ ಬದುಕಬೇಕು. ಸಮಾಜಕ್ಕೆ ನಮ್ಮ ಪ್ರೇಮ ಮಾದರಿ ಆಗಬೇಕು. ಪ್ರೇಮಲೋಕದಲಿ ಹೊಸ ಭಾಷ್ಯ ಬರೆಯಬೇಕೆಂಬ ನನ್ನಾಸೆಗೆ ತಣ್ಣೀರೆರಚಿದ್ದು ನಿನ್ನ ‘ಜಾತಿ’ ಮತಿ. ಆ ನಿನ್ನ ‘ಜಾತಿ’ಗೊಂದು ಧಿಕ್ಕಾರ! ಕೊನೇದಾಗಿ ಹೇಳತೀನಿ ಕೇಳು. ಜಾತಿ ಸುಟ್ಟು ಬರುವುದಾದರೇ ಬಾ…. because ನನ್ನದು ಪ್ರೀತಿಜಾತಿ!
ಜಾತಿ ಜಾತಿ ಅಂತ ನಾವು
ಜಗಳ ಮಾಡ್ತೇವ್ರಿ
ಜಾತಿವೊಳಗ ನೀತಿಮಾರ್ಗ
ಮರತೇ ಬಿಡ್ತೇವ್ರಿ…
– ಪ್ರೀತಿಯ ಜಾತಿ