ನಾನು ಓದಿದ್ದು, ಬರೆದದ್ದು ನಿನಗಾಗಿ ನಿನ್ನ ಸನಿಹ ಸಾಂಗತ್ಯಕ್ಕಾಗಿ…!
-ವಿನಯ ಮುದನೂರ್
my dear…
ನೀನು ಊರಿಗೆ ಮೊದಲಿಗಳಾಗಿ ಪಿಯುಸೀಲಿ ಮಾರ್ಕ್ಸ್ ಪಡೆದು ನಮ್ಮೂರಿನ ಹೊಸ ಡಿಗ್ರಿ ಕಾಲೇಜಿಗೆ ಎಂಟ್ರಿ ಆಗಿದ್ದೆ. ನಾನೋ ಅವರಿವರ ನೆರವು ಪಡೆದು ಪದವೀಧರ ಎಂಬ ಸರ್ಟಿಫಿಕೇಟ್ ಹಿಡಿದು ಡಿಗ್ರಿ ಕಾಲೇಜಿಂದ ಎಕ್ಸಿಟ್ ಆಗಿದ್ದೆ. ನಾನು ಹೊರ ನಡೆದ ಕಾಲೇಜಿಗೆ ನಿನ್ನ ಪಾದಾರ್ಪಣೆ… ಊರಿಗೊಬ್ಬಳೆ ಪದ್ಮಾವತಿಯಂತೆ ಕಾಲೇಜು ಕ್ವೀನ್ ಆಗಿ ಕಂಗೊಳಿಸುತ್ತಿದ್ದ ಸುಂದರಿಯ ಕಂಡಾಗೆಲ್ಲ ನಾನು ಫೇಲಾಗಬೇಕಿತ್ತು. ಒಂದೆರಡು ವರ್ಷ ಲೇಟಾಗಿಯಾದ್ರೂ ಹುಟ್ಟಬಾರದಿತ್ತೆ ಅನ್ನಿಸೋದು, ಅದ್ಯಾಕೆ ಅಷ್ಟು ಅವಸರಕ್ಕೆ ಹುಟ್ಟಿದೆನೋ… ಗೊತ್ತಿಲ್ಲ!
ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡಲ್ಲಿನ ಅಂಕಗಳನ್ನು ನೋಡಿದಾಗ ಓದಿದ್ದು ಸಾಕಿನ್ನು, ಅಣ್ಣನಿಗೆ ಹೆಗಲು ಕೊಡಬೇಕು ಎಂಬ ಚಿಂತನೆ ಮೂಡಿತ್ತು. ಅದೇ ಸಂದರ್ಭದಲ್ಲಿ ಬೇಸಿಗೆಯ ಮಳೆಯಂತೆ ಬಂದವಳು ನೀನು ಕಣ್ಮನ ತಣಿಸಿದೆ. ನಾಟ್ಯ ಮಯೂರಿಯಂತೆ ನಡೆದು ಬಂದು ನಮ್ಮ ಕಾಲೇಜು ಎಂಟ್ರಿಯಾದ ಪರಿ ಕಂಡು ಮಾರುಹೋದೆ. ಮರುಕ್ಷಣವೇ ನಾನು ಓದು ಮುಂದುವರಿಸಲು ನಿರ್ಧರಿಸಿದ್ದು ನನಗಾಗಿ ಅಲ್ಲವೇ ಅಲ್ಲ ಕಣೇ, ನಿನಗಾಗಿ ನಿನ್ನ ಸನಿಹ, ಸಾಂಗತ್ಯಕ್ಕಾಗಿ…
ರಾಜಾ ಕೂ ರಾಣಿ
ಸೇ ಪ್ಯಾರ್ ಹೋಗಯಾ
ಪಹಲಿ ನಜರ್ ಮೇ
ಪಹಲಾ ಪ್ಯಾರ್ ಹೋಗಯಾ
ಆಗತಾನೇ ಹೊಸದಾಗಿ ಆರಂಭವಾಗಿದ್ದ ಸ್ನಾತಕೋತ್ತರ ಪದವಿಗೆ ಅಡ್ಮಿಷನ್ ಮಾಡಿಸಿದವನಿಗೆ ಹಿಸ್ಟರಿ ಎಂಬುದು ಮಿಸ್ಟರಿ, ಪಾಲಿಟಿಕಲ್ ಸೈನ್ಸ್ ಶುದ್ಧ ನಾನ್ ಸೆನ್ಸ್. ಪ್ರೀತಿಯ ಬೆನ್ನು ಹತ್ತಿದವನಿಗೆ ವಿಲಿಯಂ ಶೇಕ್ಸಪಿಯರ್, ಕನ್ನಡದ ಪ್ರೇಮ ಕವಿ ನರಸಿಂಹಸ್ವಾಮಿ ಸಾಹಿತ್ಯ ಪರಮಾಪ್ತ. ಲಂಕೇಶರ ನೀಲು, ಹಾಯ್ ಬೆಂಗಳೂರಿನ ಲವ್ ಲವಿಕೆಯೇ ದಾರಿದೀಪ. ಓದುತ್ತಾ ಓದುತ್ತಾ ನನ್ನೊಳಗಿನ ಪ್ರೀತಿ ಕಾವ್ಯರೂಪಕ್ಕೆ ತಿರುಗಿತು, ನಾನೂ ಬರೆಯಲಾರಂಭಿಸಿದೆ. ನಿಜ ಹೇಳ್ತೀನಿ ಕಣೆ ನಿನ್ನಿಂದಾಗಿಯೇ ನಾನು ಕವಿಯಾದೆ. ನನ್ನ ಬರಹಕ್ಕೂ ಕೆಲವರು ಕಿವಿಯಾದರು. ಕನ್ನಡ ಮೇಷ್ಟ್ರು ಪಾಟೀಲ್ ಸರಂಥವರೇ ಶಹಭ್ಭಾಷ್ ಗಿರಿ ಕೊಟ್ಟರು. ನನಗೆ ಮಾತ್ರ ತೃಪ್ತಿ ಆಗಲೇ ಇಲ್ಲ. ನನ್ನ ಸಾಲು ನಿನ್ನ ಕಿವಿಯಲ್ಲಿ ಗಿಂವಗುಟ್ಟಬೇಕು, ನಿನ್ನ ಮನಕ್ಕಿಳಿಯಬೇಕೆಂಬ, ನಿನ್ನ ಬಾಯಲಿ ಗುನುಗುವಂತಾಗಬೇಕೆಂಬ ಬಯಕೆ.
ಮೈ ಶಾಯರ್ ತೋ ನಹಿ
ಮಗರ್ ಜಬಸೇ ದೇಖಾ ತುಜಕೂ
ಮುಜಕೂ ಶಾಯರಿ ಆಗಯೀ…
ಅದು ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ. ಅಂದರೆ ನಾನಂದು ಕಾಲೇಜಿನಿಂದ ಎಕ್ಸಿಟ್, ನೀನು ಎಂಟ್ರಿ ಆಗುವ ಕಾರ್ಯಕ್ರಮ. ನನ್ನ ಸಹಪಾಠಿಗಳೆಲ್ಲಾ ಸವಿನೆನಪುಗಳನ್ನು ನೆನದು ಭಾವುಕರಾಗಿದ್ದರು. ಕೆಲವು ಹುಡುಗಿಯರು ಕಣ್ಣೀರಿಟ್ಟದ್ದೇಕೋ ನನಗಂತೂ ಅರ್ಥವೇ ಆಗಲಿಲ್ಲ. ನಾನು ಮಾತ್ರ ನಿನಗಾಗಿ ಬರೆದ ಕಾವ್ಯದ ಚೀಟಿ ಮತ್ತೆ ಮತ್ತೆ ಓದಿ ಜೇಬಿಗಿಳಿಸಿಕೊಳ್ಳುತ್ತಿದ್ದೆ. ಬಂಧನ ಸಿನೆಮಾದ ವಿಷ್ಣವರ್ಧನನಂತೆ ರಿಹರ್ಸಲ್ ಮಾಡುತ್ತಲೇ ಇದ್ದೆ. ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರೂ ಕಾಲೇಜಿನಲಿ ಕಳೆದ ಕ್ಷಣಗಳನ್ನು ಹಂಚಿಕೊಂಡರೆ ನಾನು ಮಾತ್ರ ಪ್ರೇಮ ಕಾವ್ಯ ಓದಿದ್ದೆ. ಎಲ್ಲರೂ ಏನಂದರೋ ನಂಗೊತ್ತಿಲ್ಲ. ಐ ಡೌಂಟ್ ಕೇರ್. ನಿನಗಿಷ್ಟ ಆಯಿತು ಎಂಬುದು ನಿನ್ನ ಕಣ್ಣ ಇಷಾರೆಯೇ ಹೇಳಿತು.
ಆರಂಭ ಪ್ರೇಮದಾರಂಭ
ಶುಭಾವೇಳೆಲಿ ಪ್ರೇಮದಾರಂಭ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ
ಆರಂಭಿಕ ಪ್ರೇಮ ಅದೆಷ್ಟು ಸೊಗಸಾಗಿತ್ತೋ ಅಂತ್ಯವೂ ಅಷ್ಟೇ ಪ್ರಮಾಣದ ಕೃರಿಯಾಗಿತ್ತಲ್ಲವೇ. ಅಂತ್ಯದಲ್ಲಿ ನಿನ್ನದೇನು ಪಾತ್ರವಿಲ್ಲ ಬಿಡು ಗೆಳತಿ. ನಂಗೊತ್ತು, ನೀನು ಸಾಂದರ್ಭಿಕ ಶಿಶು! ಪ್ರೇಮಾಂತ್ಯದ ಬಗ್ಗೆ ನಿನಗೆ ನೆನಪಿಸುವ ಅಗತ್ಯವಿಲ್ಲ. ನೆನಪಿಸಿ ನೋವು ನೀಡುವ ಮನಸ್ಸೂ ನನಗಿಲ್ಲ. ಒಂದಂತೂ ಸತ್ಯ ಕಣೆ. ಪ್ರೇಮದಾರಂಭ ನನ್ನ ಪಾಲಿಗೆ ಕವಿ ಮಾರ್ಗದ ಮುನ್ನುಡಿ ಬರೆದರೆ, ಪ್ರೇಮಾಂತ್ಯ ನಿಜವಾದ ಕವಿಯಾಗಿಸಿದೆ. ಓದುವುದು, ಮನಸಿನ ಭಾವಗಳಿಗೆ ಅಕ್ಷರ ರೂಪ ಕೊಡುವ ಖುಷಿ ಪ್ರೀತಿಯಲ್ಲಿಲ್ಲ ಕಣೆ ನನ್ನಾಣೆ. ನಿನಗೂ ನಿನ್ನ ಪ್ರೀತಿಗೂ ನೂರು ಥ್ಯಾಂಕ್ಸ್. ಪ್ರೇಮಭಗ್ನಗೊಳಿಸಿದ ಗಳಿಗೆಗೆ ಕೋಟಿ ನಮನ!
ನಿನ್ನ ಕವಿ