ಜಾನುವಾರುಗಳು ರಸ್ತೆಗೆ ಬಂದರೆ 2 ಸಾವಿರ ದಂಡ-DC ಮಂಜುನಾಥ
ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರ ಸಭೆ
ಬಿಡಾಡಿದನಗಳನ್ನು ರಸ್ತೆಗೆ ಬಿಟ್ಟರೆ ದಂಡ ವಿಧಿಸಿಸಲು ಡಿಸಿ ಸೂಚನೆ
ಯಾದಗಿರಿಃ ಬಿಡಾಡಿ ದನಗಳನ್ನು ರಸ್ತೆಗೆ ಬಿಟ್ಟರೆ ಅವುಗಳನ್ನು ವಶಪಡಿಸಿಕೊಂಡು ಗೋಶಾಲೆಗೆ ಸಾಗಿಸಬೇಕು. ಅವುಗಳ ಮಾಲೀಕರು ಬಿಡಿಸಿಕೊಂಡು ಹೋಗಲು ಬಂದರೆ ಒಂದು ದನಕ್ಕೆ ರೂ.2 ಸಾವಿರದಂತೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ದನಗಳನ್ನು ರಸ್ತೆಗೆ ಬಿಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಅಲ್ಲದೇ, ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕಾರಣ ಗೋಶಾಲೆಗೆ ಸಾಗಿಸಿದ ಬಿಡಾಡಿದನಗಳನ್ನು ದಂಡ ವಿಧಿಸದೇ ಬಿಡುಗಡೆ ಮಾಡಬಾರದು.
ಬಿಡುಗಡೆ ಮಾಡುವಂತೆ ಯಾವುದೇ ಒತ್ತಡ ಬಂದರೆ ಸಂಬಂಧಪಟ್ಟ ಪೌರಾಯುಕ್ತರು ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಜಿಲ್ಲೆಯ ನಗರಸಭೆಗಳ ವ್ಯಾಪ್ತಿಯಲ್ಲಿ ಬಿಡಾಡಿದನಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಯಾದಗಿರಿ ನಗರಸಭೆ ಪೌರಾಯುಕ್ತರಾದ ಸಂಗಪ್ಪ ಉಪಾಸೆ ಅವರು ಮಾತನಾಡಿ, ಬಿಡಾಡಿದನಗಳ ಹಾವಳಿ ತಡೆಗೆ ನಗರಸಭೆ ಕೈಗೊಂಡ ಕ್ರಮ, ವಶಪಡಿಸಿಕೊಂಡ ಬಿಡಾಡಿದನಗಳನ್ನು ಒಂದು ತಿಂಗಳ ನಂತರ ನಡೆಸುವ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಯಾದಗಿರಿಯ ಹನುಮಾನ ಗೋಶಾಲೆಯ ಅಧ್ಯಕ್ಷರು ಮಾತನಾಡಿ, ಬಿಡಾಡಿದನಗಳು ಪ್ಲಾಸ್ಟಿಕ್ ಮತ್ತು ಇನ್ನಿತರ ವಸ್ತುಗಳನ್ನು ತಿನ್ನುವುದರಿಂದ ಗೋಶಾಲೆಯ ಒಣಮೇವಿಗೆ ಹೊಂದಿಕೊಳ್ಳುವುದಿಲ್ಲ. ಕೆಲವೇ ದಿನಗಳಲ್ಲಿ ಅವು ಸಾವನ್ನಪ್ಪುತ್ತವೆ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲಾಡಳಿತದ ವತಿಯಿಂದ ಮೈಲಾಪೂರ ಜಾತ್ರೆಯಲ್ಲಿ ಕುರಿಮರಿಗಳನ್ನು ಹಾರಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಈ ಸಮಯದಲ್ಲಿ ವಶಪಡಿಸಿಕೊಂಡ ಕುರಿಮರಿಗಳನ್ನು ಹರಾಜು ನಡೆಸಿದ್ದು, ರೂ.10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಶರಣುಭೂಪಾಲರೆಡ್ಡಿ ಅವರು ಮಾತನಾಡಿ, ಜಿಲ್ಲಾ ಪ್ರಾಣಿ ದಯಾ ಸಂಘವು 2014-15ನೇ ಸಾಲಿನಲ್ಲಿ ನೋಂದಣಿಯಾಗಿದೆ. ಸಂಘವನ್ನು ಲೆಕ್ಕ ಪರಿಶೋಧನೆಗೊಳಪಡಿಸಿ ನವೀಕರಿಸಲಾಗಿದ್ದು, ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಸರಕಾರದಿಂದ ರೂ.80 ಸಾವಿರ ಅನುದಾನ ಬಿಡುಗಡೆಯಾಗಿದ್ದು, ಅನುದಾನಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸಂಘದ ಬಗ್ಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದಲ್ಲಿ ರೂ.45 ಸಾವಿರ ವೆಚ್ಚದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು. ರೂ.24 ಸಾವಿರದಲ್ಲಿ ಹೋಬಳಿಮಟ್ಟದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಆಯೋಜಿಸುವುದು.
ಇನ್ನುಳಿದ ರೂ.11 ಸಾವಿರ ಬಿಡಾಡಿದನಗಳನ್ನು ರಸ್ತೆ ಮೇಲೆ ಬಿಡದಂತೆ ಜಾನುವಾರು ಮಾಲೀಕರಿಗೆ ತಿಳುವಳಿಕೆ ನೀಡಲು ಆಟೊದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮತ್ತು ಕರಪತ್ರ ಮುದ್ರಿಸಲು ಖರ್ಚು ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕರಪತ್ರದಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸೂಚಿಸಿದರು.
ಸಂಘದ ಸದಸ್ಯರಾದ ಸಂದೀಪ್ ದೋಖಾ ಜೈನ್, ಅಜಿತ್ ದೋಖಾ ಜೈನ್, ಶಹಾಪೂರದ ವಿಶ್ವ ಗೋಮಾತಾ ಗುರುಕುಲ ಗೋಶಾಲೆಯ ಅಧ್ಯಕ್ಷರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.