‘ಶಾಂತಿ’ ಇಲ್ಲದ ಶಹಾಪುರದಲ್ಲಿ ಬರೀ ಭ್ರಾಂತಿಯ ಬದುಕು…
ತಾವರೆಯೇ ಇಲ್ಲದ ತಾವರೆಕೆರೆಯಂತಾಗಿದೆ ನನ್ನ ಬದುಕು…!
ಹೌದು ಕಣೇ ಶಾಂತಿ, ನೀನಿಲ್ಲದ ನನ್ನೂರು ನನ್ನ ಪಾಲಿಗೆ ತಾವರೆಯೇ ಇಲ್ಲದ ತಾವರೆಕೆರೆಯಂತಾಗಿದೆ. ನಿನ್ಗೆ ನೆನಪಿದೆಯೇನೆ, ಎಂಥಾ ಬರಗಾಲ ಬಂದರೂ ನಮ್ಮೂರ ತಾವರೆಕೆರೆ ಬತ್ತೋದೆ ಇಲ್ಲವಲ್ಲ. ತಾವರೆ ಹೂವುಗಳು ತ್ರಿಕಾಲದಲ್ಲೂ ಇಲ್ಲಿ ಅರಳಿರುತ್ತವಲ್ಲ ಅದ್ಹೇಗೆ ಸಾಧ್ಯ ಅಂತಾ ನೀನೊಮ್ಮೆ ಕೇಳಿದ್ದೆ. ಅದಕ್ಕೇ ಕಣೆ ಈ ಕೆರೆಗೆ ತಾವರೆಕೆರೆ ಅಂತಾ ಕರೆಯೋದು ಅಂತ ಹೇಳಿ ನಿನ್ನ ತಲೆಗೊಂದು ಸಣ್ಣ ಏಟು ಕೊಟ್ಟಿದ್ದೆ.
ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು…
ಅದಿರಲಿ ಬಿಡು, ನಿನ್ನೊಂದಿಗೆ ಕಳೆದ ಸುಮಧುರ ಕ್ಷಣಗಳ ನೆನಪಿನ ಬುತ್ತಿ ಬಿಚ್ಚುತ್ತ ಹೋದರೆ ಜೀವನ ಪರ್ಯಂತ ಆಹಾರವೇ ಬೇಕಿಲ್ಲ. ಬರೀ ನೆನಪಿನ ಸೌಧ ಕಟ್ಟುತ್ತಲೇ ಬದುಕಿ ಬಿಡಬಹುದು. ಈಗಲಾದರು ನಿಜ ಹೇಳು ಗೆಳತಿ, ನಮ್ಮ ಡಿಗ್ರಿ ಕಾಲೇಜು ಬಳಿ ನಿಂತಿದ್ದಾಗೊಮ್ಮೆ ಏಕಾ ಏಕಿ sleeping ಬುದ್ಧನ ದೃಶ್ಯ ನೆನೆದು ಅಲ್ಲಿಗೆ ಹೋಗಲೇಬೇಕು ಅಂತ ಹಠ ಹಿಡಿದಿದ್ದೆಯಲ್ಲ. ಕಾಲೇಜಿಗೆ ಚಕ್ಕರ್ ಹಾಕಿ ಮರುದಿನವೇ ನಾವಿಬ್ಬರು ಬುದ್ಧನ ಬೆಟ್ಟ ಹತ್ತಿದ್ದೆವು. ನಡು ದಾರಿಯಲ್ಲೇ ಸೋತು ಇನ್ನಾಗದು ಇದು ಎವರೆಸ್ಟ್ ಗಿಂತಲೂ ಎತ್ತರ ಅಂತ ಕುಳಿತು ಬಿಟ್ಟಿದ್ದಿಯಲ್ಲ ಅದೊಂದು ದೊಡ್ಡ ಬಂಡೆಗಲ್ಲಿನ ಮೇಲೆ. ಆ ಬಂಡೆಗಲ್ಲಿನ ಮೇಲಾಣೆ, ಅಂದು ನಾನು ನಿಜಕ್ಕೂ ಮದ್ವೆ ಅಂತ ಆದ್ರೆ ನಿನ್ನ ಜೊತೆ ಮಾತ್ರ. i love you ಕಣೋ ಅಂತ ಅಪ್ಪಿಕೊಂಡಿದ್ದೆಯಲ್ಲ. atlest ಆವತ್ತಿಗಾದರೂ ನಿನ್ನದು real love ಆಗಿತ್ತಾ…?
ಅರೇ ಬುದ್ಧನ ಬೆಟ್ಟಕ್ಕೆ ಹೋಗುತ್ತಿದ್ದಂತೆ ನೀನು ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಸದಾ ಗುಂಯಿಗುಟ್ಟುತ್ತಲೇ ಇರುತ್ತದೆ ಕಣೇ. ಈ ಬುದ್ಧನ ದೃಶ್ಯ ದೂರದಿಂದಲೇ ನೋಡಬೇಕು. ಕೆಇಬಿ ಬಳಿಯ ರಸ್ತೆ ಮೇಲೆ ನಿಂತು ನೋಡಿದರೇನೆ ಚಂದ. ಅದಕ್ಕಿಂತಲೂ ಹಳಿಸಗರ ಬಳಿಯ ಸೇತುವೆ ಅಥವಾ ಮಲ್ಲಯ್ಯನ ಗುಡ್ಡ ಹತ್ತಿ ನೋಡಿದರೆ ನಮ್ಮೂರ ಬುದ್ಧನ ದೃಶ್ಯ ಚಂದಿರನಷ್ಟೇ ಮನಮೋಹಕ ಅಂದಿದ್ದೆಯಲ್ಲ. ಆ ಮಾತಿನ ಒಳಾರ್ಥವೇನು ಈಗಲಾದರೂ ನಿಜ ಹೇಳು. ಅದು ನಿನಗೆ ನೀನೆ ಹೋಲಿಸಿಕೊಂಡು ಹೇಳಿರುವ ಗೂಡಾರ್ಥದ ಮಾತೇನೆ ನನ್ನ ಹೃದಯ ಕದ್ದ ರಾಕ್ಷಸಿ…
ನನ್ನ ಮೇಲೆ ಪ್ರೀತಿ, ನನ್ನ ಜೊತೆ ಮದುವೆ ಒತ್ತಟ್ಟಿಗಿರಲಿ. ದಸರಾ ರಜೆಗೆಂದು ಊರಿಗೆ ಹೋದವಳು ಒಮ್ಮೆಲೆ angagement ಮುಗಿಸಿಕೊಂಡು ಬಲು ಖುಷಿಯಿಂದಲೇ ಮದುವೆಗೇ ಸಿದ್ಧವಾಗಿರುವೆಯಲ್ಲ. ಅಲ್ಲ, ನನ್ನ ದೋಸ್ತ್ ನ ಅಂಗಡಿಯಲ್ಲೇ ಬಟ್ಟೆ, ಬರೆ ತೆಗೆದುಕೊಂಡಿದ್ದೀಯಾ. ಆದ್ರೂ ಒಂದೇ ಒಂದು ಸುಳಿವು ನೀಡಿಲ್ಲವಲ್ಲ. ನಿನ್ನದು ನಿಜವಾದ ಪ್ರೀತಿಯೇ? ನೀನು ಹೇಳಿದ್ದೇ ನಿಜ ಬಿಡು. ದೂರದ ಬುದ್ಧನೇ ಚಂದ..! ನಿನ್ನ ಪ್ರೀತಿಯನ್ನು ಕೇವಲ whatsappನಲ್ಲಿ ಮಾತ್ರ ನೋಡಬೇಕು. ಅಲ್ಲವೇ?. anyway ನಿನಗೆ ಶುಭವಾಗಲಿ… ಆದರೆ, ನೆನಪಿರಲಿ ಶಾಂತಿ, ನೀನಿಲ್ಲದ ಶಹಾಪೂರದಲ್ಲಿ ನನ್ನದು ಬರೀ ಭ್ರಾಂತಿಯ ಬದುಕು…
ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ
-ನಿನ್ನವ
ಬಹಳ ಚನ್ನಾಗಿ ಬರೆದಿದ್ದೀರ ನನ್ನ ಹಳೆ ನೆನಪು ಮತ್ತೆ ಮನದಲ್ಲಿ ಬಂದು ಮುಖದಲ್ಲಿ ಮುಗುಳು ನಗೆ ತರೆಸಿದ್ದಕ್ಕೆ ತುಂಬಾ ಧನ್ಯವಾದಗಳು ಗೆಳೆಯ… 👍😢😢