ಒಂದೇ ಒಂದ್ಸಲ ಮೇಲುಗಿರಿಗೆ ಹೋಗಿ ಬರೋಣ ಕಣೋ ಪ್ಲೀಸ್…
ಮೇಲುಗಿರಿಯಾಣೆ ನೀನು ವರವಾದೆ ನನಗೆ…
ಸಿದ್ಧಲಿಂಗೇಶ್ವರ ಬೆಟ್ಟದ ಮಾವಿನತೋಪು, ಅಲ್ಲಿ ಕಲ್ಲು ಬಂಡೆಗಳ ಮದ್ಯೆ ಮೊಗ್ಗಿನ ಜಡೆ ಆಕಾರದಲಿ ಹರಿಯುವ ಹಳ್ಳ, ಝುಳು ಝುಳು ನೀರಿನ ನಾದ. ಕೋಗಿಲೆ ಗಾನ, ಆಹಾ ಮಾವಿನ ಘಮ ಘಮ, ಆಗಾಗ ಕೇಳಿಬರುವ ಘಂಟೆಯ ಝೇಂಕಾರ… ಆ ಅದ್ಭುತ ಪರಿಸರದಲ್ಲಿ ಪವಿತ್ರ ಪ್ರೇಮಪಕ್ಷಿಗಳು ಸ್ವಚ್ಛಂದವಾಗಿ ಹಾಡುತ್ತಿದ್ದರೆ ದೇವಲೋಕವೇ ಕರಗಿ ನೀರು ನೀರು. ಮಾವಿನ ಮರಕ್ಕೆ ಜೋಕಾಲಿ ಹಾಕಿ ತುಂಟಾಟ ಆಡುತ್ತ ತೂಗಿದಾಗ ನಿಜಕ್ಕೂ ನಾನೂ ಈ ಲೋಕವೇ ಮರೆತಿದ್ದೆ ಕಣೋ. ನಾವಿಬ್ಬರು ಕೃಷ್ಣ – ರಾಧೆಯರಾಗಿ ಧರೆಗಿಳಿದ ಮಧುರ ಅನುಭವವದು…
ತೂಗುಮಂಚದಲ್ಲಿ ಕೂತು
ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತ್ತಿದ್ದಳು…
ಅಲ್ಲಾ ಕಣೋ ನಾವು ಮೊದಲ ಬಾರಿಗೆ ಏಳು ಬೆಟ್ಟವನೇರಿ ಮೇಲುಗಿರಿ ಪರ್ವತಕ್ಕೆ ಹೋಗಿದ್ದು ಇದೇ ತಿಂಗಳಲ್ಲೇ ಅಲ್ವಾ. ಅರೇ… ಇದೇ ದೀಪಾವಳಿ ಸಂಧರ್ಭದಲ್ಲೇ ಕಣೋ… ಅಯ್ಯೋ… ಇದೇ ದಿನವೇ ಹೋಗಿದ್ವಿ ಕಣೋ… ನೋಡು ಸರಿಯಾಗಿ 10ವರ್ಷದ ಬಳಿಕ ಅದೇ ಸುದಿನ ನನಗೆ ನಮ್ಮ ಪ್ರೀತಿಯ ಆರಂಭದ ದಿನ ನೆನಪಾಗಿದೆ. ಕಣ್ಣು ಕಲಿತದ್ದು, ಸಣ್ಣ ಪ್ರೇಮ ಪತ್ರ ಓದಿಕೊಂಡದ್ದು… ಹೇಯ್… ನಿನ್ಗೇ ಹೇಳ್ತಿರೋದು. ಇತ್ತೀಚೆಗೆ ನಿನ್ನ ಆವರಿಸಿಕೊಂಡಿರುವ ದುರ್ವಾಸಮುನಿಯ ನೂಕಾಚೆ ದೂರ. ತಲೆಯಲ್ಲಿನ Memory ಚಿಪ್ ಒಮ್ಮೆ open ಮಾಡಿಕೋ. ಸರಿಯಾಗಿ 10ವರ್ಷದ ಹಿಂದಿನ ದಿನದ ಫೋಲ್ಡರನ್ನೊಮ್ಮೆ ಓಪನ್ ಮಾಡಿ play ಮಾಡು… Please ಕಣೋ…
ಮೇರು ಗಿರಿಯಾಣೆ
ನೀಲಿ ಕಡಲಾಣೆ
ನೀನು ವರವಾದೆ ನನಗೆ…
ಅದೆಷ್ಟು ಪ್ರೇಮಪತ್ರಗಳು ನಮ್ಮಿಬ್ಬರ ಮದ್ಯೆ ಹರಿದಾಡಿದವು. ಪ್ರೀತಿ, ವಿರಹ, ಕೋಪ, ತಾಪ, ನೋವು, ನಲಿವು ಅವು ಪತ್ರಗಳಲ್ಲ ತೆರೆದ ಹೃದಯಗಳು. ಅಲ್ವಾ?. ಆದರೆ, ಅದ್ಯಾಕೋ ಮದ್ವೆ ಆದ ಬಳಿಕ ಪ್ರೇಮ ಪತ್ರಗಳು ಬರೆಯೋಕಾಗಲೇ ಇಲ್ಲ . ಹಾಳಾದ್ದು mobile ಬಂದು love letters ಗೆ ಬ್ರೇಕ್ ಹಾಕಿತು!. ಇತ್ತೀಚೆಗೆ msg ಕೂಡ ಡ್ರಾಪ್ ಆಗಿವೆ ಕಣೋ. ಆದರೆ, ನಿನ್ನ mobile ಮಾತ್ರ ಸದಾ ರಿಂಗಣಿಸುತ್ತಲೇ ಇರುತ್ತದೆ. ನಿನ್ನ ಕೈಬೆರಳುಗಳು ಸದಾ mobile ನ ಕೀಲಿಮಣಿ ಮೇಲೆ ಕುಣಿಯುತ್ತವೆ. ನಾನು ಮಲಗಬೇಕಾದ ಎದೆಗೆ, ನನ್ನ ಬೆರಳು ಹಿಡಿದ ಮುದ್ದು ಬೆರಳುಗಳಿಗೀಗ ಮೊಬೈಲೇ ಮಡದಿಯಾಗಿದೆ. Just a joke…
ನಾನ್ಯಾವತ್ತು ಏನು ವಿಷಯ ಅಂತ ನಿನ್ನ ಕೇಳಿಲ್ಲ, ಕೇಳೋದು ಇಲ್ಲ ಬಿಡು. ನಿನ್ನ ಮೇಲೆ ನನಗೆ ಒಂದಿನಿತೂ ಅನುಮಾನ ಖಂಡಿತವಾಗಿಯೂ ಇಲ್ಲ ಕಣೋ. ನೀನು ಎಂದೆಂದಿಗೂ ನನ್ನವನೇ. ನನಗೋಸ್ಕರವೇ ಹುಟ್ಟಿದವನು. ನಮ್ಮ ಪ್ರೀತಿ ಪವಿತ್ರ, ನಮ್ಮ ಪ್ರೇಮ ಅಮರ… ಇರಲಿ ಬಿಡು ಮೊದಲಿನಂತೆ ಪ್ರೇಮ ಪತ್ರ ಬರೆಯೋಕಾಗ್ತಿಲ್ಲ ಕಣೋ, ಪತ್ರ ದಿಕ್ಕು ತಪ್ಪೀತು…? ನಿನ್ನ ಮನಸ್ಸಿಗೆ ನೋವು ನೀಡೀತು…? Sorry.. ನೀನು ಸದಾ ಖುಷಿಯಾಗಿರಬೇಕು ಅನ್ನೋದಷ್ಟೇ ನನ್ನ ಆಸೆ… ನಿನ್ನಿಷ್ಟದಂತೇ ಇರು… ಕೈಚಾಚಿದಾಗ ನನ್ನ ಕೈಗೆಟುಕುವಂತಿರು ಸಾಕು!
ಮತ್ತೆ ಒಂದೇ ಒಂದ್ಸಲ ಹುಣ್ಣಿಮೆಯ ಬೆಳಕಿನಲಿ ಮೇಲುಗಿರಿಗೆ ಹೋಗಿ ಬರೋಣವಾ? Plz… reply me!
– ನಿನ್ನವಳು
Tumba chennaagide sir
Thank u sir