‘ಲವ್ ಜಿಹಾದ್’ ಅಲ್ಲ ಲವ್ ಜಿಂದಾಬಾದ್ : ಇದು ಪ್ರೇಮಕಥೆ ಅಲ್ಲ ರಿಯಲ್ ಕಹಾನಿ!
ಅವರಿಬ್ಬರೂ ಬಡವರ ಮನೆ ಮಕ್ಕಳು. ಪ್ರೀತೀಲಿ ಮಾತ್ರ ಸಾಟಿಯಿಲ್ಲದ ಸಿರಿವಂತರು. ಜಾತಿ, ಧರ್ಮದ ಗೋಡೆ ಕೆಡವಿ ಪ್ರೇಮ ಪತಾಕೆ ಹಾರಿಸಿದ ಪ್ರೇಮಸೇನಾನಿಗಳು. ಅವರಿಬ್ಬರ ಧರ್ಮ ಬೇರೆ ಬೇರೆ ಅಂತ ಬೇರೆಯವರು ಭಾವಿಸಬೇಕಷ್ಟೇ. ಅಸಲಿಗೆ ಆ ಜೋಡಿ ಪ್ರೀತಿ ಅಂಕುರಿಸಿದ ಕ್ಷಣವೇ ಈ ಸಮಾಜ ಸೃಷ್ಠಿಸಿದ ಧರ್ಮದ ಮುಖವಾಡ ಕಳಚಿ ಪ್ರೇಮಧೀಕ್ಷೆ ಸ್ವೀಕರಿಸಿದೆ.
ಅವನು ಚಿಕ್ಕವಯಸ್ಸಿನಿಂದಲೇ ಹಮಾಲಿ ಕೆಲಸ ಮಾಡಿಕೊಂಡು ಬದುಕಿನ ಬಂಡಿ ಓಡಿಸುವ ಶ್ರಮಿಕ. ಇವಳು ಕಾಯಕ ಜೀವಿಯ ಕಂಡು ಮನಸೋತ ಪ್ರೇಮಕನ್ಯೆ. ಕಣ್ಣು ಕಣ್ಣು ಕಲಿತು ಮೂಡಿದ ಸ್ನೇಹ ಪ್ರೀತಿಗೆ ತಿರುಗಿದೆ. ಭಾವ ಬೆಸೆದು ಮನಸ್ಸುಗಳು ಒಂದಾಗಿವೆ. ಪ್ರೇಮಲೋಕದಲ್ಲಿ ಪ್ರೇಮವೇ ಧರ್ಮವಾಗಿ ದರ್ಬಾರು ನಡೆಸಿದೆ. ಪ್ರೇಮಾಗ್ನೆಗೆ ಇಬ್ಬರೂ ಪ್ರೀತಿಯಿಂದಲೇ ತಲೆ ಬಾಗಿದ್ದಾರೆ.
ನಾಲ್ಕು ವರ್ಷಗಳ ಪವಿತ್ರಪ್ರೇಮದ ಮೇಲೆ ಅದ್ಯಾರ ಕೆಂಗಣ್ಣು ಬಿತ್ತೋ ಗೊತ್ತಿಲ್ಲ. ಕೋಟೆನಾಡಿನಲ್ಲಿ ವಾಸವಾಗಿದ್ದ ಯುವತಿಯ ಕುಟುಂಬ ಕಾರಣಾಂತರಗಳಿಂದ ಚಿಕ್ಕಮಗಳೂರಿಗೆ ಶಿಫ್ಟ್ ಆಗುತ್ತದೆ. ಪ್ರೇಮಿಗಳು ಆತಂಕಕ್ಕೀಡಾಗುತ್ತಾರೆ. ಆದರೆ ಅಮರ ಪ್ರೇಮ ಮತ್ತು ಪರಸ್ಪರ ನಂಬಿಕೆ ಪ್ರೀತಿಯ ಬಂಧನ ಶಾಶ್ವತವಾಗುಳಿಸಿದೆ. ಊರು ಬಿಟ್ಟು ಮೂರು ವರ್ಷಗಳೇ ಗತಿಸಿ, ತಿಂಗಳುಗಟ್ಟಲೇ ಇಬ್ಬರ ನಡುವೆ ಸಂಪರ್ಕವೇ ಇಲ್ಲದೆ ವೇದನೆ, ವಿರಹ ಕಾಡಿದೆ. ಆದರೆ, ಪ್ರೀತಿ ಮಾತ್ರ ಹಸಿರಾಗಿಯೇ ಉಳಿದಿದೆ.
ಪರಧರ್ಮೀಯ ಹಮಾಲಿ ಕೆಲಸ ಮಾಡುವವನ ಜೊತೆ ಯುವತಿಯ ಪ್ರೀತಿ ವಿಷಯ ತಿಳಿದು ಪೋಷಕರು ಕೆಂಡಾಮಂಡಲವಾಗುತ್ತಾರೆ. ಮನೆ ಎಂಬುದು ರಣಾಂಗಣ ಆಗುತ್ತದೆ. ರಹಸ್ಯವಾಗಿ ಮದುವೆ ಮಾಡುವ ಕಾರ್ಯ ಶುರುವಾಗುತ್ತದೆ. ಆದರೆ, ಮದುವೆ ಅಂತ ಆಗುವುದಾದರೆ ಪ್ರೀತಿಸಿದವನ ಜೊತೆಗೆ ಮಾತ್ರ ಎಂದು ನಿರ್ಧರಿಸಿದ ಯುವತಿ ಪ್ರಿಯತಮನನ್ನು ಸಂಪರ್ಕಿಸುತ್ತಾಳೆ. ಮರು ಮಾತನಾಡದೆ ದುರ್ಗಕ್ಕೆ ಬರಲು ಹೇಳಿದ ಪ್ರಿಯಕರ ಪ್ರೇಮ ಬದ್ಧತೆ ನಿಭಾಯಿಸುತ್ತಾನೆ.
ಗೆಳೆಯರ ಜೊತೆ ಊರ ಸಮೀಪದ ರಂಗಸ್ವಾಮಿ ಬೆಟ್ಟಕ್ಕೆ ಕರೆದೊಯ್ದು ಸರಳ ವಿವಾಹವಾಗುತ್ತಾನೆ. ಆದರೆ, ಯುವತಿಯ ಪೋಷಕರು ಮಾತ್ರ ಸುಮ್ಮನಾಗುವುದೇ ಇಲ್ಲ. ಬದಲಾಗಿ ಚಿಕ್ಕಮಗಳೂರಿನಲ್ಲಿ ಯುವಕನ ವಿರುದ್ಧ ಯುವತಿಯನ್ನು ಅಪಹರಿಸಿದ ಪ್ರಕರಣ ದಾಖಲಿಸುತ್ತಾರೆ. ಅಷ್ಟಕ್ಕೆ ಸುಮ್ಮನಾಗದೆ ದುರ್ಗದಲ್ಲಿನ ಯುವಕನ ಮನೆಗೇ ಬಂದು ಪೋಷಕರಿಗೆ ಪ್ರಾಣ ಬೆದರಿಕೆ ಒಡ್ಡುತ್ತಾರೆ. ಪರಿಣಾಮ ಪ್ರೇಮಜೋಡಿ ಅನಿವಾರ್ಯವಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಗಿದೆ.
ಲವ್ ಜಿಂದಾಬಾದ್ ಎಂಬ ಮಂತ್ರ ಪಠಿಸುತ್ತಿರುವ ಪ್ರೇಮಜೋಡಿ ಮಾತ್ರ ಯಾವುದಕ್ಕೂ ನಾವು ಜಗ್ಗುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. ಆದರೆ, ಈ ಸಮಾಜದಲ್ಲಿ ಧರ್ಮದ ಗೋಡೆ ಕೆಡವಿ ಪ್ರೇಮ ಜಯಿಸುವುದು ಇಷ್ಟೊಂದು ಕಷ್ಟವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟ ಪಟ್ಟು ಮದುವೆ ಆಗಿ ಹತ್ತು ದಿನಗಳೇ ಕಳೆದಿವೆ. ಆದರೂ ಕಷ್ಟಪಟ್ಟು ಕದ್ದುಮುಚ್ಚಿ ಬದುಕು ನಡೆಸುವಂಥ ಸ್ಥಿತಿ ಬಂದೊದಗಿದೆ. ನಮ್ಮ ಪಾಡಿಗೆ ನಮಗೆ ಬದುಕಲು ಬಿಡಿ ಎಂದು ಪ್ರೇಮಿಗಳು ಮನವಿ ಮಾಡಿದ್ದಾರೆ.
-ವಿ