ಕನಸು ಕಾಣಿ.. ಹಗಲು ಕನಸು ಬೇಡ
ದಿನಕ್ಕೊಂದು ಕಥೆ
ಹಗಲು ಕನಸು
ಒಂದು ಹಳ್ಳಿಯಲ್ಲಿ ಬಡ ಬ್ರಾಹ್ಮಣನೊಬ್ಬನಿದ್ದ. ತಾನೊಬ್ಬ ಶ್ರೀಮಂತನಾಗಿ ಐಷಾರಾಮದ ಬದುಕಿನಿಂದ ಸದಾ ಮೋಜಿನಿಂದ ಬದುಕಬೇಕೆಂದು ಸದಾ ಕನಸು ಕಾಣುತ್ತಲೇ ಎಲ್ಲರ ಮನೆಗಳಿಗೂ ಆತ ಬೇಡಲು ಹೋಗುತ್ತಿದ್ದ.
ಒಂದು ದಿನ ಒಬ್ಬಾಕೆ ಅವನಿಗೆ ಎರಡು ಸೇರು ಗೋಧಿ ಹಿಟ್ಟನ್ನು ಕೊಟ್ಟಳು. ಬ್ರಾಹ್ಮಣ ಸಂತೋಷದಿಂದ ಈ ಹಿಟ್ಟನ್ನು ಮನೆಗೆ ಕೊಂಡೊಯ್ದು ಒಂದು ಪುಟ್ಟ ಮಡಿಕೆಯಲ್ಲಿ ತುಂಬಿಸಿದ. ಅದಕ್ಕೆ ಹಗ್ಗ ಕಟ್ಟಿ ಛಾವಣಿ ಮೇಲೆ ತೂಗೂ ಹಾಕಿದ. ಬಳಿಕ ಸಂತೋಷದಿಂದ ಹಗಲು ಕನಸು ಕಾಣುತ್ತಲೇ ಮಂಚದ ಮೇಲೆ ಮಲಗಿದ.
“ನಾನು ಈ ಗೋಧಿ ಹಿಟ್ಟನ್ನು ಒಳ್ಳೆ ಬೆಲೆಗೆ ಮಾರುಕಟ್ಟೆಗೆ ಹೋಗಿ ಮಾರುವೆ. ಒಳ್ಳೆ ಲಾಭ ಬರುತ್ತದೆ. ಆ ಹಣದಿಂದ ಒಂದು ಜೊತೆ ಮೇಕೆ ಕೊಳ್ಳುವೆ. ಅವುಗಳನ್ನು ಚೆನ್ನಾಗಿ ಸಾಕಿ ಮರಿಗಳನ್ನು ಮಾಡ್ತೀನಿ. ಮೇಕೆಯ ಹಾಲೂ ಮಾರುವೆ, ಆ ಹಣದಿಂದ ಹಸುಗಳನ್ನು ಪಡೆದು ಸಾಕುವೆ. ಹಾಲು, ಬೆಣ್ಣೆ, ಮೊಸರು ಎಲ್ಲವನ್ನೂ ಮಾರುವೆ. ಆಗ ಕೈತುಂಬ ಹಣ ಬರುತ್ತದೆ . ಅದರಿಂದ ಚಿನ್ನಾಭರಣಗಳನ್ನು ಮಾಡಿಕೊಳ್ಳುವೆ.
ವಿದೇಶಕ್ಕೂ ಹೋಗಿ ವ್ಯಾಪಾರ ಮಾಡುವೆ. ಸಿರಿವಂತ ಹುಡುಗಿ ಜತೆ ಮದುವೆಯಾಗುವೆ. ಆಗ ಒಬ್ಬ ಮಗ ಹುಟ್ತಾನೆ. ಆತ ತುಂಟನಾಗಿ ಆಚಿಂದೀಚೆಗೆ ಓಡಾಡುತ್ತಾನೆ. ಆಗ ಆತ ಕೋಪಗೊಂಡರೆ ನನಗೂ ಕೋಪ ಬರುತ್ತೆ. ಜಾಸ್ತಿ ಒರಟುತನ ತೋರಿದಾಗ ಒಮ್ಮೆ ಒದ್ದೇ ಬಿಡುವೆ … ” ಎಂದು ಜೋರಾಗಿಯೇ ಮಡಕೆಯನ್ನು ಒದ್ದೇ ಬಿಟ್ಟನು. ಮಡಕೆ ಚೂರಾಯಿತು . ಮೈಯೆಲ್ಲಾ ಹಿಟ್ಟು ಚೆಲ್ಲಿತು.
ಸೋಮಾರಿಯಾಗಿ ಕನಸು ಕಾಣುತ್ತ ಮಲಗುವುದಕ್ಕಿಂತ ಏನಾದರೂ ಕೆಲಸ ಮಾಡಬೇಕೆಂಬ ವಿಷಯ ಆ ಬಡಬ್ರಾಹ್ಮಣನಿಗೆ ತಿಳಿಯಲೇ ಇಲ್ಲ ಕೊನೆಗೂ.
ನೀತಿ :– ಪ್ರತಿಯೊಬ್ಬ ವ್ಯಕ್ತಿಯೂ ಕನಸು ಕಾಣಬೇಕು, ಆದರೆ ಹಗಲು ಕನಸು ಕಾಣಬಾರದು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.