‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠ ಕಥಾಂಕುರ ಭಾಗ-3
ಆಶುವಿಗೆ ಅದೇ ಊರಿನಲ್ಲಿ ಇಂಜಿನಿಯರಿಂಗ್ ಸೀಟ್…ಸಿಕ್ಕಾಗಂತೂ ತಮ್ಮ ನನ್ನನ್ನೂ ಬಿಟ್ಟು ಎಲ್ಲೂ ಹೋಗಲಿಲ್ಲಾ ಎಂಬ ಸಮಾಧಾನದ ನಿಟ್ಟುಸಿರು ಮಾನಸಿಯಲ್ಲಿ ಮೂಡಿತ್ತು.
ಮನೆಯಲ್ಲಿ ದಿನವು ಮನೆಗೆಲಸ ಮಗಳು ಗೌತಮಿ ಹಾಗೂ ಆಶಿಶನ ಬೇಕು ಬೇಡಗಳನ್ನು ಪೂರೈಸುತ್ತಿದ್ದ ಅವಳಿಗೆ ತನ್ನ ಸಂಸಾರವೇ ಜಗತ್ತಿನಲ್ಲಿ ತುಂಬಾ ಸುಂದರ ಎನಿಸುತ್ತಿತ್ತು. ಆಗಾಗ ಅಕ್ಕಪಕ್ಕದವರು ತಮ್ಮ ಮನೆಯ ಗಂಡಸರ ಬಗ್ಗೆ ಅತ್ತೆ ಮಾವನವರ ಬಗ್ಗೆ ಹೇಳುತ್ತಿದ್ದುದ್ದನ್ನು ಕೇಳಿದ್ದ ಮಾನಸಿಗೆ ನನಗೆ ಯಾವುದೆ ಯೋಚನೆಯೆ ಇಲ್ಲಾ. ನಮ್ಮದೆ ಸುಖಿ ಸಂಸಾರ ಎಂದೆನಿಸಿತ್ತು.
ಮನೆಯಲ್ಲಿ ಪತಿರಾಯ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲಾ ಎಲ್ಲದರಲ್ಲೂ ಧಾರಾಳತನದಿಂದ ಖರ್ಚು ಮಾಡುತ್ತಲೆ ಇದ್ದ. ಆಶಿಶನನ್ನು ಇಂಜಿನಿಯರಿಂಗ್ ಓದಲು ಕಾಲೇಜಿಗೆ ಹೋದಾಗ ದಿನವು ಅವನಿಗೆ ಖರ್ಚಿಗಾಗಿ ಮಧುಕರ ಪಾಕೇಟ್ ಮನಿ ಕೊಡುತ್ತಿದ್ದ.
ಮಾನಸಿ ಒಮ್ಮೊಮ್ಮೆ ಮಧುಗೆ ಅವಶ್ಯಕತೆಯಿದ್ದಷ್ಟು ಕೊಡಿ ಜಾಸ್ತಿ ಬೇಡ ಹುಡುಗ ದಾರಿ ತಪ್ಪಿಯಾನೆಂದು ಗದರುತ್ತಿದ್ದಳು. ಇತ್ತಿಚೇಗೆ ಆಶು ಗೆಳಯರ ರೂಂಗೆ ಹೋಗಿ ಓದುತ್ತೇನೆ ಎಂದು ಹೇಳುತ್ತಿದ್ದ, ಮಾನಸಿ ಅಲ್ಲಿಗೆ ಏಕೆ ಹೋಗಬೇಕು ಮನೆಯಲ್ಲಿ ಅವನಿಗೆಂದೆ ಮಹಡಿಯಲ್ಲಿ ಕೊಠಡಿಯಿದೆ. ಅಲ್ಲಿಯೇ ಓದು ಎಂದು ಹೇಳುತ್ತಿದ್ದಳು.
ಆದರೆ ಮಧು ಹೇಳಿದ್ದ ಅವನಿಗೆ ಹೆಚ್ಚು ತಡೆಗೋಡೆಗಳನ್ನು ನಿರ್ಮಿಸಬೇಡ. ಅವನೇನು ಚಿಕ್ಕ ಮಗುವಲ್ಲಾ ಒಳ್ಳೆಯದು ಕೆಟ್ಟದ್ದು ಗೊತ್ತಿದೆ. ನೀನೇ ಬೆಳೆಸಿದ ಕೂಸಲ್ಲವೇ, ಅವನ ಮೇಲೆ ಅನುಮಾನ ದೃಷ್ಟಿ ಬೀರಬೇಡ ಎಂದು ಹೇಳಿದ್ದರಿಂದ ಮಾನಸಿ ಸುಮ್ಮನಿದ್ದಳು.
ಕಾಲೇಜಿಗೆ ಹೋಗಿ ಬರಲು ಆಶಿಶ್‍ಗೆ ಭಾವ ಹೊಸ ಬೈಕ್ ಕೊಡಿಸಿದ್ದರು. ಆದ್ದರಿಂದ ಆಶುಗೆ ಅತೀವ ಆನಂದವಾಗಿತ್ತು. ಕಾಲೇಜಿನಲ್ಲಿ ಎಲ್ಲಾ ಗೆಳೆಯರಂತೆ ವೇಳೆಗೆ ಸರಿಯಾಗಿ ಕಾಲೇಜಿಗೆ ಹೋಗಬಹುದು. ಸಮಯ ಉಳಿಯುವದರಿಂದ ಅವರೊಂದಿಗೆ ಹರಟಬಹುದು. ಎಲ್ಲಿಯಾದರೂ ತಿರುಗಾಡಬಹುದು ಎಂದುಕೊಂಡ ಆಶಿಶ್, ತನ್ನ ಆಸೆಯನ್ನು ಹೇಳುವ ಮೊದಲೆ ಮಧು ಅದನ್ನು ಪೂರೈಸುತ್ತಿದ್ದ ಅವನ ಅಗತ್ಯಗಳನ್ನು ಅರಿತು ಅವನಿಗೆ ಯಾವುದೇ ತೊಂದರೆ ಉಂಟಾಗದಂತೆ ನೋವಾಗದಂತೆ ನೋಡಿಕೊಳ್ಳುತ್ತಿದ್ದ.
ಮೊದಲು ಎರಡು ವರ್ಷ ಆಶು ತನ್ನ ಪಾಡಿಗೆ ತಾನು ಓದಿಕೊಂಡು ಚೆನ್ನಾಗಿದ್ದ. ಆದರೆ ಕೆಲವು ಸ್ನೇಹಿತರು ಅವನ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದರು. ಸಿಗರೇಟ್ ಸೇದುವಂತೆ ಪ್ರೇರೆಪಿಸುತ್ತಿದ್ದರು, ಅವನು ಸೇದಲ್ಲಾ ಎಂದಾಗ ತಮಾಷೆ ಮಾಡಿ ನಕ್ಕರು. ನಿಧಾನವಾಗಿ ಸ್ನೇಹಿತರು ತಪ್ಪು ದಾರಿ ತುಳಿಯುವಂತೆ ಮಾಡಿದರು.
ರಾತ್ರಿ ಕಂಬೈನ್ಡ್ ಸ್ಟಡಿ ನೆಪದಲ್ಲಿ ಮಧ್ಯಪಾನ ಮಾಡಿಸಿದರು. ಇತ್ತೀಚೆಗೆ ಆಶು ರಾತ್ರಿ ತಡವಾಗಿ ಮನೆಗೆ ಬರುವದು ಹೆಚ್ಚಾಗಿತ್ತು. ಹಾಗೇ ಬಂದಾಗಲೆಲ್ಲಾ ಮಾನಸಿಯು ಬಾಗಿಲು ತೆರೆಯುತ್ತಿದ್ದಳು. ಯಾಕೋ ತಡವಾಗಿ ಬಂದೆ ಇಷ್ಟೂ ಹೊತ್ತು ಎಲ್ಲಿ ಹೋಗಿದ್ದೆ ಎನ್ನುವ ಅವಳ ಪ್ರಶ್ನೆಗೆ.. (ಮುಂದುವರೆಯುವುದು.)
–ಮಂಜುನಾಥ ಸಾಲಿಮಠ
ಪತ್ರಕರ್ತ, ಲೇಖಕ ಮಸ್ಕಿ.
ಉತ್ತಮ ಬರಹ ಸರ್
Thank u sir..