‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠರ ಕಥಾಂಕುರ ಭಾಗ-6 ಮುಕ್ತಾಯ
ಮಾನಸಿ ಕಂಗಳಲ್ಲಿ ಸಂತಸದ ಕಣ್ಣೀರು ಬಂದಿದ್ದೇಕೆ.?
ನಿನ್ನ ನೋಡೋಕೆ ಆಗ್ತಾ ಇಲ್ಲಾ. ಅಷ್ಟೊಂದು ನಿನ್ನ ಮುಖ ಕಳೆಗುಂದಿದೆ ಎಂದು ಹೇಳಿ ಸಮಾಧಾನಪಡಿಸಿದ. ಮಾನಸಿಗೆ ತಮ್ಮನ ಮೇಲಿದ್ದ ಅತೀವ ನಂಬಿಕೆ ವಿಶ್ವಾಸಗಳಿಂದ ಏನನ್ನು ಮಾತನಾಡದೇ ಎದ್ದು ಮನೆಯ ಕಡೆ ಮೂವರು ಹೊರಟರು, ಗೌತಮಿ ಮಾವ ಕೊಡಿಸಿದ ಐಸಕ್ರೀಂ ತಿನ್ನುವದರಲ್ಲಿ ಮಗ್ನನಾಗಿದ್ದಳು.
ಮೂರು ದಿನಗಳವರೆಗೂ ಆಶಿಶ್ ಮಾನಸಿಗೆ ಮಾತುಕೊಟ್ಟಂತೆ ನಡೆದುಕೊಂಡ ಮಾನಸಿಯು ಸಂತೋಷದಿಂದ ಇದ್ದಳು. ಮಾನಸಿಯ ನಗುಮುಖ ಮಧುಕರನಲ್ಲಿ ಗೆಲುವು ಮೂಡಿಸಿತ್ತು. ಅದೊಂದು ದಿನ ಮದ್ಯಾಹ್ನ ಮೂರು ಗಂಟೆಗೇ ಅಶಿಶ್ ಮನೆಗೆ ಹಿಂತುರುಗಿದ್ದ ಅಷ್ಟೋತ್ತಿಗಾಗಲೇ ಮಧು ಮನೆಯಿಂದ ಆಪೀಸ್ಗೆ ಹೋಗಿ ಆಗಿತ್ತು.
ಆಶಿಶ ಬಂದವನೆ ಅಕ್ಕ ನಂಗ್ಯಾಕೋ ತಲೆನೋವು ಕಾಲೇಜನಲ್ಲಿ ಕುಳಿತುಕೊಳ್ಳಲಾಗಲಿಲ್ಲಾ ಅದಕ್ಕೆ ಮನೆಗೆ ಬಂದೆ ಎಂದು ಹೇಳುತ್ತಾ ಮಹಡಿಯ ರೂಮಿಗೆ ಹೋಗಿ ಮಲಗಿದ, ತಮ್ಮನು ಹೋದ ಬಳಿಕ ಮಾನಸ ತಲೆನೋವಿನ ಮಾತ್ರೆ ಹುಡುಕಿ ಅವನಿಗಾಗಿ ಟೀ ಮಾಡಿಕೊಂಡು ರೂಮಿಗೆ ಬರುವಷ್ಟರಲ್ಲಿ ಅರ್ಧಗಂಟೆಯಾಗಿತ್ತು. ಮಲಗಿದ್ದ ಆಶಿಶನನ್ನು ಏಳಿಸಿ ಮಾತ್ರೆ ನುಂಗಿಸಿ ಟೀ ಕೊಟ್ಟಳು. ಕುಡಿದು ಮತ್ತೆ ಮಲಗಿದ ಆಶಿಶನನ್ನು ನೋಡುತ್ತಾ ತಲೆಯ ಮೇಲೆ ಕೈಯಿಟ್ಟು ನೋಡಿದಾಗ ಜ್ವರವೇನು ಬಂದಿರಲಿಲ್ಲಾ. ಆದ್ದರಿಂದ ಸುಮ್ನೆ ಮಲುಗು ಅರ್ಧಗಂಟೆಯಲ್ಲಿ ಕಡಿಮೆಯಾಗುತ್ತೆ ಸ್ವಲ್ಪ ನಿದ್ದೆ ಮಾಡು ಎಂದು ಹೇಳಿ ಬಂದಳು.
ಮತ್ತೆರಡು ತಾಸು ಕಳೆದರೂ ಅಶಿಶ ಕೆಳಗೆ ಬಾರದಿದ್ದನ್ನು ಕಂಡ ಮಾನಸಿ ಏನಾಗಿರಬಹುದೆಂದು ನೋಡಲು ಮೇಲೆ ಹೋಗಿ ಬಾಗಿಲ ಬಳಿ ನಿಂತು ಒಳಗೆ ನೋಡಿದಾಗ ಆಶಿಶ ಬಾಲ್ಕನಿಯಲ್ಲಿ ಸಿಗರೇಟ್ ಸೇದುತ್ತಿರುವದು ಕಾಣಿಸಿತು. ತಕ್ಷಣವೇ ಅವನ ಬಳಿ ಬಂದು ಅವನ ಕೆನ್ನೆಗೆ ಒಂದು ಬಾರಿಸಿದಳು. ಅಕ್ಕ ಏನು ಮಾಡಿಲ್ಲಾ ಅಕ್ಕ ಎಂದು ಹೇಳುತ್ತಿದ್ದ ಅವನ ಬಾಯಿಂದ ಹೊಗೆ ಬರುತ್ತಿತ್ತು ಏನೂ ಮಾಡದೇ ನಿನ್ನ ಬಾಯಿಂದ ಹೊಗೆ ಬರ್ತಾ ಇದೆಯಾ ಹೋಗು ಏನಾದರೂ ಮಾಡು ನಿನಗೆ ನಾನು ಏನು ಹೇಳಲ್ಲಾ ಒಂದು ಸಾರಿ ಹೇಳಿದರೆ ತಿಳಿಯಲ್ಲವಾ ನಿನಗೆ ಎಂದು ಒರಟಾಗಿ ನುಡಿದು ಕೆಳಗೆ ಬಂದು ಸೋಪಾದಲ್ಲಿ ಕುಳಿತಳು.
ಆಶು ಮಹಡಿಯಿಂದ ಇಳಿದು ಬೈಕ್ ಏರಿ ಹೊರಟು ಹೋದವನು ಇನ್ನು ಮನೆಗೆ ಬಂದಿಲ್ಲಾ. ಏನು ಮಾಡುವದು ಮಗಳಾಗಲೇ ಮನೆಗೆ ಬಂದು ತಾಯಿ ಹೀಗೆ ಕುಳಿತಿರುವದನ್ನು ನೋಡಿ ತಾನೂ ಸುಮ್ನೆ ಕುಳಿತಿದ್ದಳು. ಮಗಳ ಮುದ್ದು ಮುಖವನ್ನು ನೋಡಿ ಯಾಕೆ ಪುಟ್ಟಾ ಹಾಗೆ ಕುಳಿತೆ ಹೋಂ ವರ್ಕ ಮಾಡಲ್ವಾ ಎಂದಾಗ ಅಮ್ಮ ಹೊಟ್ಟೆ ಹಸಿತಾಯಿದೆ ಎಂದಳು ಗೌತಮಿ. ಮಗಳಿಗೆ ಹಾಲು ಬಿಸಕ್ಟ್ ತಿನ್ನಲು ಕೊಟ್ಟ ಮಾನಸಿ ಆಶಿಶನ ಮೊಬೈಲಗೆ ಪೋನ್ ಮಾಡಿದಳು. ಎಷ್ಟು ಸಲ ರಿಂಗ್ ಮಾಡಿದರೂ ಅವನು ಮೊಬೈಲ್ ರಿಸೀವ್ ಮಾಡಲಿಲ್ಲಾ. ಇದರಿಂದ ಮಾನಸಿಗೆ ಆತಂಕವಾಯಿತು, ಮಧುಕರನಿಗೆ ಪೋನಾಯಿಸಿ ಆಶು ಯಾಕೋ ಇನ್ನು ಮನೆಗೆ ಬಂದಿಲ್ಲಾ ನೋಡ್ರಿ ನೀವೇ ಪೋನ್ ಮಾಡಿ ಎಂದು ಹೇಳಿದಳು.
ಸ್ವಲ್ಪ ಹೊತ್ತಿನ ನಂತರ ಪೋನ್ ರಿಂಗಾಯಿತು. ಮಧು ಪೋನ್ ಮಾಡಿದ್ದ ಮಾನಸಿ ಆಶು ಇಲ್ಲೆ ನನ್ನ ಆಪೀಸ್ನಲ್ಲಿ ಇದ್ದಾನೆ. ನಾನು ಅವನು ಒಟ್ಟಿಗೆ ಬರುತ್ತೇವೆ ಎಂದು ತಿಳಿಸಿದ. ಮಾನಸಿ ಸಮಾಧಾನದಿಂದ ಅಡುಗೆ ಮಾಡಲು ಹೋದಳು. ಆದರೂ ತಮ್ಮನ ವರ್ತನೆ ಅವಳಿಗೆ ಅಸಹನೀಯ ಎನಿಸಿತ್ತು. ಅವತ್ತು ಅಷ್ಟೆಲ್ಲಾ ಭರವಸೆಗಳನ್ನು ನೀಡಿದ್ದನಲ್ಲಾ ಇನ್ನೆಂದು ಹೀಗೆ ಮಾಡುವದಿಲ್ಲಾ ಎಂದಿದ್ದನಲ್ಲ ಎಂದು ಕೊಳ್ಳುತ್ತಾ ಕೆಲಸ ಮುಂದುವರೆಸಿದಳು.
ಭಾವನ ಹತ್ತಿರ ಹೋಗಿದ್ದ ಆಶಿಶ್ ಭಾವ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದಾಗ ಮಧುಕರ ಚಕಿತನಾದ ಅವನನ್ನೆ ನೋಡುತ್ತಾ ಕುಳಿತುಕೊಳ್ಳುವಂತೆ ಹೇಳಿ ತನ್ನ ಮುಂದಿದ್ದ ಲ್ಯಾಪಟಾಪ್ ಮುಚ್ಚಿ ಅವನೆಡೆ ನೋಡಿದ ಅಶಿಶ ಕಣ್ಣಂಚಿನಲ್ಲಿ ನೀರು, ಎದ್ದು ಬಂದ ಆಶಿಶ ಭಾವನ ಕಾಲುಗಳನ್ನು ಹಿಡಿದುಕೊಂಡು ನನ್ನ ಕ್ಷಮಿಸುತ್ತೀರಾ ಭಾವ ಎಂದು ಕೇಳಿದ, ಯಾಕೋ ಆಶು ಏನಾಯಿತು ಮಾನಸಿ ಏನಾದರೂ ಬೈದಳಾ ಎನ್ನುತ್ತಾ ಅವನನ್ನು ಮೇಲಿತ್ತಿದ.
ಆಶು ನಿಧಾನವಾಗಿ ಕಾಲೇಜಿನಲ್ಲಿ ನಡೆದದ್ದನನ್ನೆಲ್ಲಾ ಹೇಳಿದ ಇನ್ನೆಂದು ಅವರ ಮಾತಿಗೆ ಮರಳಾಗಿ ಡ್ರಿಂಕ್ಸ್ ಆಗ್ಲಿ ಸ್ಮೋಕ್ ಆಗ್ಲಿ ಮಾಡಲ್ಲ ಭಾವ ನಾನು ಹೇಳಿದ್ರೆ ಅಕ್ಕ ನಂಬಲ್ಲ. ಯಾಕಂದ್ರೆ ಒಂದು ಸಲ ತಪ್ಪು ಮಾಡಲ್ಲಾ ಎಂದು ಭರವಸೆ ನೀಡಿ ಪುನಃ ತಪ್ಪು ಮಾಡಿದ್ದೇನೆ. ನೀವೆ ಅಕ್ಕನಿಗೆ ಹೇಳಿ, ನನ್ನ ಪ್ರಾಣ ಹೋದರು ಇನ್ನೆಂದು ಹೀಗೆ ನಡೆದುಕೊಳ್ಳಲ್ಲಾ ಎಂದು ಭಾವನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅತ್ತ, ಆಶಿಶನನ್ನು ಸಮಾಧಾನಪಡಿಸಲು ಮಧುಕರ ಹರಸಾಹಸ ಮಾಡಬೇಕಾಯಿತು. ನಿನ್ನ ಅಕ್ಕನಿಗೆ ನಾನು ಹೇಳ್ತೀನಿ ಪಶ್ಚಾತಾಪಕ್ಕಿಂದ ಮಿಗಿಲಾಗಿದ್ದುದು ಯಾವುದು ಇಲ್ಲಾ ಕಣೋ ಆಶು ಹೋಗೋಣಾ ನಡಿ ಎಂದು ಅವನನ್ನು ಕರೆದುಕೊಂಡು ಮನಗೆ ಬಂದ.
ಮಾನಸಿ ಬಾಗಿಲು ತೆಗೆದಾಗ ಪತಿ ಮತ್ತು ತಮ್ಮ ಇಬ್ಬರು ಜೊತೆಯಲ್ಲಿ ನಿಂತಿದ್ದರು. ಪತಿಯ ಮುಖದಲ್ಲಿ ಮಂದಹಾಸವಿತ್ತು. ಒಳಗೆ ಬಂದ ತಮ್ಮನ ಮುಖವನ್ನು ಗಮನಿಸಿದಳು. ಅವನ ಕಣ್ಣುಗಳು ಅತ್ತು ಅತ್ತು ಕೆಂಪಾಗಿದ್ದವು. ಒಳಗೊಳಗೆ ಭಯವೂ ಆಯಿತು. ಮಧುಕರನ ಎದುರು ಎಲ್ಲವನ್ನು ಹೇಳಿಬಿಟ್ಟನೆ. ಅವರು ತಮ್ಮನ ಬಗ್ಗೆ ತಪ್ಪು ತಿಳಿದುಕೊಂಡರೆ ಎಂಬ ಸಂಶಯ ಮೂಡಿತು.
ಗೌತಮಿ ಆಗಲೇ ಊಟ ಮಾಡಿ ಮಲಗಿದ್ದಳು ಮಧು ಆಶಿಶನನ್ನು ಕುಳಿತುಕೊಳ್ಳುವಂತೆ ಹೇಳಿ ಬಟ್ಟೆ ಬದಲಿಸಲು ರೂಮಿಗೆ ಹೋದ. ಮಾನಸಿ ತಮ್ಮನಡೆಗೆ ಬಂದು ತುಂಬಿದ ಕಣ್ಣುಗಳಿಂದ ನೋಡಿದಳು. ಕಳಾಹೀನವಾದ ಮುಖ, ನಾನೇಕೆ ಅವನಿಗೆ ಬೈದೆ ಎಂದು ಕೊಂಡಳು. ಮುಖ ತೊಳೆದು ಬಂದ ಮಧು ಆಶುವಿಗೆ ಮುಖ ತೊಳೆಯಲು ತಿಳಿಸಿದಾಗ ಅಶು ಎದ್ದು ಹೋದ, ಮಾನಸಿ ಹತ್ತಿರ ಬಂದ ಮಧು ಮಾನಸಿ ಬಳಿ ಕುಳಿತು ಮಾನಸಿ ಅವನು ಏನ ಅಷ್ಟು ದೊಡ್ಡ ತಪ್ಪು ಮಾಡಿದ್ದಾನೆ ಅಂತ ಅವನನ್ನು ತಿರಸ್ಕರಿಸಿ ನೋಡ್ತೀಯಾ. ಅವನು ನಿನ್ನ ಜೊತೆಯಲ್ಲಿ ಬೆಳೆದವನಲ್ಲವೇ ? ನೀನು ಬೆಳೆಸಿದವನಲ್ಲವೇ ಏನೂ ಕಾಲೇಜ್ ಹುಡುಗ ಕೆಟ್ಟ ಸಹವಾಸದಿಂದ ಚಟಗಳನ್ನು ಕಲಿತಿದ್ದಾನೆ, ಅದನ್ನು ತಿಳಿ ಹೇಳಿ ಬಿಡಸಬೇಕೆ ಹೊರೆತು ಬೈಯ್ಯುವದರಿಂದ ಬಿಡಿಸಲು ಸಾಧ್ಯವೆ.? ನೀನು ಹೆಚ್ಚು ತಿರಸ್ಕಾರದಿಂದ ಅವನನ್ನು ನೋಡಿದರೆ ಅವನು ಇನ್ನೂ ಕೆಟ್ಟ ದಾರಿ ಹಿಡಿಯಬಹುದು.
ಎಚ್ಚರದಿಂದ ನಾವು ಎಚ್ಚರಿಸಿದರೆ ಅವನನ್ನು ಸರಿದಾರಿಗೆ ತರಲು ಸಾಧ್ಯ. ಅದು ನಿನ್ನಿಂದ ಆಗುತ್ತದೆ ನಿನ್ನ ಮಾತು ಅವನು ಕೇಳುತ್ತಾನೆ. ನನ್ನ ಬಳಿ ಬಂದು ಎಲ್ಲಾ ವಿಷಯ ಹೇಳಿದ್ದಾನೆ ಎಲ್ಲವನ್ನು ನೀನು ಮುಚ್ಚಿಟ್ಟು ಮನನೊಂದು ಕೊಂಡರೆ ಹೇಗೆ, ನಾನು ನಿನ್ನ ಜೊತೆ ಇರುವುದು ಮರೆತಂತೆ ಇದ್ದೀಯಾ ನೀನು, ಯಾಕೆ ಮೊದಲೇ ನನಗೆ ಹೇಳಬಹುದಿತ್ತಲ್ಲಾ ಎಂದು ಅವಳ ಮುಖ ನೋಡಿ ಮಾತನ್ನು ಮುಂದುವರೆಸಿದ, ಈಗೇನು ಆಗಿಲ್ಲಾ ಎಲ್ಲವೂ ಸರಿಹೋಗುತ್ತವೆ ನೀನು ದೈರ್ಯದಿಂದ ಅವನನ್ನು ತಿದ್ದು ಎಂದು ಹೇಳಿ ಡೈನಿಂಗ್ ಟೇಬಲ್ ಮುಂದೆ ಕುಳಿತ.
ಅಷ್ಟರಲ್ಲಿ ಆಶಿಶ್ ಮುಖ ತೊಳೆದು ಬಂದ ಮಾನಸಿಯ ಮನದಲ್ಲಿ ಮಧುವಿನ ವಿಶಾಲತನವನ್ನು ಕೊಂಡಾಡತೊಡಗಿತ್ತು, ಎಲ್ಲಾ ಗೊತ್ತಾದರೂ ಅವನನ್ನು ಹೊರಗೆ ಹಾಕುತ್ತಾರೆಂಬ ಆತಂಕದಿಂದ ಮಾನಸಿ ನಿರಮ್ಮಳಾದಳು. ಎಲ್ಲವನ್ನು ಸರಿಪಡಿಸಬಹುದೆಂಬ ಅವರ ಸಂಕಲ್ಪ, ಆಶಿಶ ಬಗ್ಗೆ ಅವರಿಗಿದ್ದ ಕಾಳಜಿ ಕಂಡು ಅವಳಿಗೆ ಅವಳ ಬಗ್ಗೆನೇ ನಾಚಿಕೆ ಉಂಟಾಯಿತು.
ಊಟಕ್ಕೆ ಬಂದ ಆಶಿಶನ ಮನಸ್ಸು ಹಗುರವಾಗಿತ್ತು. ಅಕ್ಕನ ಎದುರು ನಿಂತು ಇನ್ನೆಂದು ಖಂಡಿತವಾಗಿ ನಾನು ತಪ್ಪು ಮಾಡಲ್ಲ ನನ್ನ ನಂಬು ಅವತ್ತಿನ ಹಾಗೇ ಸುಳ್ಳು ಹೇಳ್ತಿಲ್ಲಾ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳ್ತಾ ಇದೀನಿ, ನೀನು ನನಗೆ ತಾಯಿ ಇದ್ದಾಗೆ ಇನ್ನೆಂದು ತಪ್ಪು ಮಾಡಲ್ಲಾ ಅಕ್ಕ ಎಂದು ಕಾಲುಗಳನ್ನು ಹಿಡಿದ, ತಮ್ಮನನ್ನು ಮೇಲೆತ್ತಿ ಅವನನ್ನು ಬಾಚಿತಬ್ಬಿ ಹಣೆಗೆ ಮುತ್ತಿನಿಕ್ಕಿದಳು ಮಾನಸಿ………………..
ಲೇಖಕ-ಮಂಜುನಾಥ ಸಾಲಿಮಠ
ಪತ್ರಕರ್ತರು ಮಸ್ಕಿ.
ಗಮನಿಸಿಃ“ಮಾನಸಿ ಮತ್ತು ಆಶಿಶ್” ಕಥಾಂಕುರ ಇಲ್ಲಿಗೆ ಮುಗಿಯಿತು. ಈ ಕಥಾಂಕುರದ ಮೊದಲನೇ ಭಾಗದಿಂದ ಇಲ್ಲಿವರೆಗೆ ನಿಮ್ಮ ವಿನಯವಾಣಿ ಯ ಕಥಾ ವಿಭಾಗದಲ್ಲಿ ಎಲ್ಲಾ ಭಾಗಗಳನ್ನು ಓದಬಹುದು.
…………