ಕಥೆ

ಅರಿವಿನ ಜ್ಯೋತಿ – ಡಾ.ಈಶ್ವರಾನಂದ ಸ್ವಾಮೀಜಿ ಬರಹ ಓದಿ ಸನ್ನಡತೆ‌ ಮೈಗೂಡಿಸಿಕೊಳ್ಳಿ

ದಿನಕ್ಕೊಂದು ಕಥೆ

ಅರಿವಿನ ಜ್ಯೋತಿ

ಚೀನಾ ದೇಶದಲ್ಲಿ ಒಬ್ಬ ಶ್ರೇಷ್ಠ ಗುರುವಿದ್ದ. ಸತ್ಯ ಸಾಕ್ಷಾತ್ಕಾರ ಮಾಡಿಕೊಂಡ ಗುರುವೆಂದು ದೇಶದ ತುಂಬೆಲ್ಲ. ಆತನ ಹೆಸರು. ಒಂದು‌ ದಿನ ಜಪಾನದ ಉತ್ತರ ಭಾಗದಿಂದ ಒಬ್ಬ ಮನುಷ್ಯ ಆ ಗುರುವಿನ ಬಳಿಗೆ ಬಂದ. ಆತನ ವಯಸ್ಸು ನಲವತ್ತು ವರ್ಷ. ಸಿರಿ ಸಂಪತ್ತಿಗೇನೂ ಕೊರತೆ ಇರಲಿಲ್ಲ. “ಬುದ್ಧಂ ಶರಣಂ ಗಚ್ಚಾಮಿ” ಎಂದು ಗುರುಗಳಿಗೆ ನಮಿಸಿ ಕುಳಿತ. “ಏನು ವಿಶೇಷ?” ಎಂದು ಗುರುಗಳು ಕೇಳಿದರು.

“ನನಗೆ ಧನ-ಕನಕ, ಸತಿ-ಸುತರು, ಕೀರ್ತಿವಾರ್ತೆ ಯಾವುದಕ್ಕೂ ಕೊರತೆ ಇಲ್ಲ. ಆದರೆ ಒಂದೇ ಒಂದಾಶೆ-ನಿರ್ವಾಣ ಹೊಂದಬೇಕು, ಸತ್ಯದರ್ಶನ ಮಾಡಿಕೊಳ್ಳಬೇಕು. ಆಯುಷ್ಯ ಇರುವುದರಲ್ಲಿ ಅದೊಂದಾದರೆ ನನ್ನ ಜೀವನ ಸಾರ್ಥಕ, ಏನು ಮಾಡಲಿ ಹೇಳಿ ಗುರುಗಳೇ” ಎಂದ ಶಿಷ್ಯ.

“ಏನಿಲ್ಲ ಇದೊಂದು ಬಡಿಗೆ ಹಿಡಿ. ನಿನಗೆ ನಿರ್ವಾಣವಾಗುತ್ತದೆ” ಎಂದು ಹೇಳಿ ಗುರುಗಳು ಐದಡಿ ಮನುಷ್ಯನಿಗೆ ಆರಡಿ ಎತ್ತರದ ಬಡಿಗೆ ಕೊಟ್ಟರು. ಜಪತಪ ಯೋಗ ಧ್ಯಾನಾದಿಗಳು ಮಾಡಬೇಕಿಲ್ಲ. ಸುಮ್ಮನೆ ಬಡಿಗೆ ಹಿಡಿದರೆ ಮುಕ್ತರಾಗುವುದಾದರೆ ಎಂಥ ಆನಂದ! ಆದರೆ ಅದರಿಂದ ನಿರ್ವಾಣ ಹೇಗಾಗುತ್ತದೆ ಎಂದಾಗುತ್ತದೆ ಎಂದು ಶಿಷ್ಯನೂ ಕೇಳಲಿಲ್ಲ, ಗುರುಗಳೂ ಹೇಳಲಿಲ್ಲ.

ಅಂದಿನಿಂದ ಸಿರಿವಂತನು ಕೂತರೆ ನಿಂತರೆ ಬಡಿಗೆ ಹಿಡಿದುಕೊಂಡೇ ಇರುತ್ತಿದ್ದ. ಮಕ್ಕಳಾದವು, ಮೊಮ್ಮಕ್ಕಳಾದವು. ಇನ್ನೂ ಬಡಿಗೆ ಹಿಡಿದೇ ಇದ್ದ. ಸತ್ಯವೇನೋ ಕಾಣಲಿಲ್ಲ. ಇಪ್ಪತ್ತು ವರ್ಷವಾದರೂ ನಿರ್ವಾಣವೇನೂ ದೊರೆಯಲಿಲ್ಲ. ಮೊಸವಾಯಿತೆಂದು ಮುದುಕ ಕ್ರೋಧತಪ್ತನಾದ. ಕುಡಿಯುತ್ತಲೇ ಗುರುವಿನ ಬಳಿಗೆ ಬಂದು ಬಡಿಗೆ ಒಗೆದ! ಗುರುಗಳು ಸುಮ್ಮನೇ ನಕ್ಕರು!.

“ಇದೆಂಥಾ ಮೋಸ ಗುರುಗಳೇ! ಸತ್ಯ ಕಾಣಲಿಲ್ಲ. ನನ್ನ ಜೀವನ ಹಾಳಾಯಿತು” ಎಂದ ಶಿಷ್ಯ. “ಅವಸರ್ವೇಕೆ? ಕಾಣುತ್ತದೆ ಹಾಗೇ ಹಿಡಿದಿರು ಬಡಿಗೆ” ಎಂದರು ಗುರುಗಳು. “ಇಪ್ಪತ್ತು ವರ್ಷಗಳಾದವು ಕಂಡಿಲ್ಲವಲ್ಲ” ಎಂದ ಶಿಷ್ಯ. “ಹೀಗೆ ಹಿಡಿದರೆ ಇಪ್ಪತ್ತು ಜನ್ಮವಾದರೂ ನಿನಗೆ ಸತ್ಯ ಕಾಣುವುದಿಲ್ಲ ಮೊಕ್ಷವಾಗುವುದಿಲ್ಲ” ಎಂದರು ಗುರುಗಳು.

“ಈ ಬಡಿಗೆಗೆ ಸತ್ಯಕ್ಕೆ ಏನು ಸಂಬಂಧವೆಂದು ನೀನು ಒಂದು ದಿನವೂ ವಿಚಾರಿಸಲಿಲ್ಲ. ಆ ವಿಚಾರ ನಿನಗೆ ಬರಲೆಂದೇ ಈ ಬಡಿಗೆ ನಿನಗೆ ಕೊಟ್ಟೆ. ಈ ಜಿಜ್ಞಾಸೆಗೆ ನೀನು ಬರುವಿ ಎಂದು ದಾರಿ ಕಾಯ್ದೆ. ಶಿಷ್ಯನೇ ಇಪ್ಪತ್ತು ವರ್ಷ ನೀನು ಕತ್ತಲೆಯಲ್ಲಿ ಕಳೆದೆ” ಎಂದರು ಗುರುಗಳು. ಆಗ ಶಿಷ್ಯನ ತಲೆಯಲ್ಲಿ ಸತ್ಯದ ಅರುವಿನ ಜ್ಯೋತಿ ಬೆಳಗಿತು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button