ಮಾತಾ ಮಾಣಿಕೇಶ್ವರಿ ದರ್ಶನ ಪಡೆದು ಪುನೀತರಾದ ಭಕ್ತರು
ಯೋಗಗುಹೆ ವಾಸಿನಿ ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನ
ಕಲಬುರ್ಗಿಃ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮ ಮಾತೆ ಮಾಣಿಕೇಶ್ವರಿ ಅವರಿಂದಲೇ ಹೆಸರುವಾಸಿಯಾಗಿದೆ. ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅಂದ್ರೆ ಜನರ ಪಾಲಿಗೆ ನಡೆದಾಡುವ ದೇವರು. ಯಾನಾಗುಂದಿ ಗುಡ್ಡದ ಗುಹೆಯೊಂದರಲ್ಲಿ ಯೋಗವಾಸವಿರುವ ಮಾತಾ ಮಾಣಿಕೇಶ್ವರಿ ಭಕ್ತರಿಗೆ ದರ್ಶನ ನೀಡುವುದು ಅಪರೂಪ. ವರ್ಷದಲ್ಲಿ ಎರಡು ಬಾರಿ ದರ್ಶನ ನೀಡಬಹುದು. ಅಥವಾ ಭಕ್ತರಿಗೆ ಏನಾದರೂ ತಿಳಿಸುವದಿದ್ದರೆ ಆಕಸ್ಮಿಕವಾಗಿ ದರ್ಶನ ನೀಡಿ, ಭವಿಷ್ಯವಾಣಿ ನುಡಿಯುತ್ತಾರೆ.
ಆದರೆ ಪ್ರತಿವರ್ಷ ಶಿವರಾತ್ರಿ ಸೇರಿದಂತೆ ಹಲವು ಪ್ರಮುಖ ಹಬ್ಬ ಹರಿದಿನಗಳಲ್ಲಿ ಭಕ್ತರಿಗೆ ದರ್ಶನ ನೀಡುತ್ತಾ ಬಂದಿರುವುದು ರೂಢಿಯಲ್ಲಿದೆ. ಅದರಂತೆ ಈ ಶಿವರಾತ್ರಿ ಅಂಗವಾಗಿ ಗುರುವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ದರ್ಶನ ನೀಡಿದ್ದಾರೆ. ಭಕ್ತರಿಗೆ ದರ್ಶನ ನೀಡುವದಕ್ಕಾಗಿಯೇ ಮಠದ ಆಯೋಜಕರಿಂದ ವಿಶೇಷ ದರ್ಶನ ಮಂಟಪ ನಿರ್ಮಿಸಿದ್ದರು. ಹೂಗಳಿಂದ ಅಲಂಕರಿಸಿದ್ದರು. ಆ ಮೂಲಕ ಭಕ್ತರಿಗೆ ದರ್ಶನ ನೀಡಿದ ಮಾಣಿಕೇಶ್ವರಿ ತಾಯಿ ಕೆಲ ನಿಮಿಷಗಳವರೆಗೆ ಕುಳಿತು ಆಶೀರ್ವದಿಸಿ ಮತ್ತೆ ಯೋಗ ಗುಹೆ ಸೇರಿದರು ಎನ್ನಲಾಗಿದೆ.
ತಾಯಿಯ ದರ್ಶನ ಪಡೆದ ಭಕ್ತಾಧಿಗಳು ಯಾನಗುಂದಿ ಮಾಣಿಕೇಶ್ವರಿ ಮಾತಾಕೀ ಜೈ ಎಂದು ಜಯಕಾರ ಮೊಳಗಿಸಿದರು. ದರ್ಶನ ಪಡೆದ ಪುನೀತ ಭಾವ ವ್ಯಕ್ತಪಡಿಸಿದರು.