ಜಾತಿ ಆಧಾರದಿ ಶರಣರ ಗುರುತು ಸಲ್ಲದು : ಆಯುಕ್ತ ಮಂಜುನಾಥ ವಿಷಾಧ
ಯಾದಗಿರಿ: 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣ, ಶರಣಿಯರ ಜೊತೆ ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಗಣಚಾರಿ, ವಚನ ಗ್ರಂಥ ರಕ್ಷಕ ಎಂಬ ಕೀರ್ತಿಗೆ ಪಾತ್ರರಾದವರು ಶರಣ ಮಡಿವಾಳ ಮಾಚಿದೇವರು. ಅವರು ಬಸವಾದಿ ಶರಣರ ಬಟ್ಟೆಯನ್ನು ತೊಳೆದು ಮಡಿ ಮಾಡುವ ಕಾಯಕದ ಜೊತೆಗೆ ಜನರ ಮನಸ್ಸಿನಲ್ಲಿರುವ ಕೊಳಕನ್ನು ಸಹ ತೊಳೆಯುವ ಕೆಲಸ ಮಾಡಿದರು ಎಂದು ಸಹಾಯಕ ಆಯುಕ್ತ ಮಂಜುನಾಥ ಸ್ವಾಮಿ ತಿಳಿಸಿದರು.
ಗುರುವಾರ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರವು ಮೊದಲ ಬಾರಿಗೆ ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆಗೆ ನಿರ್ಧರಿಸಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಆಚರಣೆಗೆ ಆದೇಶ ನೀಡಿರುವುದು ಶ್ಲಾಘನೀಯವಾದದು. 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯು ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅಂದಿನ ಎಲ್ಲಾ ಶರಣರು ಯಾವುದೇ ಜಾತಿ ಸೂಚಕವಾಗಿರಲಿಲ್ಲ, ವೃತ್ತಿ ಸೂಚಕವಾಗಿದ್ದರು, ಎಲ್ಲರೂ ಸಮಾನರಾಗಿದ್ದು ಸಮಾಜದಲ್ಲಿರುವ ಅಂಧಕಾರ, ಅಸಮಾನತೆ, ಮೂಢ ನಂಬಿಕೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಮಹತ್ತರ ಬದಲಾವಣೆಯನ್ನು ತರುವುದು ಅವರ ಪ್ರಯತ್ನವಾಗಿತ್ತು. ಆದರೆ, ಇಂದು ನಾವುಗಳು ಜಾತಿಯ ಆಧಾರದ ಮೇಲೆ ಶರಣರನ್ನು ಗುರುತಿಸುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲೇ ಶಿವಶರಣರು ಜಾತೀಯತೆಯನ್ನು ಹೋಗಲಾಡಿಸುವ ದೃಷ್ಠಿಯಿಂದ ಅಂತರ್ಜಾತಿ ವಿವಾಹವನ್ನು ಏರ್ಪಡಿಸಿದ್ದಾಗ, ಬಿಜ್ಜಳ ಮಹಾರಾಜನ ವಿರೋಧದಿಂದ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಅಲ್ಲಿನ ವಚನ ಭಂಡಾರ ಸಂರಕ್ಷಿಸುವಲ್ಲಿ ಮಡಿವಾಳ ಮಾಚಿದೇವರು ಪಟ್ಟ ಶ್ರಮದ ಫಲವಾಗಿ ಇಂದು ನಾವು ಹಲವಾರು ಶರಣರ ವಚನಗಳನ್ನು ಓದುತ್ತಿದ್ದೇವೆ. ಇಲ್ಲದಿದ್ದರೆ ಯಾರ ವಚನಗಳೂ ನಮಗೆ ಸಿಗುತ್ತಿರಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡಿದ ಡಾ|| ಭೀಮರಾಯ ಲಿಂಗೇರಿ ಮಾತನಾಡಿ, 12ನೇ ಶತಮಾನದಲ್ಲಿನ ಅಂಧಶ್ರದ್ಧೆ, ಅಂಧಕಾರ, ಮೂಢನಂಬಿಕೆ ಹಾಗೂ ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ ನೇರ-ದಿಟ್ಟವಾದ ಮಾತುಗಳಿಂದ ಮಾನವೀಯತೆಯ ಬೀಜ ಬಿತ್ತಿದ ಕಾಯಕ ಜೀವಿಯಾದ ಮಹಾ ಪುರುಷ ಮಾಚಿದೇವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಪ್ರತಿಪಾದಿಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯ ಪರ್ವತಯ್ಯ ಮತ್ತು ಸುಜ್ಞಾನವ್ವರ ಮಗನಾಗಿ ಜನಿಸಿ ಸಮಾಜದಲ್ಲಿನ ಸಂಪ್ರದಾಯಗಳ ಕುರಿತು ವಚನಗಳ ಮೂಲಕ ಕ್ರಾಂತಿಗೈದ ಅನೇಕ ಶಿವಶರಣರ ಸಾಂಘಿಕ ಹೋರಾಟದಲ್ಲಿ ಪಾಲ್ಗೊಂಡ ಇವರು ಎಲ್ಲ ಶಿವಶರಣರಿಗಿಂತ ಒಂದು ಹೆಜ್ಜೆ ಮುಂದಿದ್ದರು ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮಡಿವಾಳ ಮಾಚಿದೇವರ ಸಮಾಜದವರು ಮುಂದೆ ಬಂದು ರಾಜಕಿಯ ಹಕ್ಕು ಪಡೆಯಬೇಕಾದರೆ ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸಿಪಿಓ ಸುನೀಲ್ ಬಿಸ್ವಾಸ್, ಯಾದಗಿರಿ ತಾಲೂಕ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಮಡಿವಾಳ ಮಾಚಿದೇವರ ಸಮಿತಿಯ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸ್ಪೂರ, ಯಲ್ಲಸತ್ತಿ ಮಾದೇವಪ್ಪ ಗುತ್ತೇದಾರ ಉಪಸ್ಥಿತರಿದ್ದರು. ಚಂದ್ರಶೇಖರ್ ಗೋಗಿ ತಂಡದವರು ನಾಡಗೀತೆ ಹಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.