ಮಹಾದಾಯಿ ಹೋರಾಟಕ್ಕೆ ಕನ್ನಡ ಸೇನೆ ಬೆಂಬಲ-ಪಕ್ಷಬೇಧ ಮರೆತು ಸಮಸ್ಯೆ ಪರಿಹರಿಸಲು ಆಗ್ರಹ
ಯಾದಗಿರಿಃ ಉತ್ತರ ಕರ್ನಾಟಕದ ಸುಮಾರು ಐದು ಜಿಲ್ಲೆಗಳಲ್ಲಿರುವ ನೀರಿನ ಬವಣೆ ನೀಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಾದ್ಯಂತ ರೈತಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಬೆಂಬಲಿಸಿ ಜಿಲ್ಲೆಯ ಶಹಾಫುರ ನಗರದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಉಕ ಕಾರ್ಯದರ್ಶಿ ದೇವು ಭೀ.ಗುಡಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯಲು ನೀರು ಒದಗಿಸಲು ಮಹಾದಾಯಿ ಯೋಜನೆ ಅನುಷ್ಠಾನ ಅಗತ್ಯವಿದೆ. ವಿನಾಃ ಕಾರಣ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಹಾದಾಯಿ ಯೋಜನೆ ಕುರಿತು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಬೇಕು.
ಕನ್ನಡಿಗರಿಗೆ ನದಿ ನೀರಿನ ಹಂಚಿಕೆಯಲ್ಲಿ ಭಾರಿ ಅನ್ಯಾಯವಾಗುತ್ತಿದ್ದು, ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಕಾನೂನು ಹೋರಾಟ ಮಾಡುತ್ತಿಲ್ಲ. ಕಾನೂನಾತ್ಮಕವಾಗಿ ರಾಜ್ಯದ ಸರ್ಕಾರಗಳು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕಾರಣ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ, ಕೃಷ್ಣೆ, ಮಹಾದಯಿ ವಿಚಾರದಲ್ಲಿ ಪದೇ ಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದ ಅವರು, ರಾಜ್ಯದ ಕಾಂಗ್ರೆಸ್ ಪಕ್ಷ ತನ್ನ ದ್ವಿಮುಖ ನೀತಿ ಬಿಟ್ಟು, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಇತರೆ ಪಕ್ಷದ ವರಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಧಾನಿಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಲಿ.
ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳ ಮುಖ್ಯಮಂತ್ರಿಗಳನ್ನು ಕರೆಸಿ ಕೇಂದ್ರದಲ್ಲಿಯೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅದು ಬಿಟ್ಟು ರಾಜ್ಯದಲ್ಲಿಯೇ ಸ್ವಪಕ್ಷ ಪ್ರತಿಷ್ಠಗೆ ಬಿದ್ದು ಕೆಸರೆರಚಾಟ ಬೇಡ. ರಾಜ್ಯದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂಬ ಅರಿವಿರಲಿ ಎಂದು ಎಚ್ಚರಿಸಿದರು.
ಕೂಡಲೇ ಪಕ್ಷಬೇಧ ಮರೆತು ಮಹಾದಾಯಿ ಯೋಜನೆ ಮೂಲಕ ಉಕ ಭಾಗದ ರೈತರಿಗೆ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರಸ್ತುತ ರೈತರು ಕರೆ ನೀಡಿದ ಬಂದ್‍ಗೆ ಸಂಪೂರ್ಣ ಕನ್ನಡ ಸೇನೆಯ ಬೆಂಬಲವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬ್ರೇಶಗೌಡ ಸಗರ, ಮಲ್ಲು ದೊರೆ, ನಿಂಗಪ್ಪ ಟಣಕೇದಾರ, ಲೋಕನಾಥ ದೋರನಹಳ್ಳಿ, ದೇವು ಸೂಗೂರ, ನಿಂಗು ಶಖಾಪುರ, ನಾಗರಾಜ ದೊರೆ, ರವಿ ನಾಯ್ಕೋಡಿ, ಶರಣು ಮದ್ರಿಕಿ, ಮಾದೇಶ ಮದ್ರಿಕಿ, ಮಲ್ಲಾರಾವ್ ಕುಲಕರ್ಣಿ, ಮರಿಲಿಂಗ ಯಕ್ಕಿಗಡ್ಡಿ, ಮಲ್ಲಿಕಾರ್ಜುನ ಜಾಗಿರದಾರ, ನಿಂಗು ಸಗರ, ಮರೆಪ್ಪ ಶಹಾಪುರ, ಶಶಿ ಬೇವಿನಹಳ್ಳಿ, ದೇವು ಕುರಕುಂದಿ, ದೀಪು ಸಜ್ಜನ ಇತರರಿದ್ದರು.