ಪ್ರಮುಖ ಸುದ್ದಿ

ಯಾದಗಿರಿಗೆ ತಟ್ಟದ ಮಹದಾಯಿ ಬಂದ್ ಬಿಸಿ., ಕನ್ನಡಪರ ಸಂಘಟನೆಗಳಿಂದ ರೈಲು ತಡೆಗೆ ಯತ್ನ ಹಲವರ ಬಂಧನ ಬಿಡುಗಡೆ

 

ಮಹದಾಯಿ ವಿಚಾರ ಶಹಾಪುರ, ಸುರಪುರದಲ್ಲಿ ಪ್ರತಿಭಟನೆ ಮನವಿ

ಟೈರ್‍ಗೆ ಬೆಂಕಿ ಕಾರ್ಯಕರ್ತರ ಆಕ್ರೋಶ, ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹ

ಯಾದಗಿರಿಃ ಕನ್ನಡಪರ ಸಂಘಟನೆಗಳು ಮಹದಾಯಿ ಯೋಜನೆ ಜಾರಿಗಾಗಿ ರಾಜ್ಯದಾದ್ಯಂತ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಇಲ್ಲಿನ ರೈಲು ನಿಲ್ದಾಣಕ್ಕೆ ತೆರಳಿದ್ದ ಕರವೇ ಕಾರ್ಯಕರ್ತರು ಉದ್ಯಾನ ಎಕ್ಸ್ ಪ್ರೆಸ್ ರೈಲು ತಡೆಯಲು ಯತ್ನಿಸಿದರು. ರೈಲು ತಡೆಯಲು ಯತ್ನಿಸಿದ ಕರವೇ (ನಾರಾಯಣಗೌಡ ಬಣ) ಮತ್ತು ಕರವೇ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಉಕ ಅಧ್ಯಕ್ಷ ಶರಣು ಗದ್ದುಗೆ ಹಾಗೂ ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ ನೇತೃತ್ವದ  ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಇದೇ ಸಂದರ್ಭದಲ್ಲಿ ರೈಲು ತಡೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆಯಿತು.

ಶಹಾಪುರ, ಸುರಪುರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಆಯ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಯಾವುದೇ ಬಂದ್ ಆಚರಣೆ ನಡೆದಿಲ್ಲ.

ಶಹಾಪುರ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಟೈರ್ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿರುವುದು ಒಂದಡೆಯಾದರೆ, ಇನ್ನೊಂದಡೆ ಕರವೇ (ನಾರಾಯಣಗೌಡ ಬಣ) ಸ್ಥಳೀಯ ಬಿಎಸ್ಸೆಎನ್ನೆಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ಇದೇ ಸಂದರ್ಭದಲ್ಲಿ ಬಸವೇಶ್ವರ ವೃತ್ತದಲ್ಲಿ ಹಲವು ಕನ್ನಡಪರ ಸಂಘಟನೆಗಳು ಸೇರಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ ವೆಂಕಣ್ಣಗೌಡ ಅವರಿಗೆ ಪ್ರತಿಭಟನಾನಿರತ ಕಾರ್ಯಕರ್ತರು ತಹಸೀಲ್ದಾರ ಮೂಲಕ ದೇಶದ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ದೇವು ಬಿ.ಗುಡಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ಆಶಯ ಈಡೇರುತ್ತಿಲ್ಲ. ಆದರೆ ಇದು ರಾಜಕೀಯ ವಿಷಯವಾಗಿ ಪರಿವರ್ತನೆಯಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯಲು ನೀರಿ ಅಗತ್ಯವಿದೆ. ಮಹದಾಯಿ ನದಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪರಿಪರಿಯಾಗಿ ಕೇಳುವ ಸ್ಥಿತಿ ಬಂದಿದೆ. ಇದಕ್ಕೆ ಕಾರಣ ರಾಜಕೀಯ ಮೇಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋವಾ ಸರ್ಕಾರ ಕುಡಿಯುವ ನೀರು ಹರಿಸಲು ಅಡ್ಡಗಾಲು ಹಾಕುತ್ತಿದೆ. ಕುಡಿಯುವ ನೀರು ಬೇಡುವ ಹಕ್ಕು ನಮಗಿದೆ. ಮಹದಾಯಿ ನದಿ ನೀರು ಕರ್ನಾಟಕದ ಪಾಲಿಗೂ ಆಶಾ ಕಿರಣವಾಗಿದೆ. ನಮ್ಮ ಪಾಲಿನ ನೀರು ಕರ್ನಾಟಕಕ್ಕೆ ಒದಗಿಸಬೇಕೆಂದು ಆಗ್ರಹಿಸಿದರು. ಮಹದಾಯಿ ವಿವಾದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಬಸವೇಶ್ವರ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮುಂಚಿತವಾಗಿ ಚರಬಸವೇಶ್ವ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಯಾವುದೇ ಬಂದ್ ಆಚರಣೆ ನಡೆಯಲಿಲ್ಲ. ಆದರೆ ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಬೋನೇರ್, ಮಲ್ಲಿಕಾರ್ಜುನ ನಗನೂರ, ಮೌನೇಶ ಹಳಿಸಗರ, ಭೀಮರಾಯ ಕಾಂಗ್ರೆಸ್, ವಿರೇಶ ಅಂಗಡಿ, ಅಮರೇಶಗೌಡ ಸಗರ, ವಿಜಯ ಚಿಗಿರಿ, ನಿಂಗು ಶಹಾಪುರ, ನಾಗರಾಜ ದೊರಿ, ನಿಂಗಣ್ಣ ಟಣಕೆದಾರ, ಶರಣು ಮದ್ರಿಕಿ, ಲೋಕನಾಥ ದೋರನಹಳ್ಳಿ, ಮಹಾದೇವ ಮದ್ರಿಕಿ, ದೇವು ಸೂಗೂರ, ಯಲ್ಲಪ್ಪ ಸಗರ, ಮಲ್ಲಾರಾವ್ ಕುಲಕರ್ಣಿ, ಮರಿಲಿಂಗ ಸಗರ, ನಿಂಗು ತಿಮ್ಮಾಪುರ, ಸಾಬರಡ್ಡಿ ಸಗರ, ಪರಶುರಾಮ ಸಗರ, ದಂಡಪ್ಪ ಸಗರ, ರಾಜು ಶರಣು, ವೆಂಕಯ್ಯ ಹೊಸಕೇರಾ, ಹಣಮಂತ ಹಳಿಸಗರ, ದೇವು ಹೊಸಕೇರಾ, ಶ್ರೀಶೈಲ್ ಸಗರ ಸೇರಿದಂತೆ ಇತರರು ಭಾಗವಹಿಸಿದ್ದರು.

ಒಟ್ಟಾರೆ ಪ್ರತಿಭಟನೆ, ಮುತ್ತಿಗೆ ರೈಲ್ ತಡೆ ನಡೆದಿದ್ದರೂ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಬಂದ್ ತಟ್ಟಿಲ್ಲ. ಜಿಲ್ಲಾದ್ಯಂತ ಸರ್ಕಾರಿ ಬಸ್ ಗಳು, ವಾಃನಗಳ ಸಂಚಾರ ಸುಗಮವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button