ಪ್ರಮುಖ ಸುದ್ದಿ

ನಿಖರ ಅಂಕಿ-ಅಂಶಗಳಿಂದ ಉತ್ತಮ ಆಡಳಿತ ಸಾಧ್ಯ- ಪ್ರಕಾಶ ರಜಪೂತ

ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲ್‍ನೋಬಿಸ್‍ರವರ ಜನ್ಮದಿನಾಚರಣೆ

ಯಾದಗಿರಿಃ ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯಕ್ಕೂ ಅಂಕಿ-ಅಂಶಗಳ ಅವಶ್ಯಕತೆ ಇರುತ್ತದೆ. ಅಂಕಿ-ಅಂಶಗಳಿಲ್ಲದೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಆಡಳಿತ ನಡೆಸಲು ಕೂಡ ನಿಖರವಾದ ಅಂಕಿ-ಅಂಶಗಳು ಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅವರು ಹೇಳಿದರು.

ಇಲ್ಲಿನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವತಿಯಿಂದ ಖ್ಯಾತ ಸಾಂಖ್ಯಿಕ ತಜ್ಞರಾದ ಪ್ರೊ.ಪ್ರಶಾಂತ ಚಂದ್ರ ಮಹಾಲ್‍ನೋಬಿಸ್‍ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 13ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಜನಗಣತಿ, ಆರ್ಥಿಕ ಗಣತಿ, ಮಳೆ ಪ್ರಮಾಣ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಗಾಗಿ ಜಿಲ್ಲಾಡಳಿತವು ಸಂಖ್ಯಾ ಸಂಗ್ರಹಣ ಇಲಾಖೆಯನ್ನು ಅವಲಂಬಿಸಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸರಿಯಾದ ಅಂಕಿ-ಅಂಶಗಳನ್ನು ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಸುನೀಲ್ ಬಿಸ್ವಾಸ್ ಅವರು ಮಾತನಾಡಿ, ಅಂಕಿ-ಅಂಶ ಇಲ್ಲದಿದ್ದರೆ ಮನೆಯ ಬಜೆಟ್ ಕೂಡ ನಿರ್ಧರಿಸಲು ಸಾಧ್ಯವಿಲ್ಲ. ನಿಖರ ಅಂಕಿ-ಅಂಶ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಸದ್ಯ ಏಳನೆಯ ಆರ್ಥಿಕ ಗಣತಿಯು ಕಾಮನ್ ಸರ್ವೀಸ್ ಸೆಂಟರ್, ಇ-ಗವರ್ನನ್ಸ್ ಸರ್ವೀಸ್ ಇಂಡಿಯಾ ಲಿಮಿಟೆಡ್ ಹಾಗೂ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್ ನೇತೃತ್ವದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ನಡೆಯಲಿದೆ. ಗಣತಿದಾರರು ಪ್ರತಿ ಮನೆ, ಉದ್ಯಮ/ಘಟಕಗಳಿಗೆ ಭೇಟಿ ನೀಡಿ, ಅಂಕಿ-ಅಂಶ ಸಂಗ್ರಹಿಸುವರು ಎಂದು ತಿಳಿಸಿದರು.

ಸರ್ಕಾರವು ಪ್ರತಿ ವರ್ಷ ಒಂದು ವಿಷಯವನ್ನು ಆಯ್ಕೆ ಮಾಡಿ, ಸಾಂಖ್ಯಿಕ ದಿನವನ್ನು ಆಚರಣೆ ಮಾಡುತ್ತದೆ. ಈ ಬಾರಿ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಯನ್ನು ಮನೆಯಿಂದಲೇ ಆರಂಭಿಸಿದರೆ ಮಾತ್ರ ಬದಲಾವಣೆ ಸಾಧ್ಯ. ಮನುಷ್ಯ ಆರ್ಥಿಕ ಅಭಿವೃದ್ಧಿ ಹೊಂದಿದಂತೆಲ್ಲಾ ಸೈಕಲ್ ಬದಲು ಬೈಕ್, ಬೈಕ್ ನಂತರ ಕಾರು ಹೀಗೆ ಖರೀದಿಸುತ್ತಿದ್ದಾನೆ.

ಆದರೆ, ಇದರಿಂದ ಪರಿಸರದ ಜೊತೆಗೆ ತನ್ನ ಆರೋಗ್ಯ ಹಾಳಾಗುತ್ತಿರುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ಈ ರೀತಿಯಾಗಿ ಯೋಚನೆ ಮಾಡುವ ಅತ್ಯವಶ್ಯವಿದೆ. ಒಂದು ಮರ ಕಡಿದರೆ ಎರಡು ಗಿಡ ನೆಡಬೇಕು. ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದಾಗಿ ಅವರು ಉದಾಹರಣೆ ಸಹಿತ ವಿವರಿಸಿದರು.

ಎಲ್‍ಕೆಇಟಿ ಮಹಿಳಾ ಮಹಾವಿದ್ಯಾಲಯ ಪ್ರಾಂಶುಪಾಲರಾದ ಜಿ.ಎಂ.ವಿಶ್ವಕರ್ಮ ಅವರು ಉಪನ್ಯಾಸ ನೀಡಿ, ಪಂಚವಾರ್ಷಿಕ ಯೋಜನೆಯಲ್ಲಿ ಪ್ರೊ.ಪಿ.ಸಿ.ಮಹಾಲ್‍ನೋಬಿಸ್‍ರವರ ಕೊಡುಗೆ ಅಪಾರವಾಗಿದೆ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅಂಕಿ-ಅಂಶಗಳು ಅಗತ್ಯವಾಗಿ ಬೇಕು. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಅಂಶಗಳಿಗೆ ಸರ್ಕಾರದ ಜೊತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ನಾಗೂರ ಅವರು ಮಾತನಾಡಿ, ಅಂಕಿ-ಸಂಖ್ಯೆಗಳ ತಪ್ಪು ಮಾಹಿತಿ ಸಂಗ್ರಹದಿಂದ ಆಡಳಿತದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಯಾವುದೇ ಮಾಹಿತಿ ಸಂಖ್ಯಾ ಸಂಗ್ರಹಣಾ ಇಲಾಖೆಯಲ್ಲಿ ತಯಾರಾಗುವುದಿಲ್ಲ.

ವಿವಿಧ ಇಲಾಖೆಗಳಿಂದ ಪಡೆದ ಮಾಹಿತಿ ಆಧರಿಸಿ, ಅಂಕಿ-ಅಂಶಗಳ ವರದಿ ಸಿದ್ಧಪಡಿಸುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿಗಳು ವಿವಿಧ ಇಲಾಖೆಗಳು ನೀಡುವ ಅಂಕಿ-ಅಂಶಗಳು ಸರಿ ಅಥವಾ ತಪ್ಪು ಇದೆಯಾ ಎಂಬುದನ್ನು ವಿಮರ್ಶೆ ಮಾಡಬೇಕು ಎಂದು ಕಿವಿಮಾತು ಹೇಳುತ್ತಾ ಇಲಾಖೆಯ ಕಾರ್ಯವೈಖರಿಯನ್ನು ವಿವರಿಸಿದರು.

ಸಾಂಖ್ಯಿಕ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಸಂಗಮೇಶ್ವರ ಗುರುಸ್ಥಲಮಠ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಪ್ರಭಾರ ಉಪ ಕಾರ್ಯದರ್ಶಿಗಳಾದ ದೇವಿಕಾ ಆರ್. ಅವರು ಉಪಸ್ಥಿತರಿದ್ದರು. ನೀಲಾ ವಳಕೇರಿ ಅವರು ಪ್ರಾರ್ಥಿಸಿದರು. ಶಶಿಧರ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ನಂದಿನಿ ಅವರು ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button