ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಶರಣಗೌಡ ಕಂದಕೂರ ಉಪವಾಸ ಸತ್ಯಾಗ್ರಹ
ಯುಟರ್ನ್ ಹೊಡೆದ ಪೋಲೀಸ್ ಇಲಾಖೆ, ಎರಡನೇ ದಿನಕ್ಕೆ ಮುಂದುವರೆದ ಜೆಡಿಎಸ್ ಪ್ರತಿಭಟನೆ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ಮಾಡುತ್ತಿರುವ ಯಾದಗಿರಿ ನಗರ ಪಿಎಸ್ಐ ಬಾಪುಗೌಡ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ಯುವ ಘಟಕದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನಡೆಸುತ್ತಿರುವ ಪ್ರತಿಭಟನಾ ಧರಣಿ ಮಂಗಳವಾರ ಎರಡನೇ ದಿನಕ್ಕೆ ಮುಂದುವರೆಯಿತು.
ಸೋಮವಾರ ಬೆಳಿಗ್ಗೆಯಿಂದಲೇ ನಗರ ಪೋಲೀಸ್ ಠಾಣೆ ಎದುರು ಆರಂಭಿಸಿದ ಪ್ರತಿಭಟನಾ ಧರಣಿಯು ಮಂಗಳವಾರವೂ ಮುಂದುವರೆದಿದ್ದು ಶರಣಗೌಡ ಕಂದಕೂರ ಅವರು ಬೆಳಿಗ್ಗೆಯಿಂದ ಏನನ್ನೂ ತಿನ್ನದೇ ಉಪವಾಸ ಸತ್ಯಗ್ರಹ ಮಾಡುತ್ತಿದ್ದು ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾ ಸ್ಥಳಕ್ಕೆ ಜೇವರ್ಗಿ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಯುವ ಮುಖಂಡ ಶರಣಗೌಡ ಕಂದಕೂರ ಜೊತೆಯಲ್ಲಿ ಈ ಕುರಿತಂತೆ ಚರ್ಚೆ ಮಾಡಿದರು.
ಯುಟರ್ನ್ ಹೊಡೆದ ಎಸ್ಪಿ, ಐಜಿಪಿ :
ಪಿಎಸ್ಐ ಅಮಾನತ್ತಿಗೆ ಒತ್ತಾಯಿಸಿ ನಡೆದ ಸೋಮವಾರದ ಪ್ರತಿಭಟನೆಯಲ್ಲಿ ಸಾಯಂಕಾಲ ಎಸ್ಪಿಯವರು ಅವರನ್ನು ಅಮನತ್ತು ಮಾಡುವುದಾಗಿ ಭರವಸೆ ನೀಡಿದ್ದರು. ಶರಣಗೌಡರು ಅಮಾನತ್ತಿನ ಪತ್ರವನ್ನು ಕೇಳಿದ್ದರು. ನಂತರದ ಬೆಳವಣಿಗೆಯಾಗಿ ತಡರಾತ್ರಿ ಕಲಬುರಗಿ ವಿಭಾಗೀಯ ಐಜಿಪಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಐಜಿಪಿ, ಎಸ್ಪಿಯವರು ಈ ಕುರಿತಂತೆ ಪಿಎಸ್ಐ ರನ್ನು ಅಮಾನತ್ತು ಮಾಡಲು ಆಗುವುದಿಲ್ಲಾ ಎಂದು ಯುಟರ್ನ್ ಹೊಡೆದಿದ್ದಾರೆ. ಪೋಲೀಸರ ಈ ನಡೆ ರಾಜಕೀಯ ಪ್ರೇರಿತ ಎಂದು ಜನರ ಚರ್ಚೆಗೆ ಗ್ರಾಸವಾಗಿದೆ. ಈಗ ಮತ್ತೆ ಪ್ರತಿಭಟನೆಯು ಟ್ವಿಸ್ಟ್ ಪಡೆದುಕೊಂಡಿದೆ. ಆಡಿಯೋ ಕ್ಯಾಸೆಟ್ಟಿನ ಪ್ರಕರಣದ ವಾಸನೆ ಇಲ್ಲಿ ಕಂಡುಬರುತ್ತಿದೆ. ಇದು ನೇರವಾಗಿ ರಾಜ್ಯ ಸರ್ಕಾರ ವರ್ಸಸ್ ಶರಣಗೌಡ ಕಂದಕೂರ ಅವರ ನಡುವಿನ ನೇರ ಹಣಾಹಣಿ ಮತ್ತು ಹೈಡ್ರಾಮ ಎಂದೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಪೋಲೀಸ್ ಬಿಗಿ ಬಂದೋಬಸ್ತ್ :
ಗುರುಮಠಕಲ್ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಯಾದಗಿರಿ ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನಾ ಸ್ಥಳವಾದ ನಗರ ಪೋಲೀಸ್ ಠಾಣೆ ಗಾಂಧಿ ವೃತ್ತದಲ್ಲಿ ಅಪಾರ ಪ್ರಮಾಣದ ಜೆಡಿಎಸ್ ಕಾರ್ಯಕರ್ತರು ಜಮಾವಣೆಗೊಂಡ ಕಾರಣ ಮತ್ತು ಇಂದು ಈ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸುವ ಹಿನ್ನೆಲ್ಲೆಯಲ್ಲಿ ಅಹಿತಕರ ಘಟನೆ ಸಂಭವಿಸದೇ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ 150 ಕ್ಕೂ ಹೆಚ್ಚು ಪೋಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ವಿವಿಧ ಠಾಣೆಗಳಿಂದ ಪೋಲೀಸರನ್ನು ಕರೆಸಲಾಗಿದೆ. ಸ್ಥಳದಲ್ಲಿ ಪೋಲೀಸ್ ವ್ಯಾನ್ಗಳನ್ನು ಇರಿಸಲಾಗಿದ್ದು ಕಂಡುಬಂದಿತು.
ಮಾಜಿ ಪ್ರಧಾನಿ ದೇವೇಗೌಡ ಯಾದಗಿರಿಗೆ :
ತಮ್ಮ ಕಾರ್ಯಕರ್ತರ ಮೇಲೆ ಅಮಾನವೀಯವಾಗಿ ವರ್ತಿಸಿದ ಮತ್ತು ಹಲ್ಲೆ ಗೈದ ಯಾದಗಿರಿ ನಗರ ಪಿಎಸ್ಐರನ್ನು ಕೂಡಲೇ ಅಮಾನತ್ತು ಮಾಡುವಂತೆ ಒತ್ತಾಯಿಸಿ, ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಟ್ಟು ಹಿಡುದು ಕುಳಿತಿರುವ ಶರಣಗೌಡ ಕಂದಕೂರ ಅವರ ಪ್ರತಿಭಟನೆಗೆ ಯುವಕರ ದಂಡು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದೆ.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರವರು ಬರುತ್ತಿರುವುದು ಖಚಿತವಾಗಿದ್ದು. ಪ್ರತಿಭಟನೆಯು ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ರಾಜ್ಯದ ರಾಜಕೀಯ ವಲಯದಲ್ಲಿ ಇದೊಂದು ಸಂಚಲನವನ್ನು ಉಂಟುಮಾಡಿದ ಪ್ರತಿಭಟನೆ ಎನ್ನುವುದು ಬಹುಜನರ ಅಭಿಮತವಾಗಿದೆ.