ಮನುಷ್ಯನಿಗೆ ಮೊದಲು ಕಣ್ಣಿನ ಸುಸ್ಥಿತಿ ಅಗತ್ಯ-ಡಾ.ಉಪ್ಪಿನ್
ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಯಾದಗಿರಿ, ಶಹಾಪುರಃ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಸರ್ಕಾರಿ ಆಸ್ಪತ್ರೆ ಆಶ್ರಯದಲ್ಲಿ ಬೆಂಗಳೂರಿನ ಜನಹಿತ ಐ ಕೇರ್ ಕೇಂದ್ರದಿಂದ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೇತ್ರ ತಜ್ಞ ಡಾ.ಜಗಧೀಶ ಉಪ್ಪಿನ್ ಮಾತನಾಡಿ, ಕಣ್ಣು ಮನುಷ್ಯನ ಪ್ರಮುಖ ಅಂಗ. ಕಣ್ಣು ಸುಸ್ಥಿತಿಯಲ್ಲಿದ್ದರೆ ಮಾನವ ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಕೈಗೊಳ್ಳಲು ಸಾಧ್ಯವಿದೆ.
ಹೀಗಾಗಿ ಪ್ರಸ್ತುತ ಒತ್ತಡದ ದಿನ ಹಾಗೂ ಕೆಟ್ಟ ಹವಾಮಾನದಿಂದ ಕಣ್ಣು ರೋಗ ಸಾಮಾನ್ಯವಾಗಿದೆ. ವಯಸ್ಸಾದವರಿಗೆ ಮಾತ್ರ ಕಣ್ಣು ರೋಗ, ಬಾಧೆ ಬರಲಿದೆ ಎಂದುಕೊಳ್ಳುವದು ತಪ್ಪು.
ಕಣ್ಣಿನ ತೊಂದರೆ ಇದ್ದವರೂ ಶಿಬಿರದಲ್ಲಿ ಭಾಗವಹಿಸಿ ಸೂಕ್ತ ತಪಾಸಣೆಗೆ ಒಳಪಟ್ಟು, ಶಸ್ತ್ರ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಿಕೊಳ್ಳಬೇಕು. ಉಚಿತವಾಗಿ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಪ್ರತಿ ಮಾಸಿಕ ಇಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕೈಗೊಳ್ಳಲಾಗುತ್ತಿದೆ. ಇಂತಹ ಸದಾವಕಾಶವನ್ನು ಕಳೆದುಕೊಳ್ಳದೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಶಿಬಿರ ಕುರಿತು ಇತರರಿಗೆ ಮಾಹಿತಿ ನೀಡುವ ಮೂಲಕ ತಾವುಗಳೆಲ್ಲರೂ ಸಹಕಾರ ನೀಡಬೇಕು. ವಯಸ್ಸಾದ ತಂದೆ ತಾಯಂದಿರನ್ನು ಕರೆದುಕೊಂಡು ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ನೇತ್ರ ತಜ್ಞರಾದ ಡಾ.ಕೃಷ್ಣಾಮೋಹನ್ ಜಿಂಕಾ, ಡಾ.ಹರಿಪ್ರಸಾದ ಮತ್ತು ಆಸ್ಪತ್ರೆ ಸಿಬ್ಬಂದಿಗಳಾದ ರಮೇಶ, ಬಸವರಾಜ ಪಟ್ಟೇದ, ನೇತ್ರಾವತಿ, ವೆಂಕಟಲಕ್ಷ್ಮಿ, ಶ್ರೀನಿವಾಸ, ವಿಜಯಲಕ್ಷ್ಮಿ, ಅಮೃತ ಇತರರಿದ್ದರು.
ಎರಡು ದಿನಗಳ ಕಾಲ ಶಿಬಿರ ನಡೆಯಲಿದ್ದು, ಮೊದಲ ದಿನವಾದ ಮಂಗಳವಾರ ಸಂಜೆವರೆಗೆ ಅಂದಾಜು 100 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸಾ ಸೌಲಭ್ಯ ಪಡೆದುಕೊಂಡರು ಎಂದು ಆಯೋಜಕರು ತಿಳಿಸಿದ್ದಾರೆ.