ಬಸವಭಕ್ತಿಮಹಿಳಾ ವಾಣಿ

ಸ್ತ್ರೀ ನೋಡುವ ದೃಷ್ಟಿ ಬದಲಾಗಲಿ – ಡಾ. ಮಹೇಶಕುಮಾರ ಗಂವ್ಹಾರ

ವಿಶ್ವ ಮಹಿಳಾ ದಿನಾಚರಣೆ - ಲೇಖಕರ ಚಿಂತನ ಮಂಥನ

ಸ್ತ್ರೀ ನೋಡುವ ದೃಷ್ಟಿ ಬದಲಾಗಲಿ – ಡಾ. ಮಹೇಶಕುಮಾರ ಗಂವ್ಹಾರ

ವಿವಿ ಡೆಸ್ಕ್ಃ  ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣನ್ನು ಕಾಣುವ ಸಮಾಜದ ದೃಷ್ಟಿಕೋನ ಬದಲಾಗಬೇಕಾಗುವ ಅವಶ್ಯಕತೆ ಇದೆ. ಆಕೆಯನ್ನು ಗೌರವಿಸೋಣ, ಒಳ್ಳೆಯ ಭಾವನೆಯಿಂದ ನೋಡೋಣ ಪ್ರತಿಯೊಬ್ಬ ಹೆಣ್ಣುಮಗಳನ್ನು ನಮ್ಮ ಮನೆಯ ಮಗಳು, ತಾಯಿ, ಅಕ್ಕ-ತಂಗಿ ಎಂದು ತಿಳಿದು ನಡೆದಾಗ ಆಕೆಯ ಸಮಸ್ಯೆಗಳು ಕಡಿಮೆಯಾಗಿ ದೇಶದಲ್ಲಿ ಅತ್ಯಾಚಾರ ಕಡಿಮೆಯಾಗುವುದು .

ಪ್ರತಿಯೊಂದು ಮನೆಯಲ್ಲಿ ಒಂದಿಲ್ಲಾ ಒಂದು ಪಾತ್ರವನ್ನು ನಿರ್ವಹಿಸುತ್ತ ತನ್ನ ತನವನ್ನು ಉಳಿಸಿಕೊಂಡು ಬಂದಿದ್ದಾಳೆ, ಹೆಣ್ಣು ಕಣ್ಣಿಗೆ ಕಾಣುವ ಪ್ರಕೃತಿಯ ಒಡಲು ಸಮಾಜ ಜೀವವಾಹಿನಿ ಮುಂದುವರೆಯ ಬೇಕೆಂದರೆ ನಾವು ಹೆಣ್ಣನ್ನು ಗೌರವಿಸಬೇಕು.
ನಾವು ಇತಿಹಾಸದ ಪುಟಗಳನ್ನು ನೋಡಿದಾಗ ಹೆಣ್ಣನ್ನು ನಮ್ಮ ಭಾರತೀಯ ಸಮಾಜದಲ್ಲಿ ಅಷ್ಟೊಂದು ಗೌರವಯುತವಾಗಿ ನಡೆಸಿಕೊಂಡಿರುವುದು ಕಂಡುಬಂದಿಲ್ಲಾ ಯಾವುದೇ ಸಂದರ್ಭದಲ್ಲಿ ಅವಳನ್ನು ಈ ಪುರುಷ ಪ್ರಧಾನ ಸಮಾಜ ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಿಲ್ಲ. ಅಂದಿನಿಂದ ಇಂದಿನವರೆಗೂ ಅವಳು ಒಂದಲ್ಲಾ ಒಂದು ರೀತಿಯಲ್ಲಿ ನಿರಂತರವಾಗಿ ಶೋಷಣೆಯನ್ನು ಅನುಭವಿಸುತ್ತ ಬಂದಿದ್ದಾಳೆ.

12 ನೇ ಶತಮಾನದಲ್ಲಿ ಬಸವಾದಿ ಶರಣರು ವಚನಕಾರರು ಹೆಣ್ಣುಮಕ್ಕಳಿಗೆ ಧಾರ್ಮಿಕ ದೀಕ್ಷೆ ನೀಡುವುದರ ಮೂಲಕವಾಗಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ಸೃಷ್ಟಿಸಿದ ಯುಗ ಎಂದರೆ ಬಹುಶ ತಪ್ಪಾಗಲಾರದು.

ವಚನಕಾರರ ಪೂರ್ವ ಕಾಲದಲ್ಲಿ ಹೆಣ್ಣು ನಾನಾ ರೀತಿಯಲ್ಲಿ ಶೋಷಣೆ ಅನುಭವಿಸಿದ್ದ ಅವಳು ಇಂದು ಶರಣರು,ಸಮಾಜ ಸುಧಾಕರ, ಮಹಿಳಾ ಹೋರಾಟಗಾರ ಅವಿರತ ಪ್ರಯತ್ನದ ಫಲವಾಗಿ ಆಕೆಯ ಪರಿಸ್ಥಿತಿ ಬದಲಾಗಿ ಆಕೆಯು ಕಾಯಕ,ಆಡಳಿತ,ಶಿಕ್ಷಣ, ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ.

ಶೂನ್ಯ ಪೀಠ ಅಧ್ಯಕ್ಷರಾದ ಅಲ್ಲಮಪ್ರಭುಗಳ ವಚನದಲ್ಲಿ ಹೆಣ್ಣು, ಹೊನ್ನು, ಮಣ್ಣು, ಮಾಯೆಯಲ್ಲಾ ಎಂದಿರುವರು ನಮ್ಮ ಮನಸ್ಸಿನಲ್ಲಿರುವ ಆಸೆಯೇ ಮಾಯೇ ಎಂದಿರುವರು ಅವರ ವಚನದ ಮೂಲಕ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

“ ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲಾ,ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲಾ,ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲಾ, ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ”.
ಕೆಲವು ವಚನಕಾರರು ಹೆಣ್ಣು ಮತ್ತು ಗಂಡಿನ ನಡುವಿನ ಲಿಂಗ ತಾರತಮ್ಯವನ್ನು ಖಂಡಿಸಿ ಸಮಾನತೆಯನ್ನು ಸಾರಿರುವುದು ಕಂಡುಬರುತ್ತದೆ.

“ಮೊಲೆ ಮುಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು,
ನಡುವೆ ಸುಳಿವ ಆತ್ಮ ಗಂಡು ಅಲ್ಲಾ, ಹೆಣ್ಣು ಅಲ್ಲಾ,ಕಾಣಾ ರಾಮನಾಥ.”.
ದಾಸಿಮಯ್ಯನವರು ತಮ್ಮ ಈ ವಚನದಲ್ಲಿ ಗಂಡು ಹೆಣ್ಣಿನ ನಡುವಿರುವುದು ಕೇವಲ ಒಂದು ದೈಹಿಕ ವ್ಯತ್ಯಾಸ  ಅದೊಂದು ಕಣ್ಣಿಗೆ ಕಾಣಿಸುವಂತಹ ಒಂದು ಬಹಿರಂಗ ನೋಟ ಎಂದು ಹೇಳುತ್ತ ಪ್ರತಿಯೊಂದು ಜೀವಿಯಲ್ಲಿರುವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ ಎಂದು ಹೇಳುತ್ತಾ ಈ ತಾರತಮ್ಯ ಸಲ್ಲದು ಎಂದು ಹೇಳಿದ್ದಾರೆ.

ಹೆಣ್ಣಿನ ಬಗ್ಗೆ ಇದ್ದ ಸ್ವಲ್ಪ ತಾತ್ಸಾರ ಭಾವನೆ ಶರಣರ ವಚನಗಳ ಮೂಲಕ ಸ್ವಲ್ಪಮಟ್ಟಿಗಾದರು ಕಡಿಮೆಯಾಯಿತು ಎನ್ನವುದೇ ಒಂದು ಸಮಾಧಾನದ ಸಂಗತಿ.
ಹಲವು ವಚನಗಾರ್ತಿಯರು ಹೆಣ್ಣು ತನದ ಬಗ್ಗೆ ತಮ್ಮ ವಚನಗಳ‌ ಮೂಲಕವಾಗಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೇ ಕಾಯಕ, ದಾಸೋಹದ ಮಹತ್ವ ಹಾಗೂ ಅತಿಯಾದ ಆಸೆ ಒಳ್ಳೆಯದಲ್ಲಾ ಎನ್ನುವುದನ್ನು ಹೇಳುವುದರ ಮೂಲಕವಾಗಿ ಸಮಾಜದಲ್ಲಿನ ಓರೆ ಕೊರೆಗಳನ್ನು ತಿದ್ದಿ ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕಾಗಿ ಪುರುಷನಿಗೆ ಸಮಾನವಾದ ಪಾತ್ರ ನಿರ್ವಹಿಸಿದ್ದಾಳೆ.
ಬಸವಾದಿ ಶರಣರು ಎಂದಿಗೂ ಪರ ಸ್ತ್ರೀ, ಪರ ಧನದ ವ್ಯಾಮೋಹಕ್ಕೆ ಒಳಗಾಗಬಾರದು ಎಂದು ಹೇಳುತ್ತ ಪರ ಸ್ತ್ರೀಯ ವೋಹಕ್ಕೆ ಒಳಗಾದ ಪರಮ ಶಿವಭಕ್ತ ರಾವಣ ಎಂತಹ ದುರಂತ ಅಂತ್ಯವನ್ನು ಕಾಣಬೇಕಾಯಿತು ಎಂಬುದನ್ನು ಅವರ ಈ ವಚನದ ಮೂಲಕವಾಗಿ ತಿಳಿದುಕೊಳ್ಳೋಣ.

“ ಹರಿವ ಹಾವಿಗಂಜೆ, ಉರಿವ ನಾಲಿಗೆಗಂಜೆ
ಸುರಗಿಯ ಮೊನೆಗಂಜೆ,ಒಂದಕ್ಕಂಜುವೇ ಒಂದಕ್ಕಳುಕುವೇ ಪರ ಸ್ತ್ರೀ ಪರಧನವೆಂಬ ಜೂಜಿಗಂಜುವೇ ಮುನ್ನಂಜದ ರಾವಳನೇ ವಿಧಿಯಾದ ಅಂಜುವೇನಯ್ಯ ಕೂಡಲಸಂಗಮದೇವಾ”.

ಇದು ಪ್ರಾಚೀನ ಭಾರತೀಯ ಕಾಲದಲ್ಲಿ 12 ನೇ ಶತಮಾನದಲ್ಲಿ ಮಹಿಳೆಯರು ಅಂತಸ್ತು ಸ್ಥಾನಮಾನಗಳನ್ನು ಗಮನಿಸುತ್ತ ಸಾಗಿ ಮುಂದೆ ಬಂದಾಗ ಮಧ್ಯಯುಗದ ಕಾಲವಂತು ಭಾರತೀಯ ಮಹಿಳೆಯರ ಪಾಲಿನ ಕಗ್ಗತ್ತಲೆಯ ಯುಗ ಎಂದು ಇತಿಹಾಸಕಾರರು ಕರೆದಿದ್ದಾರೆ.

ಸತಿ ಸಹಗಮನಪದ್ದತಿ, ವಿಧವಾ ಪುನರ್ವಿವಾಹದ ಮೇಲಿನ ನಿಷೇಧ, ದೇವದಾಸಿ ಪದ್ದತಿ, ಹೀಗೆ ಮೂಢನಂಬಿಕೆ,ದೇವರ ಹೆಸರಿನಲ್ಲಿ ಅವಳ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯ, ಶೋಷಣೆ ನಡೆದಿರುವುದನ್ನು ನಾವು ಅರಿತಿದ್ದೆವೆ.
ಸ್ವತಂತ್ರ ಭಾರತದಲ್ಲಿ ಇಂದು ಭಾರತೀಯ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದಾಗ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟು ಇದೆ.
ಇಂದು ಎಲ್ಲ ಕಡೆಗಳಲ್ಲಿ ಸಾಮನ್ಯವಾಗಿ ಕೇಳಿ ಬರುವ ಒಂದು ಮಾತು ಮಹಿಳಾ ಸಬಲೀಕರಣ ಹಾಗೆಂದ ಮಾತ್ರಕ್ಕೆ ಇವತ್ತು ನಾವು ಸಂಪೂರ್ಣ ಮಹಿಳಾ ಸಬಲೀಕರಣವನ್ನು ಸಾಧಿಸಿದ್ದೆವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿ ಕೊಳ್ಳ ಬೇಕಾಗಿದೆ.

ಮಹಿಳಾ ಸಬಲಿಕರಣ ಎಂದರೆ ಮಹಿಳೆಯರು ತಾವು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಮತ್ತು ಆಯ್ಕೆ ಇದ್ದಾಗ. ಆದರೆ ವಾಸ್ತವವಾಗಿ ನಾವು ಪುರುಷರು ಇಂದಿನ ತಾಂತ್ರಿಕ ವಿಜ್ಞಾನ ಯುಗದಲ್ಲಿಯೂ ನಿಜವಾಗಿಯೂ ಅವಳಿಗೆ ನಾವು ಆ ಅವಕಾಶವನ್ನು ನೀಡಿಲ್ಲ. ಕೇವಲ ಭಾಷಣದಲ್ಲಿ ವೇದಿಕೆಗಳ ಮೇಲೆ ಮಾತನಾಡುವ ನಾವುಗಳು ಅವಳು ತನ್ನ ಸ್ವಂತ ಕಾಲಮೇಲೆ ನಿಲ್ಲಲು ಸಹಕರಿಸುತ್ತಿಲ್ಲ.

ಒಂದು ರೀತಿಯಲ್ಲಿ ಮಹಿಳಾ ಸಬಲಿಕರಣವು ಹೊಸ ಗಾಳಿಯ ಹುಸಿರಾಗಿದೆ ಅದರ ಪರಿಣಾಮವಾಗಿ ಇಂದು ಮಹಿಳೆ ತಮ್ಮ ಹಕ್ಕುಗಳ ಬಗ್ಗೆ ಹಾಗೂ ಪುರುಷನನ್ನು ಅವಲಂಬಿಸದೆ ಹೇಗೆ ಸಮಾಜದಲ್ಲಿ ತಮ್ಮ ಸ್ಥಾನಮಾನ, ಅಂತಸ್ಥು ಪಡೆದು ಕೊಳ್ಳಬಹುದು ಎಂಬ ಅರಿವು ಮೂಡಿಸಿದೆ.

ಎಷ್ಟೇ ಪ್ರಗತಿಪರ ದೇಶಗಳಾಗಿದ್ದರು ಅಲ್ಲಿಯು ಮಹಿಳೆಯರು ಶೋಷಣೆ ಅನುಭವಿಸುತ್ತಿದ್ದಾರೆ ಮತ್ತು ಎಲ್ಲಾ ಕಡೆಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡ ಇತಿಹಾಸವಿದೆ .
ಜಗತ್ತಿನಲ್ಲಿ ಇಂದು ಮಹಿಳೆಯರಿಗೆ ಸುರಕ್ಷತವಲ್ಲದ ದೇಶಗಳಲ್ಲಿ ಭಾರತವು ಒಂದಾಗಿದೆ. ಹಾಗಾಗಿ ಇದಕ್ಕೆ ಕಾರಣಗಳು ಹತ್ತು ಹಲವು .ವಿಶೇಷವಾಗಿ ಇಂದು ಭಾರತೀಯ ಮಹಿಳೆಯರು ಮರ್ಯಾದಾ ಹತ್ಯೆಯ ಅಪಾಯ ಎದಿರುಸುತ್ತಿದ್ದಾರೆ.

ಇಂದು ನಿಜವಾಗಿಯೂ ನಾವು ಸ್ತ್ರೀ-ವಾದ ,ಭಾಷಣ, ಲೇಖನಗಳನ್ನು ಬರೆಯುವುದರ ಮುಖೇನವಾಗಿ ಕೇವಲ ಮಾರ್ಚ ತಿಂಗಳಲ್ಲಿ ಮಾತ್ರ ಮಹಿಳೆಯರ ಕುರಿತು ಅವರ ಸಮಸ್ಯೆ ಕುರಿತು ಮಾತನಾಡದೇ ನಿಜವಾಗಿಯು ಅವರ ಬಾಳಿನಲ್ಲಿ ಒಂದು ನೂತನ ಬೆಳುಕು ಮೂಡಿಸಲು ಬಯಸುವುದಾದರೆ ಅವಳನ್ನು ಸಬಲೀಕಕರಣಗೊಳಿಸಲು ಹಲವಾರು ಮಾರ್ಗಗಳಿವೆ. ಈ ನಿಟ್ಟಿನಲ್ಲಿ ವ್ಯಕ್ತಿಗಳು, ಸಂಘಟನೆಗಳು, ಸರ್ಕಾರ ಒಟ್ಟಾಗಿ ಬಹಳ ಮುತುರ್ವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ.

ಹೆಣ್ಣು ಮಕ್ಕಳು ಅಕ್ಷರಸ್ತರಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹೆಣ್ಣುಮಕ್ಕಳ ಶಿಕ್ಷಣವನ್ನು ಕಡ್ಡಾಯಗೊಳಿಸುವ ಅವಶ್ಯಕತೆ ಇದೆ. ಹೆಸರಿಗೆ ಮಾತ್ರ ರಾಜಕೀಯ, ಸಾಮಾಜಿಕ, ಧಾರ್ಮಿಕ, ಇತರ ಕ್ಷೇತ್ರದಲ್ಲಿ ಮೀಸಲಾತಿ ನೀಡದೆ ವಾಸ್ತವವಾಗಿ ಸಮಾಜದಲ್ಲಿ ಬಲವಾಗಿ ಬೇರೂರಿರುವ ಲಿಂಗ ತಾರತಮ್ಯ ನೀತಿಯನ್ನು ಬೇರು ಸಹಿತ ಕಿತ್ತು ಹಾಕಿದಾಗ ಮಾತ್ರ ಅವಳ ಜೀವನ ಬದುಕು ಸುಂದರಗೊಳ್ಳುತ್ತದೆ,

ಕೇವಲ ಮಹಿಳಾ ದಿನಾಚರಣೆ ಆಚರಿಸಿ ಕೈತೊಳೆದುಕೊಳ್ಳುವುದರಿಂದ ಎನು ಸಾಧಿಸಲು ಸಾಧ್ಯವಿಲ್ಲ ಹಾಗಾಗಿ ಅವಳಿಗೆ ಸ್ವಾವಲಂಬಿ ಬದುಕು‌ ಸಾಗಿಸಲು,ತನ್ನ ಸ್ವಂತ ರಕ್ಷಣೆ ಮಾಡಿಕೊಳ್ಳಲು ಬೇಕಾಗಿರುವ ಕೌಶಲ್ಯವನ್ನು ಕಲಿಯಲು ಎಲ್ಲಾ ವರ್ಗದ ಮಹಿಳೆರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಿಕೊಡಬೇಕು.

ಹೆಣ್ಣನ್ನು ಗೌರವಿಸೋಣ, ಬೆಳೆಸೋಣ ,ಸಂರಕ್ಚಿಸೋಣ ಅವಳು ಎಂದಿಗೂ ಅಬಲೆಯಲ್ಲಾ ಸಬಲೇ ಎಂಬುದನ್ನು ನಾವೇಲ್ಲರೂ ಕೂಡಿಕೊಂಡು ಸಾಬೀತು ಪಡಿಸೋಣ.

ಡಾ.ಮಹೇಶಕುಮಾರ ಗಂವ್ಹಾರ
ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ
ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ.

Related Articles

Leave a Reply

Your email address will not be published. Required fields are marked *

Back to top button