ಮೈಲಾರಲಿಂಗೇಶ್ವರ ಜಾತ್ರೆಃ 75 ವಿಶೇಷ ಬಸ್‍ಗಳ ವ್ಯವಸ್ಥೆ, ಕುರಿ ಬಲಿ ತಡೆಗೆ ಸೂಕ್ತ ಕ್ರಮ
ಯಾದಗಿರಿ: ತಾಲೂಕಿನ ಮೈಲಾಪೂರದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಜನವರಿ 12 ರಿಂದ 17 ರವರೆಗೆ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದ ವತಿಯಿಂದ 75 ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೊಗೇರಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸದರಿ ವಿಶೇಷ ಬಸ್‍ಗಳು ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಾಡಿ, ಸೇಡಂ, ಕೊಡಂಗಲ್, ನಾರಾಯಣಪೇಟ, ತಾಳಿಕೋಟೆ, ಹುಣಸಗಿ, ಕೆಂಭಾವಿ, ಸಿಂಧಗಿ, ಹುಬ್ಬಳ್ಳಿ, ಗದಗ ಮುಂತಾದ ಸ್ಥಳಗಳಿಗೆ ಕಾರ್ಯಚರಣೆ ಮಾಡಲಿವೆ. ಭಕ್ತಾಧಿಗಳು, ಸಾರ್ವಜನಿಕರು ಸದರಿ ವಿಶೇಷ ಬಸ್‍ಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ.! ಕುರಿ ಬಲಿ ತಡೆಗೆ ಸೂಕ್ತ ಕ್ರಮ
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಭಕ್ತಾಧಿಗಳು ನೀಡುವ ಕುರಿ ಬಲಿ ತಡೆಯಲು ಈ ಬಾರಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗೃತವಾಗಿ ಕ್ರಮಗಳನ್ನು ಕೈಗೊಂಡಿದ್ದು, ದೇವಸ್ಥಾನ ದರ್ಶನ ಪಡೆಯಲು ನೂಕುನುಗ್ಗಲು ಆಗದಂತೆ ಕಬ್ಬಿಣದಿಂದ ತಡೆ ಮಾರ್ಗವನ್ನು ನಿರ್ಮಿಸಿದ್ದಾರೆ. ಅಲ್ಲದೆ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಮತ್ತು ಕಳೆದ ನಾಲ್ಕಾರು ವರ್ಷದಿಂದ ಕುರಿ ಬಲಿ ನಿಷೇಧಿಸಿದ್ದರು, ಪೊಲೀಸ್, ಅಧಿಕಾರಿಗಳ ಕಣ್ಣು ತಪ್ಪಿಸಿ ಭಕ್ತಾಧಿಗಳು ಒಂದೋ ಎರಡು ಕುರಿಗಳು ಎಸೆಯುತ್ತಿದ್ದರು. ಆ ಕಾರಣಕ್ಕೆ ಈ ಬಾರಿ ಅದಕ್ಕೆ ತಕ್ಕ ಬಂದೋಬಸ್ತ್ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಚಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.