ಮೂರು ಬಾರಿ ಸಿಎಂ ಹುದ್ದೆ ತಪ್ಪಿದೆ ನಾನೇನೂ ಮುನಿಸಿಕೊಂಡೆನೆ.?-ಖರ್ಗೆ
ಪಟ್ಟಣ ಗ್ರಾಮ, ಕಲಬುರಗಿ ದಕ್ಷಿಣ ಮತಕ್ಷೇತ್ರ ಸಮಾವೇಶ
ಸಿಎಂ ಹುದ್ದೆ ತಪ್ಪಿತೆಂದು ಪಕ್ಷದ ವಿರುದ್ಧ ಮುನಿಸಿಕೊಂಡೆನಾ.?
ಕಲಬುರಗಿಃ ಬೇರೆ ಬೇರೆ ಕಾರಣಗಳಿಂದಾಗಿ ನನಗೂ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ. ಹಂಗಂತ ನಾನೇನಾದರೂ ಬಹಿರಂಗವಾಗಿ ಮಾತನಾಡಿದ್ದೇನೆಯೇ.? ನನಗೆ ಪಕ್ಷ ಹಾಗೂ ಅದರ ಸಿದ್ದಾಂತಗಳು ಮುಖ್ಯವಾಗಿದ್ದವು.
ಆದರೆ, ನಮ್ಮ ಪಕ್ಷದಿಂದ ಹೊರಗೆ ಹೋದವರು ಕೂಡಾ ಸಿದ್ದಾಂತವನ್ನು ಪಾಲಿಸದೆ ಈಗ ಸಂವಿಧಾನ ವಿರೋಧಿ ಪಕ್ಷದಲ್ಲಿ ಕೆಲಸ ಮಾಡುತ್ತಿರುವುದು ನೋಡಿದರೆ ಅವರ ಜನಪರ ಕಾಳಜಿ ತಿಳಿಯುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಂಸದರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಅವರು ಇಂದು ಪಟ್ಟಣ ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದರು.
ನನ್ನ ಅಭಿವೃದ್ದಿ ಪರ ಕೆಲಸಗಳೇ ನನ್ನನ್ನು 11 ಸಲ ಗೆಲ್ಲುವಂತೆ ಮಾಡಿದೆ. ಹಾಗಾಗಿ ಕಲಬುರಗಿಗೆ ಬಂದಿದ್ದರು ಮೋದಿ ನನ್ನ ಬಗ್ಗೆ ಮಾತನಾಡಿಲ್ಲ. ಆದರೆ, ಮೋದಿಯ ಇಲ್ಲಿನ ಮರಿಗಳು ನನ್ನ ಬಗ್ಗೆ ಮಾತನಾಡುತ್ತಿವೆ ಎಂದು ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡಿದರು.
ನನ್ನ ವಿರುದ್ದ ಹೊರಟವರು ತಾವೇ ಮೊದಲು ಸೋತು ಸುಣ್ಣವಾಗಿದ್ದಾರೆ ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಪ್ರಧಾನಿ ಮೋದಿ ದೇಶಭಕ್ತಿಯ ಮಾತನಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ದೇಶಕ್ಕೆ ಹೋರಾಡಿ ತ್ಯಾಗ ಮಾಡಿದಾಗ ಮೋದಿ ಹುಟ್ಟೇ ಇರಲಿಲ್ಲ ಎಂದರು.
ದೇಶದ ಐಕ್ಯತೆಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತಗಳು ಮಾರಕ ಎಂದ ಖರ್ಗೆ ಈ ಸಲದ ಚುನಾವಣೆಯಲ್ಲಿ ಅಂತಹ ಶಕ್ತಿಗಳನ್ನು ದಮನ ಮಾಡಬೇಕು ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವರಿದ್ದರು.