ದೇಶದ ಸಂಕಷ್ಟಗಳಿಗೆ ಮೋದಿ ಕಾರಣ- ಖರ್ಗೆ ಆರೋಪ
ಕಲಬುರ್ಗಿಃ ಕಳೆದ ಐದು ವರ್ಷಗಳಲ್ಲಿ ದೇಶ ಅನುಭವಿಸಿದ ಸಂಕಷ್ಟಗಳ ಬಗ್ಗೆ ಜನರಿಗೆ ಅರಿವಿದೆ. ಇಂತಹ ಮತ್ತಷ್ಟು ಸಂಕಟಗಳು ಮುಂದಿನ ದಿನಗಳಲ್ಲಿ ದೇಶಕ್ಕೆ ಬಂದೊದಗದಂತೆ ತಡೆಯುವ ಶಕ್ತಿ ನಿಮಗೆ ಮಾತ್ರ ಇದೆ.ಅದನ್ನು ಕಾಂಗ್ರೇಸ್ ಗೆ ಮತ ಚಲಾಯಿಸುವ ಮೂಲಕ ಆ ಶಕ್ತಿಯನ್ನು ನಿರೂಪಿಸಿ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದರು.
ನಗರದ ಚಾಂದ್ ಬೀಬಿ ಬಿಎಡ್ ಕಾಲೇಜ್ ನಲ್ಲಿ ನಡೆದ ಅಲ್ಪಸಂಖ್ಯಾತ ಪರಿವರ್ತನೆ ಸಭೆಯಲ್ಲಿ ಅವರು ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ ವಿದ್ಯಾಮಾನಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಸಂಸತ್ತಿನ ಒಳಗೆ ಅಥವಾ ಹೊರಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೇಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ, ದೇಶದಲ್ಲಿ ರಸ್ತೆಗಳ ನಿರ್ಮಾಣ, ಶೈಕ್ಷಣಿಕ ಅಭಿವೃದ್ದಿ, ಆಣೆಕಟ್ಟು ನಿರ್ಮಾಣ ಮಾಡಿದ್ದು ಯಾರು? ಮೋದಿನಾ ? ಎಂದು ಪ್ರಶ್ನಿಸಿದರು.
ಪ್ರಧಾನಿಯಾದ ಮೇಲೆ ನೀವೇನು ಮಾಡಿದ್ದೀರಿ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಯ್ತಾ? 15 ಲಕ್ಷ ಹಣ ಬಡವರ ಅಕೌಂಟ್ ಗೆ ಹಾಕಿದಿರಾ? ಕಾಂಗ್ರೇಸ್ ಗೆ ಪ್ರಶ್ನೆ ಮಾಡುವ ಮುನ್ನ ನೀವೇನು ಮಾಡಿದಿರಿ ಅದನ್ನು ಉತ್ತರಿಸಿ” ಎಂದು ತಿರುಗೇಟು ನೀಡಿದರು.
ಸೈನಿಕರ ಹೆಸರೇಳಿಕೊಂಡು ಮತಕೇಳುವ ಮೋದಿ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಎಷ್ಟು ಜನ ಹುತಾತ್ಮರಾಗಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದು ಸವಾಲೆಸೆದರು.
ಬರೀ ಸುಳ್ಳಗಳ ಮೂಲಕ ಜನರನ್ನು ಮರಳು ಮಾಡುವ ಕಾಲ ದೂರಸರಿದಿದ್ದು ಮೋದಿಯ ಸುಳ್ಳುಗಳನ್ನು ಜನ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ ಜನಪರವಾದ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕರಾದ ಶ್ರೀಮತಿ ಖನೀಜ್ ಫಾತಿಮಾ ಹಾಗೂ ಮತ್ತಿತರಿದ್ದರು.