ಕಾಂಗ್ರೆಸ್ ಮುಕ್ತ ಎನ್ನುತ್ತಲೇ ಅವನತಿಯತ್ತ ಸಾಗಿದ ಬಿಜೆಪಿ..
ಇವಿಎಂ, ವಿವಿಪ್ಯಾಟ್ ಲಾಕ್ ಎಂದು ಕೂಗಿದವರೆಲ್ಲಿದ್ದಾರೆ.?
ಭಾರತೀಯ ಜನತಾ ಪಕ್ಷ ಪ್ರತಿ ಬಾರಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎನ್ನುತ್ತಲೇ ಲೋಕಸಭೆಯಲ್ಲಿ ಏನೋ ಗದ್ದುಗೆ ಏರಿದರು. ಆದರೆ ಕಳೆದ ಒಂದು ವರ್ಷದಿಂದ ಸಾಲು ಸಾಲು ಸೋಲನುಭವಿಸುತ್ತಿರುವದು ಕಂಡು ಬರುತ್ತಿದೆ.
ಇದು ಹೀಗೆ ಮುಂದುವರೆದಲ್ಲಿ ಮುಂದಿನ ಹಾದಿ ಬಹು ಕಷ್ಟಕರವಾಗಲಿದೆ ಬಿಜೆಪಿ ಪಾಲಿಗೆ ಎನ್ನುವದರಲ್ಲಿ ಎರಡು ಮಾತಿಲ್ಲ. ಕಾರಣ ಪ್ರಸ್ತುತ ಜಾರ್ಖಂಡ ರಾಜ್ಯದ ಚುನಾವಣೆಯಲ್ಲೂ ಬಿಜೆಪಿ ಸೋಲನುಭವಿಸಿದೆ.
ಜಾರ್ಖಂಡನಲ್ಲೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ದೊರೆತಿದೆ. ಮ್ಯಾಜಿಕ್ ಸಂಖ್ಯೆಯನ್ನು ಜಾರ್ಖಂಡ ಮುಕ್ತಿ ಮೋರ್ಚಾ, ಆರ್‍ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಪಡೆದಿದೆ. ಒಂದೇ ವರ್ಷದಲ್ಲಿ ಬಿಜೆಪಿ ಆಡಳಿತದ ಐದು ರಾಜ್ಯಗಳಲ್ಲಿ ಸೋತು ಎದುರಾಳಿ ಮೈತ್ರಿಕೂಟದ ಆಡಳಿತಕ್ಕೆ ಅವಕಾಶ ಕಲ್ಪಿಸಿದಂತಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಚತ್ತೀಸಘಡ ಮತ್ತು ಜಾರ್ಖಂಡದಲ್ಲಿ ಬಿಜೆಪಿ ತನ್ನ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದ ಬಿಜೆಪಿ ನಾಯಕರು ಎದುರಾಳಿ ಮೈತ್ರಿಕೂಟದ ವಿರುದ್ಧ ಸೋಲೊಪ್ಪಿಕೊಂಡಿದೆ.
ಎರಡನೇ ಬಾರಿಗೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದರೂ ಈ ಐದು ರಾಜ್ಯಗಳಲ್ಲಿ ಬಿಜೆಪಿ ಅಂದುಕೊಂಡ ಗೆಲುವು ಸಾಧಿಸಲಾಗದಿರುವುದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚವ್ಹಾಣ ನೇತೃತ್ವದಲ್ಲಿ ಮತದಾನ ಶೇಕಡವಾರು ಹೆಚ್ಚಳ ಕಂಡಿದ್ದರೂ ಅದರ ಹೊರತಾಗಿ ಬಿಜೆಪಿ ಅತಿ ಕಡಿಮೆ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಕಳೆದುಕೊಂಡಿದೆ.
ಇನ್ನೂ ಛತ್ತಿಸಗಡ ರಾಜ್ಯದಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಅದೇ ರೀತಿ ರಾಜಸ್ಥಾನದಲ್ಲೂ ವಸುಂದರಾರಾಜೇ ಆಡಳಿತದ ವಿರುದ್ಧ ಜನಾಭಿಪ್ರಾಯ ಉಂಟಾಗಿರುವದರಿಂದ ಕಾಂಗ್ರೆಸ್‍ಗೆ ಲಾಭವಾಯಿತು.
ಇನ್ನೂ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಕೂಟ ಗೆಲುವು ಸಾಧಿಸಿದ್ದರೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಮೈತ್ರಿಕೂಟದಿಂದ ದೂರ ಸರಿಯುವ ಮೂಲಕ ಎನ್‍ಸಿಪಿ ಮತ್ತು ಕಾಂಗ್ರೆಸ್ ದೊಂದಿಗೆ ಕೈಜೋಡಿಸಿ ಬಿಜೆಪಿಯೇತರ ಸರ್ಕಾರ ರಚಿಸಿತು.
ಮಹಾರಾಷ್ಟ್ರದ ದೇವಿಂದ್ರ ಫಡ್ನಾವಿಸ್, ಶಿವರಾಜ್ ಚವ್ಹಾಣ, ರಮಣ್ ಸಿಂಗ್, ವಸುಂದರಾ ರಾಜೆಯಂತ ಘಟಾನುಘಟಿ ನಾಯಕರಿರುವ ರಾಜ್ಯಗಳಲ್ಲಿ ಬಿಜೆಪಿ ಸೋತಿರುವುದು ನಿಜಕ್ಕೂ ಚಿಂತನೆಗೆ ಗುರಿ ಮಾಡಿದೆ. ಮುಂದೆ ದೆಹಲಿ ಮತ್ತು ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ಬರಲಿದ್ದು, ಬಿಜೆಪಿ ನಾಯಕರು ಇನ್ಯಾವ ರಣತಂತ್ರ ಎಣೆಯಲಿದ್ದಾರೋ ಕಾಯ್ದು ನೋಡಬೇಕು. ಬಿಜೆಪಿ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಇನ್ನಾದರೂ ಬಿಜೆಪಿ ನಾಯಕರು ಜಾಗೃತಿವಹಿಸಿ ಹೆಜ್ಜೆ ಇಡುವದು ಸೂಕ್ತ.
ಬಿಜೆಪಿ ಗೆದ್ದಾಗ ಮತ ಪೆಟ್ಟಿಗೆ ಬಗ್ಗೆ ಧ್ವನಿ ಎತ್ತಿದ ನಾಯಕರು ಈಗೇನಂತಾರೆ.?
ಲೋಕಸಭೆ ಚುನಾವಣೆ ಸೇರಿದಂತೆ ಹಿಂದೆ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಬೀಗಿದಾಗ ಆಗ ಕಾಂಗ್ರೆಸ್ ನಾಯಕರು ಘಟಾನುಘಟಿಗಳು ಸೇರಿದಂತೆ ಇತರರು ಫುಂಕಾನುಫುಂಕವಾಗಿ ಮತಪೆಟ್ಟಿಗೆ ಲಾಕ್ ಮಾಡಿದ್ದಾರೆ. ಒಂದು ಮತ ಕಾಂಗ್ರೆಸ್ ಗೆ ಓದರೆ ಐದು ಮತಗಳು ಬಿಜೆಪಿಗೆ ಬೀಳುತ್ತಿವೆ. ಮತ ಪೆಟ್ಟಿಗೆ ಆ ರೀತಿ ತಯಾರಿಸಿದ್ದಾರೆ.
ಬಿಜೆಪಿ ಅಕ್ರಮವಾಗಿ ಗೆಲ್ಲುತ್ತಿದೆ ಎಂದು ಪುಂಗಿ ಊದಿದ್ದೇ ಊದಿದ್ದು, ಈಗ ಆ ನಾಯಕರ ಬಾಯಿಯಲ್ಲಿ ಇವಿಎಂ, ವಿವಿಪ್ಯಾಟ್ ಸಮಸ್ಯೆ ಬಗ್ಗೆ ಧ್ವನಿ ಬರುತ್ತಿಲ್ಲ ಏಕೆ..? ಹೋಗಲಿ ತಾಲೂಕು, ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರು ಸೇರಿದಮತೆ ನಮ್ಮ ರಾಜ್ಯ ಕಾಂಗ್ರೆಸ್ ನಾಯಕರು ವಿವಿ ಪ್ಯಾಟ್ ಕೈಯಲ್ಲಿ ಹಿಡಿದು ಈ ರೀತಿ ಮೋಸ ಮಾಡಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಬೊಬ್ಬೆ ಹಾಕಿದವರು ಈಗ ಎಲ್ಲಿದ್ದಾರೆ..?
ಅಲ್ಲದೆ ಪ್ರಗತಿಪರ ಎಂದು ಕರೆದುಕೊಳ್ಳುವವರು ವಿವಿಪ್ಯಾಟ್, ಮತ ಪೆಟ್ಟಿಗೆ ಯಂತ್ರ ಬಗ್ಗೆ ಕಾಂಗ್ರೆಸ್ ಸೋಲಿಗೆ ಯಂತ್ರಗಳೇ ಕಾರಣ, ಮೋದಿ, ಅಮಿತ್ ಶಾ ದುಡ್ಡು ಸುರಿದು ಮತ ಪೆಟ್ಟಿಗೆಯಲ್ಲಿ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೆ ಹೋಗುತ್ತಿದೆ ಎಂದೂ ಹೇಳಿದವರೆಲ್ಲಿದ್ದಾರೆ.
ವಿಡಿಯೋ ಮಾಡಿ ತೋರಿಸಿದರೂ ಮತ ಅಕ್ರಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಟ್ಟಿದ್ದೆ ಬಿಟ್ಟಿದ್ದು, ಇದೀಗ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ ಇವರು ಹಾಗೇ ಮಾಡಿದ್ದಾರೆಯೇ.? ನಗು ಬರುತ್ತಿದೆ ಅಲ್ವಾ ಓದುಗರಿಗೆ..ಯಾವುದೇ ಪಕ್ಷವಾಗಲಿ ಜನ ಹಿತ ರಾಷ್ಟ್ರ ಹಿತ ಎಲ್ಲಾ ವರ್ಗದ ಜನರ ಆಶೋತ್ತರಗಳನ್ನು ಸಮನಾಗಿ ಈಡೇರಿಸಿದರೆ ಸಾಕು ಅಲ್ವಾ.?
ರಾಷ್ಟ್ರದ ಅಭಿವೃದ್ದಿಗೆ ಶ್ರಮಿಸಿದರೆ ಸಾಕು. ಧರ್ಮ ಧರ್ಮಗಳ ಮಧ್ಯ, ಜಾತಿ ಜಾತಿಗಳ ಮಧ್ಯ ಕಂದಕ ಸೃಷ್ಠಿಸುವದನ್ನು ಬಿಟ್ಟು ಸುಳ್ಳು ಹೇಳುವದನ್ನು ಬಿಟ್ಟು ರಾಷ್ಟ್ರದ ಏಳ್ಗೆಗೆ ಶ್ರಮಿಸಿದರೆ ಸಾಕು..ಏನಂತೀರಿ ನಾಗರಿಕರೇ..?
-ಮಲ್ಲಿಕಾರ್ಜುನ ಮುದನೂರ.
ಸಂಪಾದಕರು. ವಿನಯವಾಣಿ.