ಶಹಾಪುರದಲ್ಲಿ ಅಬ್ಬಬ್ಬಬ್ಬಾ..ಏನದು ಮುಂಜಾನೆಯ ಮಂಜು
ಸಗರಾದ್ರಿ ಬೆಟ್ಟ ಮಂಜಿನ ಹೊದಿಕೆ ಹೊತ್ತು ಮಲಗಿತ್ತೆ.?
ಮಲ್ಲಿಕಾರ್ಜುನ ಮುದನೂರ.
ಯಾವುದೇ ಒಂದು ಹಣ್ಣಿನಲ್ಲಿ ಎಷ್ಟು ಬೀಜಗಳು ಇವೆ ಎಂದು ಎಣಿಸಬಹುದು ಆದರೆ ಅದೇ ಯಾವುದೇ ಒಂದು ಹಣ್ಣಿನ ಬೀಜದಲ್ಲಿ ಎಷ್ಟು ಹಣ್ಣುಗಳಿವೆ ಎಂಬುದನ್ನು ಯಾರಾದರು ಲೆಕ್ಕಹಾಕಿ ಹೇಳಲೂ ಸಾಧ್ಯವೇ.? ಇಲ್ಲ ಅಲ್ವಾ.? ಅದು ಒಬ್ಬರಿಂದ ಮಾತ್ರ ಸಾಧ್ಯ ಅದು ಯಾರು ಎಂಬ ಪ್ರಶ್ನೆಗೆ ಬರುವ ಉತ್ತರವೇ ಕಣ್ಣಿಗೆ ಕಾಣದ ದೇವರು ಎಂಬ ನಾಮ.
ಇಲ್ಲಿ ಪ್ರಶ್ನೆಗೆ ಉತ್ತರ ಸಿಗದಿದ್ದಾಗ, ಯಾವುದೇ ಸಮಸ್ಯೆಗೆ ಪರಿಹಾರ ಅಥವಾ ಮಾರ್ಗ ಅಥವಾ ಅಂತಿಮವಾದ ಒಂದು ನಿರ್ಧಾರ ಅಥವಾ ಒಂದು ಗೋಡೆ ಅಂದರೆ ಡೆಡ್ ಎಂಡ್ ಇಲ್ಲಿಗೆ ಮುಗೀತು ಎಂಬುದು ಅರ್ಥೈಸಿಕೊಳ್ಳುವಂತಹದ್ದು ದೊರೆತಾಗಲೂ ಅದರಾಚೆಗೆ ಮತ್ತೊಂದು ಶಕ್ತಿ ಅಡಗಿರುತ್ತದೆ. ಅದು ಅಗೋಚರವಾಗಿರುತ್ತೆ ಅದನ್ನೆ ನಾವು ದೇವರೆನ್ನುತ್ತೇವೆ ಅಲ್ಲವೇ.?
ಅಂದ್ಹಾಗೆ ಇಂದು ಹೇಳಲೊರಟಿರುವದು ಇಂದು ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಎಂದೂ ಕಾಣದ ಮಂಜು ಆವರಿಸಿರುವ ಅದ್ಭುತ ವಾತಾವರಣ ಎತ್ತ ನೋಡಿರೂ ಮಂಜೇ ಮಂಜು ಕೇವಲ 50-100 ಫೀಟ್ ಅಂತರದಲ್ಲೂ ಯಾರೊಬ್ಬರು ಕಾಣದಂತೆ ಮಂಜು ಆವರಿಸಿರುವ ಅತ್ಯದ್ಭುತ ವಾತಾವರಣ ಇಂದು ಸೋಮವಾರ ಬೆಳ್ಳಂಬೆಳಗ್ಗೆ ವಾಯು ವಿಹಾರಕ್ಕೆ ಹೋದವರೆಲ್ಲರೂ ಅನುಭವಿಸಿದ್ದಾರೆ.
ಬೆಳಗಿನ ಜಾವದಿಂದಲೇ ಇಂದು ಮಲೆನಾಡು ಮಂಜು ಸಗರನಾಡನ್ನೆ ಆವರಿಸಿದ್ದು, ಈ ಭಾಗದ ಜನರಲ್ಲಿ ರೋಮಾಂಚನೆ ನೀಡಿತು ಹೊಸ ಅನುಭವ ನೀಡಿತು ಎಂದರೆ ತಪ್ಪಿಲ್ಲ. ಕಳೆದ 30-40 ವರ್ಷದಿಂದ ಇಂತಹ ಮುಸುಕು ಮುಚ್ಚಿದ ಮಂಜು ಕಂಡಿಲ್ಲ ಎನ್ನುತ್ತಾರೆ ವಾಯು ವಿಹಾರಿ ಶರಣಗೌಡ ಕಟ್ಟಿಮನಿ.
ಬೆಳಗ್ಗೆ ವಾಯು ವಿಹಾರಕ್ಕೆ ಎಂದಿನಂತೆ ವಾಕಿಂಗ್ ಗೆ ಸಿದ್ಧಗೊಂಡು ಹೊರ ಬರುತ್ತಿದ್ದಂತೆ ಎಲ್ಲಡೆ ಮುಸುಕಿದ ಮಬ್ಬಿನಲ್ಲಿ ಕಾಲ್ನಡಿಗೆ ಹೊರಟವರೂ 40-50 ಅಡಿ ಸಮೀಪವಿದ್ದರೂ ಕಾಣದೆ ಮಂಜೂ ಆವರಿಸಿತ್ತು. ಧ್ವನಿ ಮೂಲಕ ಕಂಡು ಹಿಡಿಯುವ ಕ್ಷಣ ಎಲ್ಲಡೆ ಖುಷಿಯೋ ಖುಷಿ. ಬೆಳಗ್ಗೆ 7 ಗಂಟೆಯಾಗುತ್ತಿದ್ದಂತೆ ಮುಸುಕಿದ ಮಬ್ಬು ಕರಗುತ್ತಾ ಸಾಗಿತ್ತು.
ಸಗರಾದ್ರಿ ಬೆಟ್ಟವಂತು ಛಳಿಗೆ ಆಕಾಶವನ್ನೆ ಹೊದಿಕೆ ಮಾಡಿಕೊಂಡಂತೆ ನಾಚುತಿತ್ತು. ಸಗರಾದ್ರಿಯ ಇಡಿ ಪ್ರಕೃತಿ ಕಾಣದಂತೆ ಮಂಜು ಆವರಿಸಿತ್ತು. ಮಲೆನಾಡಿನ ಘಾಟ್ ಸೆಕ್ಷನ್ ನಲ್ಲಿ ನಾವೆಲ್ಲ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದೇವೆಯೇ ಎಂಬ ಭಾವನೆ ಮೂಡಿಸಿರುವುದು ಸುಳ್ಳಲ್ಲ.
ಬಾನು ಭೂಮಿ ಹೊಂದಾಗಿರುವ ಸೊಗಸನ್ನು ಇಂದು ಸಾಕಷ್ಟು ಜನರು ಸವಿದರು ಎಂದರೆ ತಪ್ಪಿಲ್ಲ. ಮನಮೋಹಕ ದೃಶ್ಯಗಳು. ಅಲ್ಲದೆ ಗೌರಿ ಹುಣ್ಣಿಮೆಯ ದಿನ ಕಾರ್ತಿಕ ಮಾಸದ ಸೋಮವಾರ ಅದರಲ್ಲೂ ಶರದ್ ಋತುವಿನ ಸುಸಂದರ್ಭ ವಾಗಿದ್ದರಿಂದ ದಿಗ್ಗಿ ಸಂಗಮೇಶ್ವರರ ಭಕ್ತಾದಿಗಳು ದೇವಸ್ಥಾನಕ್ಕೆಂದು ದರ್ಶನಕ್ಕೆ ಹೋದರೆ ಬೆಟ್ಟವೇ ಕಾಣುತ್ತಿಲ್ಲ.
ಶ್ರೀ ಸಂಗಮೇಶ್ವರರ ದರ್ಶನ ಪಡೆಯಬೇಕೆಂದರೆ ಮಂಜನ್ನು ಛೇದಿಸಿ ಬೆಟ್ಟವೇರಿದಾಗ ಮಾತ್ರ ಸಂಗಮನಾಥನ ದರ್ಶನ ಭಾಗ್ಯ ದೊರೆತಿರುವದು ಇಂಥ ವಾತಾವರಣ ಮಲೆನಾಡಿನ ಹೊರನಾಡು ಭಾಗದಲ್ಲಿ ಕಂಡ ಅನುಭವ ಎಂದು ಭಕ್ತಾಧಿಗಳು ಸಂತಸ ವ್ಯಕ್ತಪಡಿಸಿದರು.
ಇಂದು ವಾಕಿಂಗ್ ಮಿಸ್ ಮಾಡಿಕೊಂಡಿದ್ದರೆ ನಿಮ್ಮ ದುರ್ದೈವ ಎನ್ನಬಹುದು. ಬೆಳಗಿನ ಇಂದಿನ ಸಮಯ ಭೂಮಿ ಆಕಾಶ ಹೊಂದಾದ ಆನಂದಮಯ.
ತಹಸೀಲ್ ಕಟ್ಟಡದ ಲೈಟ್ ಗಳು ಮಾತ್ರ ಗೋಚರ..
ತಹಸೀಲ್ ಕಚೇರಿ ಕಟ್ಟಡ ಕಾಣದೇ ಮುಸುಕಿನೊಳು ಮುಚ್ಚಿಹೋಗಿರುವದು ಕಂಡು ಬಂದಿತು. ತಹಸೀಲ್ ಕಚೇರಿ ಕಟ್ಟಡ ಮುಭಾಗದಲ್ಲಿ ಹಾಕಿದ್ದ ವಿದ್ಯುತ್ ಬಲ್ಬ್ ಬೆಳಕು ಮಾತ್ರ ಮಂಜು ಛೇದಿಸಿ ಹೊರ ಸೂಸುತ್ತಿರುವದು ಕಂಡು ಬಂದಿತು.
ಅದ್ಭುತ ಚಿತ್ರಗಳನ್ನು ಇಂದು ವಾಯು ವಿಹಾರಿಗಳು ಬಹುತೇಕ ಫೋಟೊಗಳನ್ನು ತೆಗೆಯುತ್ತಿರುವದು ಕಂಡು ಬಂದಿತು. ಕೆಲವರು ಫೋಟೊದಲ್ಲಿ ಅಷ್ಟೊಂದು ಚನ್ನಾಗಿ ಕಾಣುತ್ತಿಲ್ಲ.
ವಾಸ್ತವಿಕ ನೋಟಕ್ಕೂ ಛಾಯಾಚಿತ್ರಕ್ಕೂ ವ್ಯತ್ಯಾಸ ಕಾಣುತ್ತಿದೆ ಎಂಬ ಮಾತುಗಳು ಕೇಳಿಬಂದವು. ಒಟ್ಟಾರೆ ಈ ದಿನ ಸುದಿನ ನೂತನ ಅನುಭವ ನೀಡಿತು.
ಓ..ಸಾರಿ ವೇಟ್…ಮೊದಲಿಗೆ ಏನೋ ಧಾರ್ಮಿಕವಾಗಿ ಮಾತನಾಡಿ ಕೊನೆಗೆಲ್ಲಿಗೋ ತಂದಿದ್ದಾನೆ ಅನ್ಕೊಂಡರಾ.? ಹೌದು.. ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳಿಗೆ ಅಗೋಚರ ಶಕ್ತಿಯೇ ಕಾರಣ, ಇದನ್ನು ಕೃತಕವಾಗಿ ಸೃಷ್ಟಿಸೋದು ಕಷ್ಟ.
ಅಲ್ಲದೆ ಇದು ಹೇಗೆ ಸಾಧ್ಯ ಇಷ್ಟು ವರ್ಷದಲ್ಲಿ ಒಮ್ಮೆಯೂ ಕಂಡಿಲ್ಲ ಎನ್ನುವ ಬಹುಸಂಖ್ಯಾತರ ಮಾತು ಕೇಳಿದಾಗ ಇದು ಯಾರು ನಿರ್ಮಿಸೊರೋದು ಎಂಬುದು ಯಕ್ಷ ಪ್ರಶ್ನೆ..ಹೀಗಂದ್ರೆ ಇದೊಂದು ಸಮರ್ಪಕ ಉತ್ತರ ಸಿಗದ ಪ್ರಶ್ನೆ ಎಂದಾದ ಮೇಲೆ ಬರುವ ಉತ್ತರವೇ..ದೇವರು..ಅಲ್ಲವೇ.? ನೀವೇನಂತಿರಿ..? ಶಹಾಪುರದಲ್ಲಿ ಮುಂಜಾನೆ ನೋಡಬೇಕಿತ್ತು… ಅಬ್ಬಬ್ಬಬ್ಬಾ…ಏನದು ಮುಂಜಾನೆ ಮಂಜು..ಎಲ್ಲರ ಬಾಯಲ್ಲೂ ಇದೆ ಮಾತು…