ನಾವು ಬಾಂಬಿಟ್ಟುಕೊಂಡು ಮಂಗಳೂರಿಗೆ ಹೋಗ್ತಿಲ್ಲ- ಸಿ.ಟಿ.ರವಿ
ಭಾರತ ಮಾತಾಕೀ ಜೈ ಅನ್ನುವವರ ಮೇಲೆ ರಾಜ್ಯ ಸರ್ಕಾರ ಕಿಡಿ ಕಾರುತ್ತಿದೆ. ಪಾಕಿಸ್ತಾನಕ್ಕೆ ಜೈ ಅನ್ನುವವರ ಮೇಲೆ ಪ್ರೀತಿ ತೋರುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ, ಬಿಜೆಪಿ ಶಾಸಕ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಬಿಜೆಪಿ ಯುವ ಮೂರ್ಚಾ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಬೈಕ್ ರ್ಯಾಲಿ ಗೆ ಬ್ರೇಕ್ ಹಾಕಲು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾವು ಭಯೋತ್ಪಾದಕರಲ್ಲ, ಬಾಂಬಿಟ್ಟುಕೊಂಡು ಮಂಗಳೂರಿಗೆ ಹೋಗುತ್ತಿಲ್ಲ. ಅಲ್ಲಿ ನಡೆದ ಹಿಂದೂ ಮುಖಂಡರ ಕೊಲೆ, ಹಿಂದುತ್ವದ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ಯ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಟ್ಲರಿಸಂ ನಡೆಸುತ್ತಿದೆ.
ಆದರೆ, ಯಾವುದೇ ಕಾರಣಕಕ್ಕೂ ಬಿಜೆಪಿ ಯುವಮೋರ್ಚಾ’ ಬೈಕ್ ರ್ಯಾಲಿ ನಿಲ್ಲೋದಿಲ್ಲ. ನಾವು ಮಂಗಳೂರು ಹೋಗೇಹೋಗುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.
ಬೆಂಗಳೂರು, ಹುಬ್ಬಳ್ಳಿ, ಕೋಲಾರ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ವಿವಿದೆಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ ಕೆಲವು ಕಡೆ ಯುವ ಮೋರ್ಚಾ ಕಾರ್ಯಕರ್ತರಿಗೆ ಮಾಡಲಾಗಿದ್ದ ಊಟದ ವ್ಯವಸ್ಥೆಗೂ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಬೈಕ್ ರ್ಯಾಲಿ ತಡೆದಿರುವ ಪೊಲೀಸರ ಕ್ರಮವನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ- ಸಚಿವ ಮಹಾದೇವಪ್ಪ
ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಬಿಜೆಪಿ ಬೈಕ್ ರ್ಯಾಲಿ ತಡೆಯುವಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡಿಲ್ಲ. ಆದರೆ, ಪೊಲೀಸ್ ಅಧಿಕಾರಿಗಳು ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.