ಪೌರತ್ವ ಕಾಯ್ದೆಃ ಮಂಗಳೂರ ಉದ್ವಿಘ್ನ, ನಾಳೆ ಯಾರೊಬ್ಬರು ರಸ್ತೆಗಿಳಿಯಬೇಡಿ
ಮಂಗಳೂರಃ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಅಂದಾಜು ಏಳು ಸಾವಿರಕ್ಕೂ ಅಧಿಕ ಉದ್ರಿಕ್ತರು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದು, ಕಲ್ಲು, ಬಾಟಲಿಗಳನ್ನು ಎಸೆದಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದಲ್ಲದೆ ಪೊಲೀಸ್ ಸಿಬ್ಬಂದ ಹತ್ಯೆಗೆ ಉದ್ರಿಕ್ತರು ಮುಂದಾಗಿರುವ ಕಾರಣ ಅನಿವಾರ್ಯವಾಗಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸ್ಪಷ್ಟನೆ ನೀಡಿದ್ದಾರೆ.
ಬಂದರೂ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮೀಷನರ್ ಡಾ.ಪಿ ಎಸ್ ಹರ್ಷ, ನಿನ್ನೆಯೇ ನಾವು ಎಲ್ಲಾ ಸಮುದಾಯದ ಮುಖಂಡರನ್ನು ಕರೆದು ಶಾಂತಿ ಕಾಪಾಡುವಂತೆ ಕೋರಿದ್ದೇವು. ಯಾವುದೇ ಹಾನಿ ಕಾನೂನು ಕೈಗೆ ಎತ್ತಿಕೊಳ್ಳಬೇಡಿ ಎಂದು ಮನವಿ ಮಾಡಿದ್ದೇವು.
ಅಲ್ಲದೆ ನಿರ್ಬಂಧಕಾಜ್ಞೆ ಹೊರಡಿಸಲಾಗಿದೆ. ಯಾರೊಬ್ಬರು ಪ್ರತಿಭಟನೆಗೆ ಕುಮ್ಮಕ್ಕು ನೀಡಬಾರದು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದೇವು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಆಗ ಪ್ರತಿಭಟನೆ ಮಾಡುವದಿಲ್ಲವೆಂದು ಒಪ್ಪಿಕೊಂಡ ಎಲ್ಲಾ ಸಂಘಟನೆಗಳು ಇಂದು ಪ್ರತಿಭಟನೆಗೆ ಇಳಿದಿದ್ದಾರೆ. ಸುಮಾರ 7 ಸಾವಿರದಷ್ಟು ಉದ್ರಿಕ್ತರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ, ಉದ್ರಿಕ್ತರು ಬಂದರು ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಅಲ್ಲದೇ,ಠಾಣೆ ಒಳಗೆ ಕಲ್ಲು, ಬಾಟಲಿ ತೂರಾಟ ನಡೆಸಿದ್ದಲ್ಲದೇ,ಠಾಣೆ ಸಿಬ್ಬಂದಿ ಹತ್ಯಗೆ ಯತ್ನ ಮಾಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಫೈರಿಂಗ್ ಮಾಡಲಾಗಿದೆ ಎಂದು ವಿವರಿಸಿದರು.
ಈ ವೇಳೆ 20 ಮಂದಿ ಪೊಲೀಸರಿಗೆ ಗಾಯವಾಗಿದೆ. ಈ ಪೈಕಿ 8 ಮಂದಿ ಪೊಲೀಸರಿಗೆ ತೀವ್ರರೀತಿಯ ಗಾಯಗಳಾಗಿದ್ದು, ಅಪರಾಧ ವಿಭಾಗದ ಡಿಸಿಪಿಯ ಕೈ ಎಲುಬು ಕತ್ತರಿಸಿದೆ. ಮತ್ತೊಬ್ಬ ಡಿಸಿಪಿಯ ಕಾಲಿನ ಎಲುಬು ತುಂಡಾಗಿದೆ. ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಉದ್ರಿಕ್ತರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರಿಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.
ಇನ್ನು ನಾಳೆ ಸಾರ್ವಜನಿಕರು ರಸ್ತೆಗೆ ಇಳಿಯಬಾರದು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ಸೆಕ್ಷನ್ 144 ರ ಕಾನೂನನ್ನು ಸಂಪೂರ್ಣ ಬಲ ಪ್ರಯೋಗ ಮಾಡುವುದಾಗಿ ಪೊಲೀಸ್ ಆಯುಕ್ತ ಹರ್ಷ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.