ಪ್ರಮುಖ ಸುದ್ದಿಸರಣಿ

ಫ್ರೀ ಮೀಡಿಯಾ ಡೆಡ್ ಇನ್ ಇಂಡಿಯಾ? – ಡಾ.ಎಂ.ಎಸ್.ಮಣಿ ಬರಹ

ಡಾ.ಎಂ.ಎಸ್.ಮಣಿ

ಜುಲೈ 1 ರಂದು ಕ್ರೈಸ್ತ ಪಾದ್ರಿ ಹರ್ಮನ್ ಮೊಗ್ಲಿಂಗ್ ಮಂಗಳೂರು ಸಮಾಚಾರ ಪತ್ರಿಕೆ ಹೊರತಂದ ದಿನ. ಹರ್ಮಿನ್ ಮೊಗ್ಲಿಂಗ್ ಪತ್ರಿಕೆ ಹೊರತಂದು 175 ವರ್ಷಗಳಾಗಿವೆ. ಇಂತಹ ಐತಿಹಾಸಿಕ ದಿನವನ್ನು ಪ್ರತಿವರ್ಷ ‘ಪತ್ರಿಕಾ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. ಪತ್ರಕರ್ತ ಗೆಳೆಯ ರಮೇಶ್ ಸುರ್ವೆ ಹಲವು ವರ್ಷಗಳಿಂದ ಜುಲೈ 1ಕ್ಕೆ ಪತ್ರಿಕಾ ದಿನಾಚರಣೆ ಆಚರಿಸಿಕೊಂಡು ಬಂದಿದ್ದಾರೆ. 2019ರ ಸಾಲಿನ ಹೂಗಾರ್ ಸ್ಮಾರಕ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್, ಕೆಜೆಯು ನ ಅಧ್ಯಕ್ಷರಾದ ಬಿ.ನಾರಾಯಣ, ಕೆಯುಡಬ್ಲ್ಯೂಜೆ ಕಾರ್ಯದರ್ಶಿ ಸಂಜೀವ್ ಕುಲಕರ್ಣಿ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಮಹೇಶ್ ಅಂಗಡಿ ಸೇರಿದಂತೆ ಹಲವರು ಕೂಡಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆದು ಕೂತ ನನ್ನೊಳಗೆ ಹಲವು ವಿಚಾರಗಳು ಮಂಥನಕ್ಕೊಳಗಾದವು. ಅದರೊಳಗಡೆ ಮೂರು ಘಟನೆಗಳು ನನ್ನನ್ನು ಎಡಬಿಡದೆ ಕಾಡಿದವು. ಮಾನಸಿಕವಾಗಿ ನೋವನ್ನು ಉಂಟು ಮಾಡಿದವು.

ಒಂದು ಕತುವಾ ಪ್ರಕರಣ. ಎರಡು ಮಧು ಪತ್ತಾರ್ ಪ್ರಕರಣ, ಮೂರು ಕಮಲ್ ಶುಕ್ಲಾ ಪ್ರಕರಣ. ಇವು ಮೂರು ಪ್ರಕರಣಗಳ ಬಗ್ಗೆಯೂ ನಾನಿನ್ನೂ ಬರೆಯಲಾಗಲಿಲ್ಲ. ಕತುವಾ ಪ್ರಕರಣದಲ್ಲಿ ಕುರಿಗಾರ್ತಿ ಬಾಲಕಿ ಆಸೀಫಾಳನ್ನು ದೇಗುಲದೊಳಗೆ ಹೊತ್ತೊಯ್ದು ‘ಹತ್ಯಾಚಾರ’ಗೊಳಿಸಲಾಗಿದೆ. ಮಧು ಪತ್ತಾರ್ ಪ್ರಕರಣದಲ್ಲಿ ದೇಗುಲದ ಪಕ್ಕದಲ್ಲಿಯೇ ‘ಹತ್ಯಾಚಾರ’ ನಡೆದಿದೆ ಎಂದು ಭಾವಿಸಲಾಗಿತ್ತು. ಪ್ರಕರಣ ಸಿಬಿಐಗೆ ಕೊಡಿ ಎಂದು ರಾಜ್ಯದ ಪೊಲೀಸ್ ಮುಖ್ಯಸ್ಥರನ್ನು ಕಲಾವಿದ ವಿಷ್ಣು , ಮಿಂಚು ಶ್ರೀನಿವಾಸ್, ವಿಜಯಪುರ ಮುನಿರಾಜು ಜೊತೆಗೂಡಿ ಭೇಟಿಯಾಗಿ ಮನವಿ ಕೊಟ್ಟಿದ್ದೆವು. ಪೊಲೀಸ್ ಮುಖ್ಯಸ್ಥರು ಹೆಣ್ಣಾದ್ದರಿಂದ ನ್ಯಾಯ ಸಿಗುವ ಭರವಸೆ ಬೆಟ್ಟದಷ್ಟಿತ್ತು. ಅವರಾಡಿದ ಮಾತುಗಳಿಂದ ಅವರೊಲ್ಲೊಬ್ಬ ಪೊಲೀಸ್ ಅಧಿಕಾರಿಯನ್ನು ಮಾತ್ರ ಕಾಣುವಂತಾಯಿತು. ಪೊಲೀಸ್ ಅಧಿಕಾರಿಣಿ ಹಿಂದುಳಿದ ವರ್ಗಕ್ಕೆ ಸೇರಿದ್ದರಿಂದ, ನಮ್ಮ ಮನವಿಯನ್ನು ತಾಯಿಯಂತೆ ಆಲಿಸಬಹುದೆಂಬ ಎಣಿಕೆಯೂ ತಪ್ಪಾಗಿತ್ತು. ಓರ್ವ ಅಧಿಕಾರಿಯಾಗಿ ಜರುಗಿಸಬೇಕಾದ ಕ್ರಮವನ್ನು ಜರುಗಿಸಿದ್ದರು. ಒಂದೆರೆಡು ದಿನಗಳಲ್ಲಿ ಆರೋಪಿತರೆಂದು ಕೆಲವು ಶಂಕಿತರ ಬಂಧನವಾಯಿತು. ಅದೊಂದು ‘ಆತ್ಮಹತ್ಯೆ’ ಎಂಬ ವರದಿ ಹೊರಬಿದ್ದಿದೆ. ಆಸೀಫಾ ಪ್ರಕರಣದಲ್ಲಿ ಕೆಲವರಿಗಷ್ಟೇ ಶಿಕ್ಷೆಯಾಗಿದೆ. ಕೆಲವರು ಸಾಕ್ಷ್ಯಾಧಾರದ ಕೊರತೆ, ಅಪ್ರಾಪ್ತ ಎಂಬ ಕಾರಣಗಳಿಂದ ಶಿಕ್ಷಿತರಾಗಿಲ್ಲ. ‘ಕಮಲ್ ಶುಕ್ಲಾ’ ಭೂಮ್ ಕಾಲ್ ಸಮಾಚಾರ ಪತ್ರಿಕೆಯ ಸಂಪಾದಕ. ನ್ಯಾಯಮೂರ್ತಿ ಲೋಯಾ ಪ್ರಕರಣದ ತೀರ್ಪಿನ ಕುರಿತಂತೆ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕೆ ‘ರಾಜದ್ರೋಹ’ ಹೊರಿಸಿ ಒಳಗೆ ಹಾಕಲಾಗಿದೆ.

ಮೂರು ಘಟನೆಗಳು ನನ್ನ ಮನದಲ್ಲಿ ಮಂಥನ ಆಗುತ್ತಿರುವಾಗ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ’ ಅನುಸೂಚಿಯಲ್ಲಿ ಭಾರತ 136 ರಿಂದ 140ಕ್ಕೆ ಏಕೆ ಜಾರಿಬಿತ್ತೆಂಬ ಚಿಂತೆ ಕಾಡಹತ್ತಿತು. ಪಾಕಿಸ್ತಾನ, ಖಜಕಿಸ್ತಾನ, ಇರಾನ್, ಇರಾಕ್, ಚೈನಾಗಿಂತ ಭಾರತ ಸ್ವಲ್ಪ ಮುಂದಿದೆ. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಇದಕ್ಕಾಗಿ ನಾನು ಕೇಂದ್ರ ಸರ್ಕಾರವನ್ನು ದೂಷಿಸುವುದಿಲ್ಲ. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರು ಪ್ರಧಾನಿ ಆಗಿದ್ದಾಗಲೂ ಮಾಧ್ಯಮ ಅಷ್ಟೊಂದು ವಿಕಸನಗೊಂಡಿರಲಿಲ್ಲ. ಆದರೂ ನೆಹರು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘವನ್ನು ಹುಟ್ಟು ಹಾಕಿದ್ದರು. ಇವರ ನಂತರ ಬಂದ ಇಂದಿರಾಗಾಂಧಿ ಎಮರ್ಜೆನ್ಸಿ ತಂದು ಬಡವರ ಪರ ಯೋಜನೆಗಳನ್ನು ಕಟ್ಟಿಕೊಟ್ಟರಾದರೂ, ಪ್ರೆಸ್ ಸೆನ್ಸಾರ್‍ಶಿಪ್ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದರು. ಇವರ ಮಗ ರಾಜೀವ್ ಗಾಂಧಿ ಮಾನಹಾನಿ ಮೊಕದ್ದಮೆ ಮಸೂದೆ ತರಲು ಉದ್ದೇಶಿಸಿದ್ದರು. ಆಗ ಎದ್ದ ವಿರೋಧದಿಂದ ಮೌನಕ್ಕೆ ಶರಣಾದರು. ಆದರೆ, ಇಂದಿನ ಪ್ರಧಾನಿ ಮಾಧ್ಯಮವನ್ನು ತನ್ನ ವೈರಿ ಎಂದೇ ಭಾವಿಸಿದಂತಿದೆ. ಹಿಂದೆ ಎನ್‍ಡಿಎ ಕಟ್ಟಿಕೊಂಡು ಆಡಳಿತ ನಡೆಸಿದ್ದರು. ಇದೀಗ ಪೂರ್ಣ ಬಹುಮತ ಪಡೆದು ಅಧಿಕಾರದ ದಂಡವನ್ನು ಕೈಯಲ್ಲಿ ಹಿಡಿದಿದ್ದಾರೆ. ಆದರೂ ಮಾಧ್ಯಮ ಎಂದರೆ ಮಾರುದ್ದ ದೂರವೇ ಇದ್ದಾರೆ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 2002ರಲ್ಲಿ ನಡೆದ ದಂಗೆಯ ನಂತರ ಮಾಧ್ಯಮದಿಂದ ಅನ್ಯಾಯ ಆಯಿತೆಂದು ಮುನಿಸಿಕೊಂಡೇ ಇದ್ದಾರೆ. ಅಂದಿನಿಂದ ಇಂದಿನವರೆಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿಯೇ ಇಲ್ಲ. ತೀರಾ ಇತ್ತೀಚೆಗೆ ಅಮಿತ್ ಷಾ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರೂ, ಪ್ರತಿಕ್ರಿಯಿಸಲು ಮುಂದಾಗಲಿಲ್ಲ.
ಹೀಗಾಗಿ ಮೊದಲಿಗೆ ತಾವು ಬಯಸಿದಂತೆ, ನಡೆಯದ ಮಾಧ್ಯಮವನ್ನು ಮಣಿಸಲು ಸಾಮಾಜಿಕ ಮಾಧ್ಯಮವನ್ನು ಒಂದು ಸಾಧನವಾಗಿ ಬಳಸಿಕೊಳ್ಳಲಾಗಿದೆ. ಇದನ್ನು ಸ್ವಾತಿ ಚತುರ್ವೇದಿ ಅವರ “ಐಯಾಮ್ ಎ ಟ್ರೋಲ್” ಎಂಬ ದಾಖಲೆ ಹೇಳುತ್ತದೆ. ಇದರಂತೆ ಬರ್ಖಾದತ್, ಸಾಗರೀಕಾ ಘೋಷ್, ರೋಹಿಣಿಸಿಂಗ್ ಅವರಂತಹ ಹಲವರು ಸೊಂಟದ ಕೆಳಗಿನ ಬೈಗುಳಗಳನ್ನು ಎದುರಿಸಿದ್ದಾರೆ. ರಾಜದೀಪ್ ಸರ್‍ದೇಸಾಯಿ, ಸಿದ್ಧಾರ್ಥ ವರದರಾಜನ್, ಕುಮಾರ್ ಕೇಟ್ಕರ್ ಅವರಂತಹ ಹಿರಿಯ ಪತ್ರಕರ್ತರನ್ನು ಹೀಯ್ಯಾಳಿಸಲಾಗಿದೆ. ಇನ್ನೂ ಕೆಲ ಪತ್ರಕರ್ತರ ಹೆಸರಿನಲ್ಲಿ ನಕಲಿ ‘ಟಿಟ್ವರ್ ಖಾತೆ ತೆರೆದು “ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ಬೆತ್ತಲೆ ಓಡಾಡುವೆ” ಎಂಬ ಸಂದೇಶ ಹರಿಯಬಿಟ್ಟಿದ್ದರು. ಇದು ಸಾಲದೆಂಬಂತೆ ಮಾಧ್ಯಮದ ಮೇಲೆ ನಿಯಂತ್ರಣ ಹೇರಲು ಸಚಿವೆ ಸ್ಮøತಿ ಇರಾನಿ ಅವರು ಸುತ್ತೋಲೆ ಒಂದನ್ನು ಹೊರತಂದಿದ್ದರು. ಆಗ ಎದ್ದ ಬಂಡಾಯದ ಕಿಡಿಯನ್ನು ತಾಳಲಾರದೆ ಸುತ್ತೋಲೆ ಹಿಂಪಡೆಯಲಾಯಿತು. ಕಳೆದ 6 ವರ್ಷಗಳಿಂದ ವೈಚಾರಿಕ ಶಕ್ತಿಯ ಸದ್ದನ್ನು ಅಡಗಿಸುವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ.

ಇದರ ನಡುವೆ ಹಂತಕರ ಗುಂಡಿಗೆ ಬಲಿಯಾದ ಗೌರಿ ಲಂಕೇಶ್‍ರಿಂದ ಸಾರ್ವಜನಿಕರು ಕೂಡ ಪತ್ರಕರ್ತರ ಪರ ಧ್ವನಿ ಎತ್ತುವಂತಹ ವಾತಾವರಣ ಸೃಷ್ಠಿಯಾಯಿತು.
ಜುಲೈ 1ರಂದು ಇವೆಲ್ಲದರ ಕುರಿತು ಚರ್ಚೆಯಾಗಬೇಕಿತ್ತು. ಗಡಿಬಿಡಿಯಲ್ಲಿದ್ದ ಕಸಾಪ ಅಧ್ಯಕ್ಷ ಮನು ಬಳಿಗಾರ್ ದೀಪ ಬೆಳಗಿಸಿ, ಮಾತಾಡಿ ಹೊರಟೇ ಬಿಟ್ಟರು. ಗೆಳೆಯ ನಾರಾಯಣ್ ಕೆಲ ಪ್ರಕರಣಗಳನ್ನು ಉಲ್ಲೇಖಿಸಿ ಹೇಳಿದರಾದರೂ ಇನ್ನಷ್ಟು ಚರ್ಚೆಯಾಗಬೇಕಿತ್ತು. ಇಂತಹದ್ದೊಂದು ಚರ್ಚೆ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ನಡೆಯಿತು. ಅಲ್ಲಿ ‘ಪತ್ರಿಕಾ ಸ್ವಾತಂತ್ರ್ಯ’, ‘ಬೆದರಿಕೆ’, ‘ಸಾಮಾಜಿಕ ಹೊಣೆಗಾರಿಕೆ’, ‘ಬದ್ಧತೆ’ ಕುರಿತಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ಧರಾಜು ಅವರು, ಹಿರಿಯ ಪತ್ರಕರ್ತರುಗಳಾದ ಜಿ.ಕೆ.ಸತ್ಯ, ಲಕ್ಷ್ಮಣಕೊಡಸೆ, ಗಂಗಾಧರ ಮೊದಲಿಯಾರ್, ಮಂಜುನಾಥ್ ಬೊಮ್ಮನಕಟ್ಟೆ, ಜಯಕುಮಾರ್, ಮಾಲತೇಶ್ ಅರಸ್, ಸತೀಶ್ ಕುಮಾರ್, ವೆಂಕಟೇಶ್ ಪ್ರಸಾದ್ ಅವರುಗಳು ಬೊಧಿಸಿದರು. ಇದಲ್ಲದೇ, ‘ದೇಶದ್ರೋಹ ಕಾಯ್ದೆ’ ಮಾನಹಾನಿ ಕಾಯ್ದೆ ರದ್ದತಿ, ಕನ್ನಡ ಭಾಷಾ ಮಾಧ್ಯಮ ಪ್ರೋತ್ಸಾಹಕ್ಕೆ ಸರ್ಕಾರಿ ಜಾಹೀರಾತು ಬಿಡುಗಡೆ ಕುರಿತಂತೆ ಸರ್ಕಾರವನ್ನು ಒತ್ತಾಯಿಸಬೇಕೆಂಬ ನಿರ್ಣಯವೂ ಆಯಿತು.

ಇವತ್ತು ‘ಉಗ್ರವಾದ’, ‘ನಕ್ಸಲ್‍ವಾದ’, ‘ಕೋಮು ಗಲಭೆ’, ‘ರಾಜಕೀಯ ಗಿಮಿಕ್’, ಸಂಘರ್ಷಗಳು ಮಾರಾಟದ ವಸ್ತುವಾಗಿವೆ. ಕೋಮುಗಲಭೆ ಎದ್ದಾಗ ವರದಿಗಾರಿಕೆ ಮಾಡುವುದು ಸವಾಲಿನ ಕೆಲಸ. ‘ಭಯೋತ್ಪಾದಕ’, ‘ನಕ್ಸಲ್’ ಗುಂಪುಗಳ ಚಟುವಟಿಕೆ ಬಗ್ಗೆ ವಿಸ್ತ್ರತವಾಗಿ ವರದಿ ಮಾಡಿದರೆ, ಪೊಲೀಸು, ರಕ್ಷಣಾ ಪಡೆ, ಇಂಟೆಲಿಜನ್ಸು ಬೆನ್ನಿಗೆ ಬೀಳುತ್ತವೆ. ‘ಭಯೋತ್ಪಾದಕ’ ಮತ್ತು ‘ನಕ್ಸಲ್’ ಗುಂಪುಗಳು ತಮ್ಮ ಹೇಳಿಕೆ, ವಿಚಾರಗಳನ್ನು ಹೊರ ಪ್ರಪಂಚಕ್ಕೆ ಪತ್ರಕರ್ತರು ತಿಳಿಸಿಕೊಡಬೇಕೆಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಪ್ರತಿಭಟನೆಗೆ ಸಂಬಂಧಪಟ್ಟ ವರದಿ ಮಾಡುವಾಗ ಪೊಲೀಸರ ಲಾಠಿಚಾರ್ಜಿಗೂ ಒಳಗಾಗುತ್ತಾರೆ. ಪ್ರತಿಭಟನಾಕಾರರ ಅತಿರೇಕಗಳನ್ನು ಸೆರೆಹಿಡಿದರೆ, ಅವರಿಂದಲೂ ಥಳಿತಕ್ಕೆ ಒಳಗಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಾರಣಾಂತಿಕ ಗಾಯಕ್ಕೆ ಈಡಾದ ನಿದರ್ಶನಗಳು ಇವೆ. ತನಿಖಾ ವರದಿ ಮಾಡುವ ಪತ್ರಕರ್ತರಂತೂ ಗಂಡಾಂತರವನ್ನು ಬೆನ್ನಿಗೆ ಕಟ್ಟಿಕೊಂಡಿರುತ್ತಾರೆ. ಗಡಿ ಭಾಗದಲ್ಲಿ ಆಗುವ ಗಲಭೆಯ ವರದಿಗೆ ತೆರಳುವ ಪತ್ರಕರ್ತರ ಜೀವಕ್ಕೆ ಯಾವುದೇ ಖಾತರಿಯೂ ಇರುವುದಿಲ್ಲ. ಹೀಗೆ ವೈಯಕ್ತಿಕ ಹಿತಾಸಕ್ತಿ ಕಡೆಗಣಿಸಿ, ಅಪಾಯ ಇದ್ದರೂ ವರದಿ ಮಾಡುತ್ತಾರೆ. ‘ಹತ್ಯೆ’ ‘ಅತ್ಯಾಚಾರಿ’ಗಳಿಗೂ ಒಳಗಾಗುತ್ತಾರೆ.
ಅರಸ ಸಾರಾಂ ಗ್ರಾಮದ ಹೆದ್ದಾರಿಯಲ್ಲಿ ನವೀನ್ ನಿಶ್ಚಲ್ ಮತ್ತು ವಿಜಯ ಶರ್ಮ ಎಂಬ ಬಿಹಾರದ ಇಬ್ಬರು ಪತ್ರಕರ್ತರ ಮೇಲೆ ಎಸ್‍ಯುವಿ ಕಾರನ್ನು ಹತ್ತಿಸಿ ಕೊಲ್ಲಲಾಗಿದೆ. ಭೂಪಾಲ್‍ನ ಸಂದೀಪ್ ಶರ್ಮನನ್ನು ಮರಳು ಮಾಫಿಯಾದವರು ಅಪಘಾತ ಮಾಡಿ ಕೊಂದಿದ್ದಾರೆ. ಇದು ಸಿಸಿಟಿವಿಯಲ್ಲೂ ದಾಖಲಾಗಿದೆ. ಇದು ಪೊಲೀಸರ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ. ದೆಹಲಿ ಸಮೀಪದ ನೋಯ್ಡಾದ ಸುದ್ದಿವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿತಾಲಿ ಚಂದೋಲ ಅವರನ್ನು ಗುಂಡಿಟ್ಟು ಕೊಂದು ಕೌಟುಂಬಿಕ ಕಾರಣ ಕೊಡಲಾಗುತ್ತಿದೆ. ಬರಹಗಾರರಾದ ಸುಧಾ ಭಾರದ್ವಾಜ್, ಪ್ರೊ. ಆನಂದ ತೇಲ್ತುಂಬೆ ಅಂತಹವರನ್ನು ಬಂಧಿಸಿದೆ. ಉತ್ತರ ಪ್ರದೇಶದಲ್ಲಿ ಕೊಲೆ ಆರೋಪ ಹೊತ್ತಿದ್ದ ಮುಸ್ತಕೀಮ್ ಮತ್ತು ನೌಷಾದ್ ಅವರನ್ನು ‘ಎನ್‍ಕೌಂಟರ್’ ಮಾಡಲು ಪತ್ರಕರ್ತರನ್ನು ಆಹ್ವಾನಿಸಿ ಗುಂಡಿಟ್ಟು ಕೊಂದು ಭಯ ಮೂಡಿಸಲಾಗಿದೆ. ಪ್ರಧಾನಿ ಜೊತೆಗಿನ ಸಂವಾದದಲ್ಲಿ ಛತ್ತೀಸ್‍ಗಡದ ಮಹಿಳೆಯೊಬ್ಬರು ಕೃಷಿಯಲ್ಲಿ ನನ್ನ ಆದಾಯ ದುಪ್ಪಟ್ಟು ಆಗಿದೆ ಎಂದಿದ್ದರು. ಈ ಮಹಿಳೆಯನ್ನು ಹುಡುಕಿ ವಸ್ತುಸ್ಥಿತಿಯನ್ನು ಎಬಿಪಿ ನ್ಯೂಸ್ ‘ಮಾಸ್ಟರ್ ಸ್ಟ್ರೋಕ್’ ನಲ್ಲಿ ಪ್ರಸಾರ ಮಾಡಿತ್ತು. ‘ಆದಾಯ ದುಪ್ಪಟ್ಟು ಆಗಿದೆ’ ಎಂದು ಹೇಳುವಂತೆ ಅಧಿಕಾರಿಗಳು ಒತ್ತಡ ಹೇರಿದ್ದರೆಂಬ ಸತ್ಯವನ್ನು ಮಹಿಳೆ ಹೊರ ಹಾಕಿದ್ದಳು. ಇದರಿಂದ ವಾಹಿನಿಯ ವ್ಯವಸ್ಥಾಪಕ ಸಂಪಾದಕ ಮತ್ತು ಇಬ್ಬರು ನಿರೂಪಕರನ್ನು ಕೆಲಸದಿಂದ ತೆಗೆಯಲಾಗಿದೆ. ಲೋಕಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿದೆ. ಎಬಿಪಿ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ಆದರೂ ನಾವು ಕ್ರಮ ಕೈಗೊಂಡಿಲ್ಲ. ವಾಹಿನಿಯ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು, ಹೀಗಾಗಿ ಪತ್ರಕರ್ತರು ಕೆಲಸ ಕಳೆದುಕೊಂಡಿರಬಹುದೆಂದು ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಉತ್ತರಿಸಿದ್ದರು. ಅಲ್ಲದೇ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮ ಪ್ರಸಾರ ಆಗುವಾಗ ಸಿಗ್ನಲ್ ಕಟ್ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಇಂಟರ್‍ನೆಟ್‍ನಲ್ಲಿ ಅಡೆತಡೆ ಇಲ್ಲದೆ ಪ್ರಸಾರ ಆಗುತ್ತಿದೆ.

“ನಾನು ಒಂದು ಅಭಿವ್ಯಕ್ತಿ, ನನ್ನನ್ನು ಉಳಿಸಿ” “ಪತ್ರಿಕಾ ಸ್ವಾತಂತ್ರ್ಯ ನಮ್ಮ ಹಕ್ಕು” ಎನ್.ರಾಮ್ ನಿಮ್ಮೊಂದಿಗೆ ನಾವಿದ್ದೇವೆ… ಎಂಬ ಕಹಳೆಯನ್ನು ಗ್ರಾಮಸೇವಾ ಸಂಘ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಮುಂದೆ ಮೊಳಗಿಸಿತ್ತು. ಸರ್ಕಾರವನ್ನು ಟೀಕಿಸುವುದನ್ನು ಅಪರಾಧ ಎಂದು ಬಿಂಬಿಸುವ ಮೂಲಕ ಸಂವಿಧಾನ ನೀಡಿದ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಘಾಲಯದ ಶಿಲ್ಲಾಂಗ್ ಹೈಕೋರ್ಟ್‍ನ ನ್ಯಾಯಮೂರ್ತಿಯೊಬ್ಬರ ಮೊಬೈಲ್ ಫೋನ್ ವಿಚಾರವನ್ನು ಬರೆದುದಕ್ಕಾಗಿ 2ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಆಗದೇ ಇದ್ದರೆ, ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ತೀರ್ಪು ನೀಡಲಾಗಿದೆ. ಬಿಹಾರದ ಮುಝಾಫರ್ ಪ್ಪುರ ‘ಬಾಲಿಕಾ ಗೃಹ’ ಅತ್ಯಾಚಾರ ಪ್ರಕರಣದ ಬಗ್ಗೆ ಯಾವುದೇ ವರದಿ ಮಾಡಬಾರದೆಂದು ಪಾಟ್ನಾ ಹೈಕೋರ್ಟು ಮಾಧ್ಯಮಗಳನ್ನು ನಿರ್ಬಂಧಿಸಿತ್ತು. ಇದು ‘ಅಭಿವ್ಯಕ್ತಿ ಸ್ವಾತಂತ್ರ’್ಯದ ‘ಸಾಂವಿಧಾನಿಕ ಹಕ್ಕಿ’ನ ಉಲ್ಲಂಘನೆ. ‘ಮಾಧ್ಯಮ ಸ್ವಾತಂತ್ರ’್ಯ ರಕ್ಷಿಸಬೇಕಾದ ನ್ಯಾಯಾಲಯವೇ ಅದನ್ನು ನಿಯಂತ್ರಿಸಲು ಮುಂದಾಗಿದ್ದು ವಿಪರ್ಯಾಸ. ‘ಸೋಹ್ರಾಬುದ್ದೀನ್ ಎನ್‍ಕೌಂಟರ್’ ಪ್ರಕರಣದ ವರದಿಗಾರಿಕೆಗೆ ಸಿಬಿಐ ಕೋರ್ಟು ನಿಷೇಧ ಹೇರಿತ್ತು. ನಂತರ ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು. ಮುಂಬೈನ ಶಕ್ತಿಮಿಲ್ ನಲ್ಲಿ ಛಾಯಾಚಿತ್ರ ತೆಗೆದು ವರದಿ ಮಾಡಲು ತೆರಳಿದ್ದ ಫೋಟೋಗ್ರಾಫರ್ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಹಾಗೆಯೇ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಓರ್ವ ಪೊಲೀಸ್ ಅಧಿಕಾರಿ ಲೈಂಗಿಕ ಕಿರುಕುಳ ಕೊಟ್ಟನೆಂದು, ಮತ್ತೊಬ್ಬ ಪೊಲೀಸ್ ಅಧಿಕಾರಿ ಕ್ಯಾಮರಾ ಕಸಿದನೆಂದು ಪತ್ರಕರ್ತೆಯರು ನೋವು ತೋಡಿಕೊಂಡಿದ್ದಾರೆ.

ಭಾರತ ಜಗತ್ತಿನಲ್ಲಿಯೇ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂಬ ಬಿರುದು ಬಾವಲಿಗೆ ಒಳಗಾಗಿದೆ. ಇದಕ್ಕೆ ಅಪವಾದ ಎಂಬಂತೆ ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನ ಗಳಿಸಿದೆ. ಪತ್ರಕರ್ತರು ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದರೂ ಬಿಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಯೂ ವಸ್ತುನಿಷ್ಟವಾಗಿ ಅಭಿವ್ಯಕ್ತಿಸುವವರನ್ನು ‘ದೇಶದ್ರೋಹಿ’ಗಳಂತೆ ಬಿಂಬಿಸಿ ಬೆದರಿಸಲಾಗುತ್ತಿದೆ. ಎಡಪಂಥೀಯ ಚಿಂತನೆಯುಳ್ಳ ಬರಹಗಾರರನ್ನು ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಅಂಟಿಸಲಾಗುತ್ತಿದೆ. 2017 ರ ಜನವರಿ 2 ರಂದು ಹರಿಪ್ರಕಾಶ್ ಜೀವ ತೆಗೆಯಲಾಗಿದೆ. ಜನವರಿ 3 ರಂದು ಬ್ರಿಜೇಶ್‍ಕುಮಾರ್ ಸಿಂಗ್‍ನನ್ನು ಹತ್ಯೆ ಮಾಡಲಾಗಿದೆ. ಮೇ 16 ರಂದು ಶ್ಯಾಂಶರ್ಮರನ್ನು, ಮೇ 31 ರಂದು ಕಮಲೇಶ್ ಜೈನ್‍ರನ್ನು, ಜುಲೈ 29 ರಂದು ಸುರೇಂದ್ರ ಸಿಂಗ್ ರಾಣಾನನ್ನು, ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್‍ರನ್ನು, ಸೆಪ್ಟೆಂಬರ್ 20 ರಂದು ಶಂತನು ಭೌಮಿಕ್ ರನ್ನು, ಸೆಪ್ಟೆಂಬರ್ 23 ರಂದು ಕೆ.ಜೆ. ಸಿಂಗ್‍ರನ್ನು, ಅಕ್ಟೋಬರ್ 21 ರಂದು ರಾಜೇಶ್ ಮಿಶ್ರಾರನ್ನು, ನವೆಂಬರ್ 21 ರಂದು ಸಂದೀಪ್ ದತ್ತಾ ಭೌಮಿಕ್‍ರನ್ನು, ನವೆಂಬರ್ 30 ರಂದು ನವೀನ್ ಗುಪ್ತಾರನ್ನು, ಡಿಸೆಂಬರ್ 21 ರಂದು ಶರೋನ್ ಅವರ ಜೀವ ತೆಗೆಯಲಾಗಿದೆ.

ಇದೆಲ್ಲವನ್ನೂ ಗಮನಿಸಿದರೆ ದಕ್ಷಿಣ ಏಷ್ಯಾದಲ್ಲಿ ಪ್ರತಿವರ್ಷ ಕನಿಷ್ಟ 10 ಪತ್ರಕರ್ತರ ಹತ್ಯೆ ನಡೆಯುತ್ತಲೇ ಇದೆ. ಗೌರಿ ಲಂಕೇಶ್ ಅವರ ಹತ್ಯಾ ಪ್ರಕರಣ ಹೊರತುಪಡಿಸಿದರೆ ಉಳಿದವರ ಪ್ರಕರಣಗಳಲ್ಲಿ ಸಾರ್ವಜನಿಕ ಪ್ರತಿಭಟನೆ ಮಾಧ್ಯಮಗಳ ಅಸಹನೆ ಹೆಚ್ಚು ಸದ್ದು ಮಾಡಿರಲಿಲ್ಲ. ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೂಡ ಗೌರಿ ಲಂಕೇಶ್ ಅವರ ಹತ್ಯೆ ವಿರೋಧಿಸಿ ನ್ಯಾಯ ಒದಗಿಸಲು ಆಗ್ರಹಿಸಿದ್ದರು. ದುರಂತದ ವಿಚಾರ ಎಂದರೆ ಇದೇ ಮಾಣಿಕ್ ಸರ್ಕಾರ್ ಅಧಿಕಾರದಲ್ಲಿದ್ದಾಗ ಬಲಿಯಾದ ಶಂತನು, ಪೊಲೀಸರು ಹತ್ಯೆಗೈದ ‘ಸುದೀಪ್ ದತ್ತಾ’ ಪ್ರಕರಣಗಳಲ್ಲಿ ಮೌನವಾಗಿದ್ದರು. ಈ ಸಂಬಂಧ ಪ್ರಶ್ನಿಸಿದ ಪತ್ರಕರ್ತರಿಗೆ 2013 ರಲ್ಲಿ ಹತ್ಯೆಯಾದ ರಣಜೀತ್ ಚೌಧರಿ, ಬಲರಾಮ್ ಘೋಷ್, ಸುಜೀತ್ ಭಟ್ಟಾಚಾರ್ಯ ಪ್ರಕರಣಗಳನ್ನು ಮುಂದಿಟ್ಟಿದ್ದರು. ಇಲ್ಲಿ ಆರೋಪಿತರಲ್ಲಿ ಒಬ್ಬರಿಗೂ ಶಿಕ್ಷೆಯಾಗಿಲ್ಲ.

ಕಳೆದೊಂದು ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಪತ್ರಕರ್ತರನ್ನು ಸುದ್ದಿ ಸಂಗ್ರಹಿಸುವಾಗ ಕೊಲ್ಲಲಾಗಿದೆ. ಸಮಾಜದ ಸ್ವಾಸ್ತ್ಯ ಕಾಪಾಡಲು ಓದುಗರ, ವೀಕ್ಷಕರಲ್ಲಿ ಅರಿವು ಮೂಡಿಸಲು ಹೊರಟು ಸತ್ಯ ಹೇಳಿದ ಪತ್ರಕರ್ತರು ಹುತಾತ್ಮರಾಗಿದ್ದಾರೆ. ದುಷ್ಕøತ್ಯ ಎಸಗಿದ 10 ಪ್ರಕರಣಗಳಲ್ಲಿ ಒಂದನ್ನು ಮಾತ್ರ ನ್ಯಾಯಾಲಯದ ಮುಂದೆ ತರಲಾಗಿದೆ. ಉಳಿದ 9 ಪ್ರಕರಣಗಳಲ್ಲಿ ದುಷ್ಕರ್ಮಿಗಳು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ನಮಗೆ ‘ವಾಕ್ ಸ್ವಾತಂತ್ರ್ಯ’ ಇದೆ ಎಂದಷ್ಟೇ ಹೇಳಿಕೊಳ್ಳಬೇಕು. ವಿಶ್ವಸಂಸ್ಥೆ ಪತ್ರಕರ್ತರ ಪಾಡನ್ನು ಕಂಡು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಾಗಿ ಘೋಷಿಸಿದೆ. ಪತ್ರಕರ್ತರನ್ನು ಸುಲಭವಾಗಿ ಹಿಡಿದು ಬಡಿಯುತ್ತಿದ್ದ ದುಷ್ಕರ್ಮಿಗಳಿಗೆ ವಿಶ್ವಸಂಸ್ಥೆಯ ನಿರ್ಣಯ ಒಂದು ಎಚ್ಚರಿಕೆಯ ಕ್ರಮವಾಗಿದೆ. ಪತ್ರಕರ್ತರ ಮೇಲೆ ನಡೆಯುವ ಹಲ್ಲೆ, ಹತ್ಯೆ ತಡೆಯಲು ಇದೊಂದು ಉತ್ತಮ ಪ್ರಯತ್ನವಾಗಿದೆ. ಒಂದು ಸಾವಿರ ಪತ್ರಕರ್ತರು ಎದ್ದರೆ ಒಬ್ಬ ಬಿದ್ದೇ ಬೀಳುತ್ತಾನೆ ಎಂಬ ಪ್ರಕಾಶನ ಅಭಿಯಾನವನ್ನೇ ಕೈಗೊಂಡಿದೆ. ಇದನ್ನು ಸತ್ಯ ಎಂದಿಗೂ ಸಾಯುವುದಿಲ್ಲ ಎಂದೇ ಕರೆಯಲಾಗುತ್ತಿದೆ. ಇಂತಹದೊಂದು ಸುರಕ್ಷೆ ಪತ್ರಕರ್ತರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ದೊರಕುವಂತಾಗಬೇಕು.

ನಮ್ಮ ದೇಶದಲ್ಲಿ ಪತ್ರಕರ್ತರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ಯಾರೂ ಕೂಡ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಇದನ್ನೇಕೆ ಹೇಳಿದೆನೆಂದರೆ ಸಂದೀಪ್ ಶರ್ಮ ಬಿಡಿಸುದ್ದಿ ಸಂಗ್ರಹಕಾರ. ಅಂದರೆ ಭಾತ್ಮಿದಾರ. ನಿಗದಿತ ವೇತನವಿಲ್ಲದೆ ಸುದ್ದಿಗಿಷ್ಟು ಎಂದು ಸಂಭಾವನೆ ಪಡೆಯುವ ವರದಿಗಾರ. ಹೀಗಿದ್ದರೂ ಬೆದರಿಕೆಗಳಿಗೆ ಜಗ್ಗದೆ ಈತ ವರದಿ ಸಂಗ್ರಹಿಸುವಾಗ, ಹತ್ಯೆಗೊಳಗಾದರೂ ಮಾಧ್ಯಮ ಸಂಸ್ಥೆ ಸಾಸಿವೆಯಷ್ಟೂ ಸಹಾಯ ಹಸ್ತ ಚಾಚಿರುವುದಿಲ್ಲ. ಬೆಂಗಳೂರಿನಂತಹ ಬೆಳವಣಿಗೆ ನಗರದಲ್ಲೂ ವಿಶ್ವೇಶ್ವರ ಭಟ್ಟರಂತಹ ಪತ್ರಕರ್ತರು, ಮಡಿಕೇರಿಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ಲಿಂಗಸಗೂರಿನ ಶರಣಯ್ಯ ಒಡೆಯರ್, ನಾಗಮಂಗಲದ ವೆಂಕಟೇಶ್ ಅವರಂತಹವರ ಪಾಡು ಸಂದೀಶ್ ಶರ್ಮರಂತದ್ದೇ ಆಗಿದೆ. ಇಲ್ಲಿವರ ಜೀವ ತೆಗೆದಿಲ್ಲವಾದರೂ ಬೆದರಿಕೆ ಹಾಕಲಾಗಿದೆ, ಹಲ್ಲೆ ನಡೆಸಲಾಗಿದೆ, ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿದೆ. ಆಮಿಷಗಳನ್ನು ಒಡ್ಡಲಾಗಿದೆ. ಇದೇ ರೀತಿ ಮುಂಬೈ, ಹೈದರಾಬಾದ್, ದೆಹಲಿಯಂತಹ ನಗರಗಳಲ್ಲಿಯೂ ಪತ್ರಕರ್ತರಿಗೆ ‘ಸುರಕ್ಷತೆ’ ಎಂಬುದೇ ಇರುವುದಿಲ್ಲ.

ಹತ್ತಾರು ಪ್ರಾದೇಶಿಕ ಪತ್ರಿಕೆಗಳಿದ್ದರೂ, ಇಲ್ಲಿ ಕಾರ್ಯ ನಿರ್ವಹಿಸುವ ವರದಿಗಾರರು ಸಂಬಳದ ಮುಖವನ್ನೇ ಕಂಡಿರುವುದಿಲ್ಲ. ಅವರ ಸಂಬಳಕ್ಕಾಗಿ ಜಾಹೀರಾತು ಸಂಗ್ರಹಿಸಿ ಕಮಿಷನ್ ರೂಪದಲ್ಲಿ ಸಂಬಳ ಸರಿದೂಗಿಸಿಕೊಳ್ಳಬೇಕು. ಇವರು ಗುರುತಿನ ಪತ್ರ ಹೊಂದಿದ್ದರೂ ವೇತನ ಮಂಡಳಿಯ ಶಿಫಾರಸಿಗೆ ಎಂದೆಂದೂ ಒಳಗಾಗುವುದಿಲ್ಲ. ಹೆಚ್ಚೆಂದರೆ ಜಿಲ್ಲಾಮಟ್ಟದಲ್ಲಿ ಸಂಚರಿಸಲು ಬಸ್‍ಪಾಸ್ ಮಾತ್ರ ಹೊಂದಿರುತ್ತಾರೆ. ಇದಕ್ಕೂ 5000 ಕೊಟ್ಟು ಏಜೆನ್ಸಿ ತೆಗೆದುಕೊಂಡಿರಬೇಕು. ಹೀಗಾಗಿಯೇ ಇವರು ಜಾಹೀರಾತು ಹಿಂದೆ ಬಿದ್ದಿರುತ್ತಾರೆ. ಇವರು ನೀಡುವ ಪ್ರತಿಯೊಂದು ಸುದ್ದಿಯ ಹಿಂದೆ ಜಾಹೀರಾತಿನ ಮೂಲ ಇದ್ದೇ ಇರುತ್ತದೆ. ಇವರುಗಳನ್ನು ಮಾಲೀಕರು ಶೋಷಿಸಿದರೆ, ಅಪರಾಧಿಗಳು ಹಿಂಸಿಸುತ್ತಾರೆ. ಇವರ ನೆರವಿಗೆ ಧಾವಿಸಬೇಕಾದ ಪತ್ರಕರ್ತರ ಸಂಘಟನೆಗಳು ‘ಸೆಲ್ಫಿ’ಯಲ್ಲಿ ಬಿದ್ದು ಹೊರಳಾಡುತ್ತಿವೆ.
ಹೀಗಾಗಿ ‘ಮಾಧ್ಯಮ ಸ್ವಾತಂತ್ರ್ಯ’ ಎಂಬುದು ಭ್ರಮೆಯಂತೆ ಭಾಸವಾಗುತ್ತದೆ. ‘ಅಧಿಕಾರ ನಿಯಂತ್ರಣ’ ಮತ್ತು ‘ಅಧಿಕಾರ ದುರುಪಯೋಗ’ವನ್ನು ತಡೆಗಟ್ಟುವ ಮಾಧ್ಯಮದ ಕಾರ್ಯ ಆಳುವ ಸರ್ಕಾರದ ಕಣ್ಣನ್ನು ಕೆಂಪಾಗಿಸಿದೆ. ಇದಕ್ಕಾಗಿ ಸರ್ಕಾರಿ ಜಾಹೀರಾತು ನಿಲ್ಲಿಸಿ ಹಿಂಸಿಸಿರುವ ಉದಾಹರಣೆಗಳು ಸಾಕಷ್ಟಿವೆ. ಇಂದಿನ ಬೆಲೆಏರಿಕೆಯ ದಿನಮಾನಗಳಲ್ಲಿ ಮಾಧ್ಯಮ ಬದುಕುಳಿಯಲು ಜಾಹೀರಾತನ್ನು ಅವಲಂಭಿಸಲೇಬೇಕಿದೆ. ಸರ್ಕಾರೇತರ ಜಾಹೀರಾತುಗಳಿಗಿಂತ ಸರ್ಕಾರಿ ಜಾಹೀರಾತುಗಳು ಬಹುಮುಖ್ಯವಾಗುತ್ತವೆ. ಹಿಂದೆ ಪ್ರಜಾವಾಣಿಯಂತಹ ಪತ್ರಿಕೆಗೆ ಜಾಹೀರಾತನ್ನು ನಿಲ್ಲಿಸಿ ಬೆದರಿಸಲಾಗಿತ್ತು. ಇದರಂತೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಾಹೀರಾತಿನ ಬಿಡುಗಡೆ ಆದೇಶ ವಾಪಸ್ಸು ಪಡೆದು ಪತ್ರಕರ್ತರ ಹೊಟ್ಟೆ ಒಡೆದಿರುವ ಪ್ರಸಂಗವೂ ಇದೆ. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಸರ್ಕಾರಿ ಜಾಹೀರಾತಿನ ಮೇಲೆಯ ಅವಲಂಬಿತವಾಗಿರುತ್ತವೆ. ಇದನ್ನರಿತೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಭಾಗದ ಜಾಹೀರಾತು ಬಿಡುಗಡೆಗೆ ಆದೇಶ ಹೊರಡಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಒಡೆತನದ ಪತ್ರಿಕೆಗಳಿಗೆ ‘ಮುದ್ರಣ ಯಂತ್ರ’ ‘ಹೆಚ್ಚುವರಿ ಅರ್ಧಪುಟ ಜಾಹೀರಾತು’ ಬಿಡುಗಡೆ, ‘ಲ್ಯಾಪ್‍ಟಾಪ್’ ವಿತರಣೆ ಸೇರಿದಂತೆ ಹಲವು ರೀತಿಯಲ್ಲಿ ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲೂ ಜಾಹೀರಾತು ನೀಡುವಾಗ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚು ಜಾಹೀರಾತು ನೀಡಲು ಸೂಚನೆಯನ್ನೂ ಕೊಟ್ಟಿದ್ದರು. ಹೀಗಿರುವಾಗ ಸರ್ಕಾರಿ ಜಾಹೀರಾತು ನಿಲ್ಲಿಸಿದರೆ ಅದೆಷ್ಟೋ ಪತ್ರಿಕೆಗಳು ತಾನಾಗಿಯೇ ಮುಚ್ಚಿಹೋಗಿಬಿಡಲಿವೆ. ಹೀಗಾಗಿ ಮಾಧ್ಯಮ ಬಹುತೇಕ ಸರ್ಕಾರದ ವಿರುದ್ಧ ಧ್ವನಿ ಎತ್ತಲು ತಿಣುಕಾಡುತ್ತವೆ. ತನ್ನ ‘ನೀತಿ’, ‘ಧೋರಣೆ’ ಎಲ್ಲವನ್ನೂ ಬದಲಾಯಿಸಿಕೊಂಡುಬಿಡುತ್ತವೆ. ಇದಲ್ಲದೆ ಮಾಧ್ಯಮವನ್ನು ಮಣಿಸಲು ತೋಳ್ಬಲವನ್ನು ಬಳಸಲಾಗುತ್ತಿದೆ.

‘ಮಾಧ್ಯಮ ಸ್ವಾತಂತ್ರ್ಯ’ ಕಳೆದುಕೊಳ್ಳಲು ಮತ್ತೊಂದು ಪ್ರಮುಖ ಕಾರಣವಿದೆ. ಅದು ಸರ್ಕಾರದ ‘ಉದಾರೀಕರಣ’ ಮತ್ತು ‘ಖಾಸಗೀಕರಣ ನೀತಿ’. ಇದರಿಂದ ಕನಿಷ್ಟ ಅವಧಿಯಲ್ಲಿ ಗರಿಷ್ಟ ಲಾಭ ಗೆಬರುವ ಉದ್ದಿಮೆದಾರರು, ಮಾರುಕಟ್ಟೆಯಲ್ಲಿ ತಮ್ಮ ಉತ್ಪಾದನೆಯ ವಸ್ತುವಿಗೆ ಸಮತೋಲನ ಕಾಯ್ದುಕೊಳ್ಳಲು ಮಾಧ್ಯಮದ ಒಡೆಯರಾಗುತ್ತಿದ್ದಾರೆ. ಅಲ್ಲದೇ ಸರ್ಕಾರದ ಮೇಲೆ ಪ್ರಭಾವ ಬೀರಿ ಕಾನೂನು, ಕಾಯ್ದೆಗಳನ್ನು ತಮ್ಮ ಉದ್ಯಮಕ್ಕೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳಲು ಮಾಧ್ಯಮವನ್ನು ಬಳಸಲಾಗುತ್ತಿದೆ. ಇಂತಹವರ ಕೈಗೆ ಮಾಧ್ಯಮ ಸಿಕ್ಕ ಮೇಲೆ ಸಂಪಾದಕೀಯ, ಅಂಕಣ, ಬ್ರೇಕಿಂಗ್ ಸುದ್ದಿ, ಸಂವಾದ ಸೇರಿದಂತೆ ಎಲ್ಲ ವಿಭಾಗಗಳ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ಕೆಲವರು ರಾಜಕೀಯ ಅಧಿಕಾರ ಗಳಿಸಲು ಬಳಸಿಕೊಳ್ಳುವರು. ಕಾರ್ಪೊರೇಟ್, ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಆರಂಭವಾಗುವ ‘ಮಾಧ್ಯಮ’ ಕ್ರಮೇಣ ಕುಸಿತವನ್ನು ಕಾಣುತ್ತದೆ. ಇದಕ್ಕೆ ಕಪಿಲ್ ಸಿಬಲ್‍ರ ತಿರಂಗಾವಾಹಿನಿ, ಉದಯನ್ಯೂಸನ್ನು ಉದಾಹರಿಸಬಹುದು. ಮುಕ್ತ ಮಾಧ್ಯಮದಿಂದಾಗಿ ಜನರ ಚಿಂತನಾ ಶಕ್ತಿಯನ್ನು ಹರಣ ಮಾಡಿ, ತಿರುಚುತ್ತಿರುವ ಸಾಧ್ಯತೆಳಿಂದು ಹೆಚ್ಚಾಗಿವೆ. ವಾಸ್ತವ ಚಿತ್ರಣವನ್ನು ಮರೆಮಾಡಲಾಗುತ್ತಿದೆ. ಇದು ಕೂಡ ಮಾಧ್ಯಮ ಸ್ವಾತಂತ್ರ್ಯದ ಹರಣವಾಗಿದೆ. ಹೀಗಿರುವಾಗ ಅದ್ಹೇಗೆ ‘ಮಾಧ್ಯಮ ಮುಕ್ತ’ವಾಗಿದೆ. ‘ಸ್ವಾತಂತ್ರ’್ಯವನ್ನು ಹೊಂದಿದೆ?

ಇನ್ನು ಪತ್ರಕರ್ತರ ರಕ್ಷಣೆಗೆ ನಿಯಮ ರೂಪಿಸಿದ ಮೊದಲ ರಾಜ್ಯ ಮಹಾರಾಷ್ಟ್ರ. ಇಲ್ಲಿಯೇ ಪತ್ರಕರ್ತರ ಮೇಲೆ 218 ಆಕ್ರಮಣ ನಡೆದಿದೆ. ಕರ್ನಾಟಕದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆದಾಗ ರಕ್ಷಣೆ ನೀಡಿ ನೆರವಿಗೆ ಧಾವಿಸಬೇಕಾದ ಸಮಿತಿ ರಚನೆಯಾಗಿ ದಶಕಕಕ್ಕೂ ಹೆಚ್ಚು ಕಾಲವಾಗಿದೆ. ಗೃಹಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಬೇಕು. ಸಮಿತಿ ಪುನರ್‍ರಚನೆಗೆ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸರ್ಕಾರವನ್ನು ಒತ್ತಾಯಿಸಿದ್ದೆ. ಅದು ಇಂದಿಗೂ ಫಲ ನೀಡಿಲ್ಲ. ಇಂತಹದ್ದೊಂದು ಸಮಿತಿಯ ರಚನೆ ಅಧಿಕಾರಶಾಹಿಗೆ ಬೇಡವಾಗಿದೆ. ಇದೀಗ ಪತ್ರಕರ್ತರನ್ನು ಕೊಲ್ಲುವ ಬದಲಿಗೆ ಹಂತಕರು, ಮಾನನಷ್ಟ ಮೊಕದ್ದಮೆ ಹೂಡುವುದನ್ನು ಕಲಿತುಕೊಂಡಿದ್ದಾರೆ. ‘ಮೊಕದ್ದಮೆ’ ಹೂಡಿ ಕಬ್ಬನ್ನು ಅರೆದು ಹಿಂಸಿಸಿರುವ ವಿಧಾನ ಕಂಡುಕೊಂಡಿದ್ದಾರೆ. ದೇಶದ, ರಾಜ್ಯದ ಪ್ರಮುಖ ಆಗುಹೋಗುಗಳ ವಿಚಾರ ಇದ್ದಾಗ, ಆಮಿಷಕ್ಕೆ ಬಲಿಯಾಗದ ಪತ್ರಿಕೆಗಳ ಮುಖಪುಟವನ್ನು ಜಾಹೀರಾತು ಹೆಸರಲ್ಲಿ ಖರೀದಿಸಿ ವಂಚಿಸುವವರು ಇದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ ಭವಿಷ್ಯದಲ್ಲಿ ಸ್ವತಂತ್ರ ಪತ್ರಿಕೋದ್ಯಮ ಎಂಬುದು ಅಳಿಸಿಹೋಗಿಬಿಡಲಿದೆ. ‘ಡಿಜಿಟಲ್ ಮಾಧ್ಯಮ’ ಮಾತ್ರ ಒತ್ತಾಸೆಯಾಗಿ ನಿಲ್ಲುವ ಸಂಭವವಿದೆ. ಇಂತಹ ಕಠಿಣ, ವಿಷಮ ಪರಿಸ್ಥಿತಿಯಲ್ಲೂ ‘ಪತ್ರಿಕಾಧರ್ಮ’ದಂತೆ ನಡೆದುಕೊಳ್ಳುವ, ನಡೆದುಕೊಳ್ಳುತ್ತಿರುವ ಪತ್ರಕರ್ತರಿದ್ದಾರೆ. ಇವರು ಯಾರಿಗೂ ತಲೆಬಾಗರು. ಬಾಗುವುದೂ ಇಲ್ಲ. ಒಟ್ಟಾರೆ ದೇಶದಲ್ಲಿಂದು ‘ಸ್ವತಂತ್ರ ಮಾಧ್ಯಮ’ ಎಂಬುದು ಭಾಷಣಗಳಲ್ಲಿ ಮಾತ್ರ ಕೇಳಿಬರುತ್ತಿದೆ.
***

Related Articles

Leave a Reply

Your email address will not be published. Required fields are marked *

Back to top button