Homeಜನಮನಪ್ರಮುಖ ಸುದ್ದಿ

ರಾಜ್ಯದಲ್ಲಿ ಇನ್ನೂ12 ಸಾವಿರ ಶಿಕ್ಷಕರ ನೇಮಕ – ಶಿಕ್ಷಣ ಸಚಿವ ಮಧು ಬಂಗಾರಪ್ಪ

ತುಮಕೂರು: ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಿದಲಾಗಿದೆ. ಇನ್ನೂ ಶಿಕ್ಷಕರ ಕೊರತೆ ಎದುರಾಗಿದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ 10 – 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವ ಆರ್ಥಿಕ ಇಲಾಖೆಯ ಮುಂದಿದೆ. ಅನುಮತಿ ದೊರಕಿದ ತಕ್ಷಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಪರಿಹರಿಸುವ ಸಲುವಾಗಿ ತಕ್ಷಣಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲೇ 50ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅನುದಾನಿತ ಶಾಲೆಗಳಲ್ಲಿ 2016ರಿಂದ 2020ರವರೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ 2ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲಾಗಿದೆ. 1,008 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕೇವಲ 28ದಿನಗಳಲ್ಲಿ 32 ಸಾವಿರ ಮಕ್ಕಳು ದಾಖಲಾಗಿದ್ದು, ಉತ್ತಮ ಸ್ಪಂದನ ಸಿಕ್ಕಿದೆ. ಮುಂದಿನ ವರ್ಷದ ವೇಳೆಗೆ ಇನ್ನೂ 500 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ತೆರೆಯಲಾಗುವುದು. ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಇಂತಹ ಮೂರು ಸಾವಿರ ಶಾಲೆ ತೆರೆಯಲು ಉದ್ದೇಶಿಸ ಲಾಗಿದೆ. ಇದರಿಂದ 45 ಲಕ್ಷ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ವ್ಯವಸ್ಥೆ ಚಾಲನೆಗೆ ಬರಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳ (ಸಿಆರ್‌ಪಿ) ಸಭೆ ನಡೆಸಿ ಗುರಿ ನಿಗದಿಪಡಿಸಲಾಗುತ್ತದೆ. ಗುರಿ ಸಾಧನೆ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ಗ್ರಂಥಪಾಲಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ‘ಮುಂದಿನ ವರ್ಷದಿಂದ 50 ಸಾವಿರ ಮಕ್ಕಳಿಗೆ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಈ ವರ್ಷ 25 ಸಾವಿರ ಮಕ್ಕಳು ತರಬೇತಿಗೆ ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button