ಜನಪದರ ಕಲಾಭಿವ್ಯಕ್ತಿಗೆ ಸಾಕ್ಷಿ : ಮಣ್ಣೆತ್ತಿನ ಅಮಾವಾಸ್ಯೆ ಡಾ.ಎಂ.ಎಸ್.ಸಿರವಾಳ ಬರಹ
ಜನಪದರ ಕಲಾಭಿವ್ಯಕ್ತಿಗೆ ಸಾಕ್ಷಿ : ಮಣ್ಣೆತ್ತಿನ ಅಮಾವಾಸ್ಯೆ
ಭಾರತ ಹಬ್ಬಗಳ ದೇಶ ಇಲ್ಲಿ ಅನಾದಿಕಾಲದಿಂದಲೂ ಪ್ರತಿ ತಿಂಗಳೂ ಒಂದಿಲ್ಲೊಂದು ಹಬ್ಬ-ಹರಿ ದಿನಗಳನ್ನು ಆಚರಿಸುತ್ತಲೇ ಇರುತ್ತಾರೆ. ಪ್ರತಿಯೊಂದು ಆಚರಣೆಯೂ ಪ್ರಕೃತಿ-ವಾತಾವರಣ ಹಾಗೂ ಆರೋಗ್ಯದೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುತ್ತವೆ.
ಕಳೆದ ಪೌರ್ಣಮಾಸ್ಯೆ (ಕಾರ ಹುಣ್ಣಿಮೆ) ಯಂದು ರೈತನ ಜೀವನಾಡಿಗಳಾದ ಬಸವಣ್ಣ (ಎತ್ತು) ನನ್ನು ಸಿಂಗರಿಸಿ ಪೂಜಿ (ಮದುವೆ) ಸಿದರೆ, ನಂತರ ಬರುವ ಈ ಅಮಾವಾಸ್ಯೆಯಂದು (ಅ ಮಾಸ ಎಂದರೆ ಚಂದಿರನಿಲ್ಲದ ದಿನ ಎಂದರ್ಥ) ರೈತ ತನಗೆ ಮಾತೃ ಸ್ವರೂಪಳಾದ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುತ್ತಾನೆ.
ನಾವು ಸಣ್ಣವರಿದ್ದಾಗ ಕೆರೆ ಹಳ್ಳಗಳಿಂದ ಕೆಸರನ್ನು ತಂದು ಎತ್ತು, ಗ್ವಾದಲಿ, ಆಕಳು, ಇಲಿ, ಹೆಗ್ಗಣಗಳನ್ನು (ಪಶುಗಳಿಗೆ ಗೌರವದಿಂದ ಪೂಜಿಸಿದರೆ, ಇಲಿ-ಹೆಗ್ಗಣಗಳು ಬೆಳೆಗಳನ್ನು ಬಾಧಿಸದಿರಲಿ ಎಂದು ಬೇಡಿಕೊಂಡು ಪೂಜಿಸುತ್ತಾರೆ) ತಯಾರಿಸುತ್ತಿದ್ದ ಸಂಭ್ರಮ ಈಗ ನೆನಪು ಮಾತ್ರ. ಬಹುಶಃ ಬಹುತೇಕ ಹಳ್ಳಿ ಮಕ್ಕಳಲ್ಲಿನ ಕಲೆ ಅರಳಿಸುವ ಪ್ರಥಮ ವೇದಿಕೆ ಎಂದರೆ ಈ ಮಣ್ಣೆತ್ತಿನ ಅಮಾವಾಸ್ಯೆಯೆ ಎನ್ನಬಹುದು.
ಕೆಸರಿನ ಕಲೆಯನ್ನೆ ತಮ್ಮ ಕುಲ ಕಸುಬನ್ನಾಗಿಸಿಕೊಂಡಿರುವ ಕುಂಬಾರರು ಸಹ ಈ ದಿನ ಸ್ವತಃ ಕೆಸರಿನಿಂದ ತಮ್ಮ ಕೈಯಾರೆ ಅತ್ಯಂತ ಸುಂದರವಾದ ಎತ್ತುಗಳನ್ನು ಮಾಡಿ ಕೊಡುತ್ತಿದ್ದರು. ಈ ಎತ್ತುಗಳನ್ನು ಮೊದಲು ಧಾನ್ಯಗಳನ್ನು (ಜೋಳ,ಗೋಧಿ,ಕಡಲೆ) ಕೊಟ್ಟು ವಿನಿಮಯ ಪದ್ಧತಿಯಲ್ಲಿ ತರುತ್ತಿದ್ದೆವು, ಆನಂತರದಲ್ಲಿ ಧಾನ್ಯಕ್ಕಿಂತ ಧನವೇ ದೊಡ್ಡದೆನಿಸಿದಂತೆಲ್ಲಾ ದುಡ್ಡು ಕೊಟ್ಟು ಮಣ್ಣೆತ್ತುಗಳನ್ನು ತಂದು ನಮ್ಮಲ್ಲಿ ಬೆಳೆಯ ಬಹುದಾಗಿದ್ದ ಮೃತ್ ಮೂರ್ತಿ ಕಲೆಯನ್ನು ಮುಚ್ಚಿ ಬಿಟ್ಟೆವು.
ಕುಂಬಾರನ ಕಲೆಯನ್ನು ನುಂಗಿ “ನೀರು” ಕುಡಿದ ಪ್ಲಾಸ್ಟರ್ ಆಫ್ ಪ್ಯಾರಿಸ್ :
ಈ ದಿನ ಮಣ್ಣೆತ್ತುಗಳನ್ನು ತರೋಣವೆಂದು ಕುಂಬಾರ ಗಲ್ಲಿಗೆ ಹೋದರೆ ಅಲ್ಲಿ ನಮಗೆ ಆಶ್ಚರ್ಯವೇ ಕಾದು ಕುಳಿತಿತ್ತು. ಎರೆ ಮಣ್ಣಿನ ಕಪ್ಪಾದ ಎತ್ತುಗಳ ಬದಲು ಯಾರೋ ಎಲ್ಲಿಯೋ ತಯಾರಿಸಿದ POPಯ ರಂಗು ರಂಗಿನ ಎತ್ತುಗಳನ್ನು ಕುಂಬಾರರ ಯುವಕರು ಸ್ಪರ್ಧೆಗಿಳುದು ಕೈ ಬಂಡಿಯಲ್ಲಿಟ್ಟು ಕೂಗಿ ಕೂಗಿ ಮಾರಾಟ ಮಾಡುತ್ತಿದ್ದರು.
ಹಣ ಕೊಡುತ್ತಾ ಎತ್ತಿನ ಕೊಂಬು ಮುರಿಯದಂತೆ ಪ್ಯಾಕ್ ಮಾಡಿ ಎಂದು ನಾನು ಅಂದಾಗ ‘Don’t worry Sir ಇವು ಮುರಿಯೋಲ್ಲ ಅವು ಪ್ಲಾಸ್ಟಿಕ್ ಕೊಂಬುಗಳು’ ಎಂದು ಬಲು ಹೆಮ್ಮೆಯಿಂದ ಹೇಳಿದ. ಈ ವರ್ಷ ಮಣ್ಣಿನ ಬದಲು POP ಬಂದು ಕುಂಬಾರರ ಕುಲ ಕಸುಬನ್ನು ಕಸಿದುಕೊಂಡಿದೆ, POP ಕೊಂಬಿನ ಬದಲು ಪ್ಲಾಸ್ಟಿಕ್ ಕೊಂಬಿನ ಆಗಮನ ಮುಂದಿನ ವರ್ಷ POP ಕುಶಲ ಕರ್ಮಿಗಳ ಕುಲ ಕಸುಬಿಗೆ ಹಾಡಲಿರುವ ಚರಮ ಗೀತೆಗೆ ನಾಂದಿ ಗೀತೆ ಎನ್ನಬಹುದು.
ಒಮ್ಮೆ ನೈಲಾನ್ ಪ್ಲಾಸ್ಟಿಕ್ ಎತ್ತುಗಳನ್ನು MNC ಕಂಪನಿಗಳಿಂದ Onlineನಲ್ಲಿ ಖರೀದಿಸಿದರೆ ಮುಗೀತು Life long ಒಂದೇ ಕಲ್ಲಿನಲ್ಲಿ ಕುಂಬಾರರ ಹಾಗೂ POPಕುಶಲ ಕರ್ಮಿಗಳ ಕಲೆ-ಕಸುಬುಗಳೆರಡನ್ನು ಶಾಶ್ವತವಾಗಿ ಸಾಯಿಸಿ ಬಿಡಬಹುದಲ್ಲವೆ…?
POP ಎತ್ತುಗಳನ್ನು ಖರೀದಿಸಿದ ಖದರ್ ನಿಂದ ಮುಂದೆ ಬರುವಷ್ಟರಲ್ಲಿ ಅಜ್ಜಿಯೋರ್ವಳು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ನೆಲದ ಮೇಲಿಟ್ಟುಕೊಂಡು ಗಿರಾಕಿಗಳಿಲ್ಲದೆ ಹೋಗಿ ಬರುವವರನ್ನ ‘ದಿಟ್ಟಿಸಿ’ ನೋಡುತ್ತಿದ್ದಳು. ಆದರೆ Urbaನ್ನಿನ Urgent ಮಾನವರಿಗೆ ಮಾತ್ರ ಅಜ್ಜಿಯ ಕಡೆಗಾಗಲಿ ಆಕೆಯ ‘ಮಣ್ಣೆತ್ತಿನ’ ಕಡೆಗಾಗಲಿ ಹೊರಳಿ ನೋಡಲು ಸಮಯವೇ ಇರಲಿಲ್ಲ.
ಕಾಲಾಯ ತಸ್ಮಯೇ ನಮಃ ಎಂದರೆ ಇದೇ ಇರಬೇಕು ಅಲ್ಲವೇ……?
ಮಣ್ಣೆತ್ತಿನ ಅಮಾವಾಸ್ಯೆಯ ಶುಭಾಶಯಗಳು
-ಡಾ.ಎಂ.ಎಸ್.ಸಿರವಾಳ.
ಸಹಾಯಕ ಖಜಾನೆ ಅಧಿಕಾರಿ
ಸುರಪುರ.