ಬಸವಣ್ಣ(ನಂದಿ)ನ ಮೂಲಕ ಶಿವನಿಗೆ ರೈತರ ಮನವಿ
ಮಣ್ಣೆತ್ತು ಆರಾಧನೆ ರೈತಾಪಿ ಜನರ ವಿಶೇಷ ಹಬ್ಬ
ಮುಂಗಾರಿನ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ: ಮುಂಗಾರು ಹಂಗಾಮಿನ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ರೈತರು ಆರಾಧಿಸುವ ಪೂಜಿಸುವ ಮಣ್ಣೆತ್ತು, ಅವರ ಪಾಲಿಗೆ ವರ ನೀಡುವ ನಂದಿ ದೇವರು. ನಂದಿಯನ್ನು ಪೂಜಿಸಿ ಸಮೃದ್ಧ ಮಳೆ, ಬೆಳೆ, ಫಲ ನೀಡುವಂತೆ ನಂದಿಯ ಕಿವಿಯಲ್ಲಿ ಕೋರಿ ಪೂಜಾ ನಂತರ ಜೋಡು ನಂದಿಯನ್ನು ಮನೆಯ ಮಾಳಿಗೆ ಮೇಲೆ ಅಥವಾ ಹೊಲದ ಡ್ವಾಣಕ್ಕೋ ಕೆಲವರು ಗಿಡ ಮರಗಳ ಮೇಲೆ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಇಡುವುದು ವಾಡಿಕೆ.
ಈ ಮಣ್ಣೆತ್ತುಗಳು ರೈತರ ಪ್ರಾರ್ಥನೆ, ಬೇಡಿಕೆ ಜೊತೆಗೆ ಭೂಲೋಕದ ಸ್ಥಿತಿಗತಿಯ ವರದಿಯನ್ನ ಶಿವನಿಗೆ ಸಲ್ಲಿಸುತ್ತವೆ ಎಂಬ ನಂಬಿಕೆ ಭಾರತೀಯ ರೈತರದ್ದಾಗಿದೆ. ಆಗ ಸಮೃದ್ಧ ಮಳೆ ಬೆಳೆ ಕೈಗೆಟುಕುತ್ತದೆ ಎಂಬ ಅಪಾರ ವಿಶ್ವಾಸ ನಂಬಿಕೆಯ ಮೇಲೆ ಮಣ್ಣೆತ್ತಿನ ಆರಾಧನೆ ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿದೆ.
ಅದರಂತೆ ನಾಡಿನಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತಾಪಿ ಜನರು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ನಿರಂತರ ಬರದಿಂದ ತತ್ತರಿಸಿದ ರೈತಾಪಿ ಜನರು ಸರಳವಾಗಿ ಆಚರಣೆ ಮಾಡುತ್ತಿರುವದು ಕಂಡು ಬಂದಿದೆ.
ಅಮಾವಾಸ್ಯೆ ದಿನ ಮನೆಯ ಜಗುಲಿ ಮೇಲೆ ಜೋಡು ಮಣ್ಣೆತ್ತುಗಳಿಗೆ ಅಲಂಕರಿಸಿ ಹೂಗಳು ಅರ್ಪಿಸಿ ನೈವೇದ್ಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಮಣ್ಣಿನಿಂದ ಒಂದು ಇಲಿಯನ್ನು ತಯಾರಿಸಿ ಮನೆಯ ಮೂಲೆಯಲ್ಲಿಟ್ಟು ಪೂಜಿಸುತ್ತಾರೆ. ಇದರಿಂದ ಮನೆಯಲ್ಲಿ ಶೇಖರಿಸಿಟ್ಟ ದವಸ ಧಾನ್ಯಗಳಿಗೆ ದಾಂಗುಡಿ ಇಡುವ ಇಲಿಗೂ ಈ ಸಂದರ್ಭ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ಅಮಾವಾಸ್ಯೆ ಮರುದಿನ ಸಂಜೆ ಮಣ್ಣೆತ್ತುಗಳನ್ನು ಮತ್ತೆ ಮನೆಯ ಮುಂಬಾಗಿಲಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆಗ ಮಳೆ ಬಂದರೆ ಮಳೆಯಲ್ಲಿಯೇ ಅವುಗಳನ್ನು ನೆನೆಯಲು ಬಿಡುತ್ತಾರೆ. ಆಗ ಹದ ಮಾಡಿದ ನೆಲದಲ್ಲಿ ಬೀಜ ಬಿತ್ತನೆಗೆ ಶಿವ ಸೂಚಿಸಿದ್ದಾನೆ. ಈ ಬಾರಿ ಉತ್ತಮ ಫಲ ದೊರೆಯುತ್ತದೆ ಎಂಬುವ ನಂಬಿಕೆ. ಇನ್ನು ಉಳಿದಂತೆ ಅವುಗಳನ್ನು ಮನೆಯ ಮಾಳಿಗೆ ಮೇಲೆ ಇಡಲಾಗುತ್ತದೆ.
ಹಿಂದೆ ಈ ಹಬ್ಬಕ್ಕೆ ಮಕ್ಕಳ ಜೊತೆ ಹಿರಿಯರ ಸಂಭ್ರಮವಿತ್ತು. ಪ್ರಸ್ತುತ ನಗರಗಳಲ್ಲಂತೂ ಈ ಹಬ್ಬ ಕಳೆಗುಂದಿದೆ. ಗ್ರಾಮೀಣ ಭಾಗದಲ್ಲಿ ಮಾತ್ರ ಈ ಸಂಭ್ರಮ ಇನ್ನೂ ಜೀವಂತವಾಗಿದೆ. ಉತ್ತರ ಕರ್ನಾಟಕದಲ್ಲಿ ಇದು ಬಲು ಸೊಗಸಾಗಿ ಆಚರಿಸುತ್ತಾ ಬಂದಿದ್ದಾರೆ.
ಪಿಓಪಿ ಮಣ್ಣೆತ್ತುಗಳ ದಾಂಗುಡಿ..
ತಿಂಗಳ ಮೊದಲೇ ಮಣ್ಣನ್ನು ಹದ ಮಾಡಿ ಎತ್ತುಗಳನ್ನು ತಯಾರಿಸುವದು ಆಧುನಿಕ ಯುಗದಲ್ಲಿ ಕಡಿಮೆಯಾಗುತ್ತಿದೆ. ಪ್ರಸ್ತುತ ಮಣ್ಣೆತ್ತಿನ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣೆತ್ತುಗಳು ಮಾರಾಟಕ್ಕೆ ದಾಂಗುಡಿ ಇಟ್ಟಿವೆ.
ಈ ಬಾರಿ ಹಲವಾರು ಪಟ್ಟಣಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣೆತ್ತುಗಳು ಮಾರಾಟಕ್ಕೆ ಬಂದಿವೆ. ಇವುಗಳನ್ನು ಸೋಲಾಪುರದಿಂದ ತರಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಣ್ಣೆತ್ತಿನ ಹಬ್ಬ ಆಧುನಿಕತೆ ಒಗಗಿಕೊಳ್ಳುವುದೇ ನೋಡುಬೇಕು.
ಆದಾಗ್ಯು ಮಣ್ಣೆತ್ತು ಈ ವರ್ಷವು ಒಂದಿಷ್ಟು ಮಾರ್ಕೇಟ್‍ನಲ್ಲಿ ದೊರೆಯುತ್ತಿವೆ. ಕೆಲವಡೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣೆತ್ತುಗಳನ್ನು ಖರೀದಿ ಮಾಡುತ್ತಿರುವುದ ಕಂಡು ಬಂದಿದೆ. ಮಣ್ಣೆತ್ತಿಗಿಂತ ಚಂದವಾಗಿ ಕಾಣುವ ಈ ಆಧುನಿಕ ಮಣ್ಣೆತ್ತುಗಳನ್ನು ಜನ ಖರೀದಿಸುತ್ತಿದ್ದು, ಅಲ್ಲದೆ ಪೂಜೆ ಮಾಡುತ್ತಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಸಂಸ್ಕøತಿ ಹೊಸ ರೂಪ ಪಡೆದುಕೊಳ್ಳುತ್ತಿದೆ ಎನ್ನಬಹುದು.