ತಾಳಿ ಕಟ್ಟುವ ಶುಭ ಗಳಿಗೆ ವಧು-ವರರಿಬ್ಬರೂ ನಾಪತ್ತೆ!
ಕೋಲಾರ: ಆ ಕುಟುಂಬದವರು ಅಂದುಕೊಂಡಂತೆ ಆಗಿದ್ದರೆ ಇಂದು ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಗುರೇಶ ಜೊತೆ ಸೌಮ್ಯ ವಿವಾಹ ನಡೆಯಬೇಕಿತ್ತು. ಆದರೆ, ಆರತಕ್ಷತೆಗೂ ಮುನ್ನವೇ ನವವಧು ನಾಪತ್ತೆ ಆಗಿದ್ರೆ ವಧುವಿನ ತಂಗಿ ಜೊತೆಯಾದ್ರೂ ಗುರೇಶ ವಿವಾಹ ಮಾಡಿದ್ರಾಯ್ತು ಅಂತ ಪೋಷಕರು ರೆಡಿ ಆಗಿದ್ರು. ಆದ್ರೆ, ಅರಿಶಿಣ ಹಚ್ಚುವ ಸಂಪ್ರದಾಯ ಮುಗಿದ ಬಳಿಕ ತಾಳಿ ಕಟ್ಟುವ ವೇಳೆ ವರನೂ ನಾಪತ್ತೆಯಾಗಿದ್ದಾರೆ. ಪರಿಣಾಮ ಮದುವೆ ಮನೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ. ಮದುವೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿರುವ ವೇಳೆ ವಧು-ವರರಿಬ್ಬರೂ ನಾಪತ್ತೆಯಾಗಿದ್ದು ಎರಡೂ ಕಡೆಯ ಕುಟುಂಬಗಳಿಗೆ ತಲೆಬಿಸಿ ಮಾಡಿದೆ.
ಮದುವೆ ಮಂಟಪ ಸಿಂಗಾರಗೊಂಡಿದೆ. ಬಂದು ಬಾಂಧವರೂ ಬಂದಾಗಿದೆ. ಸಿಹಿ ತಿನಿಸುಗಳೂ ರೆಡಿಯಾಗಿದ್ದು ಆರತಕ್ಷತೆ ವೇಳೆ ವಧು ಎಸ್ಕೇಪ್ ಆಗಿದ್ದು, ತಾಳಿ ಕಟ್ಟುವ ವೇಳೆ ವರ ನಾಪತ್ತೆ ಆಗಿರುವ ಸುದ್ದಿ ಎರಡೂ ಕುಟುಂಬಗಳಿಗೆ ಬರಸಿಡಿಲಿನಂತಾಗಿದೆ. ವಧು ನಾಪತ್ತೆ ಆದಾಗ ಸಮಾಧಾನ ಮಾಡಿಕೊಂಡಿದ್ದ ಪೋಷಕರು ವಧುವಿಗೆ ಸಂಬಂಧದಲ್ಲಿ ತಂಗಿ ಆಗಲಿರುವ ಮತ್ತೋರ್ವ ಯುವತಿ ಲಕ್ಷ್ಮೀ ಜೊತೆ ಗುರೇಶ ವಿವಾಹ ನೆರವೇರಿಸಲು ಎರಡೂ ಕುಟುಂಬದ ಹಿರಿಯರು ಸೇರಿ ನಿರ್ಧರಿಸಿದ್ದರು.
ಅರಿಶಿಣ ಹಚ್ಚುವ ಸಂಪ್ರದಾಯವು ನೆರವೇರಿತ್ತು. ಬಳಿಕ ತಾಳಿ ಕಟ್ಟುವ ಶುಭ ಗಳಿಗೆ ಸಂದರ್ಭದದಲ್ಲಿ ವರನೂ ಸಹ ನಾಪತ್ತೆಯಾಗಿದ್ದಾನೆ. ಹೀಗಾಗಿ, ವಧುವಿನ ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.