ಧಾರ್ಮಿಕ ಆಚರಣೆಯಿಂದ ಉತ್ತಮ ಸಂಸ್ಕಾರ ವೃದ್ಧಿ-ದರ್ಶನಾಪುರ
ಮಾರುತಿ ಮೂರ್ತಿ ಪ್ರತಿಷ್ಠಾಪನೆ, ಮಂದಿರ ಉದ್ಘಾಟನಾ ಸಮಾರಂಭ
ಯಾದಗಿರಿ,ಶಹಾಪುರಃ ದೇವರಲ್ಲಿ ಭಯ, ಭಕ್ತಿ ಇರಬೇಕು. ಎಲ್ಲಾ ಧರ್ಮದಲ್ಲಿ ಧಾರ್ಮಿಕತೆ ಒಳಗೊಂಡಿದೆ. ಆದರೆ ಆಯಾ ಧರ್ಮದ ಆಚರಣೆ ತಿರುಳು ಬೇರೆ ಇದೆ. ಆದರೆ ಎಲ್ಲಾ ಧಾರ್ಮಿಕ ಆಚರಣೆಗಳಿಂದ ಉತ್ತಮ ಸಂಸ್ಕಾರ ವೃದ್ಧಿಯಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಜೀವೇಶ್ವರ ನಗರದ ಅರಳಿಕಟ್ಟೆಯಲ್ಲಿ ಸ್ವಕುಳ ಸಾಳಿ ಸಮಾಜ ಆಯೋಜಿಸಿದ್ದ ನೂತನ ಮಾರುತಿ ಪ್ರತಿಮೆ ಪ್ರತಿಷ್ಠಾಪನಾ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾರುತಿ ಮಂದಿರ ಎಲ್ಲಾ ಜಾತಿ ಜನಾಂಗದವರಿಗೂ ಬೇಕು. ಹಿಂದೆ ಊರಿಗೊಂದು ಹಣಮಂದೇವರು ಗುಡಿಗಳಿದ್ದವು. ಪ್ರಸ್ತುತ ಬಡಾವಣೆಗೊಂಡು ಹಣಮಂತನ ಗುಡಿಗಳು ನಿರ್ಮಾಣವಾಗಿವೆ. ನಮ್ಮ ಧಾರ್ಮಿಕ ಆಚರಣೆ ಜೊತೆಗೆ ಇತರೆ ಧಾರ್ಮಿಕ ಆಚರಣೆಗಳು ಸಹ ನಾವೆಲ್ಲ ಗೌರವಿಸಬೇಕು. ನಮ್ಮ ದೇಶ ಜಾತ್ಯಾತೀತವಾಗಿದೆ. ಇಲ್ಲಿ ಹಲವಾರು ಧರ್ಮ, ಜಾತಿ ಪಂಗಡಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಮಹಾ ಸ್ವಾಮೀಜಿ ಮಾತನಾಡಿ, ಜನರಲ್ಲಿ ದೇವರ ಮೇಲೆ ಪ್ರಾಮಾಣಿಕ ಭಕಿ ಶ್ರದ್ಧೆ ಇರಲಿ. ಡಾಂಭಿಕತನ ಬೇಡ. ಮೂಢ ನಂಬಿಕೆ ಇರಬಾರದು ಮೂಲ ನಂಬಿಕೆ ಇರಬೇಕು. ಧಾರ್ಮಿಕ ಆಚರಣೆಯಿಂದ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಮನುಷ್ಯನ ಅವಗುಣಗಳು ದೂರಾಗಿ ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಪೂರಕ ವಾತಾವರಣ ಉಂಟಾಗಲಿದೆ. ಹೀಗಾಗಿ ಸದಾ ಧಾರ್ಮಿಕ ಆಚರಣೆ, ಪುರಾಣ, ಪ್ರವಚನ ಕಾರ್ಯಕ್ರಮಗಳು ಆಯೋಜಿತಗೊಂಡಲ್ಲಿ. ಅದರ ಪರಿಣಾಮ ಜನರ ಮೇಲೆ ಬೀರುವ ಮೂಲಕ ಅವರ ಮನಸ್ಸು ಪರಿವರ್ತನೆಯಾಗಿ ಸಾತ್ವಿಕ ಶಕ್ತಿ ತುಂಬಲಿದೆ ಎಂದರು.
ಸಮಾಜದ ಹಿರಿಯ ಮಲ್ಲಯ್ಯ ಫೀರಂಗಿ ಸಾಹು ಮಾತನಾಡಿ, ದೇವಸ್ಥಾನ ಕಟ್ಟಡ ನಿರ್ಮಾಣಕ್ಕೂ ಸರ್ಕಾರಿ ಅನುದಾನ ಕಲ್ಪಿಸಿ ಕೊಡುವಲ್ಲಿ ಮಾಜಿ ಮತ್ತು ಹಾಲಿ ಶಾಸಕರು ಸಹಕರಿಸಿದ್ದಾರೆ. ಶಾಸಕರಾದ ದರ್ಶನಾಪುರ ಅವರು ಸ್ವಕುಳ ಸಮಾಜದ ಕರೆಗೆ ಸದಾ ಓಗೊಟ್ಟಿದ್ದಾರೆ. ಪ್ರತಿ ಕೆಲಸ ಕಾರ್ಯಗಳಿಗೆ ಸೂಕ್ತ ಸ್ಪಂಧನೆ ನೀಡುತ್ತಾ ಬಂದಿದ್ದಾರೆ ಎಂದರು.
ಮುಂಚಿತವಾಗಿ ದರ್ಶನಾಪುರ ನೂತನ ಮಾರುತಿ ದೇವರ ದರ್ಶನ ಪಡೆದರು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಮಾರುತಿ ಮಂದಿರಕ್ಕೆ ಆಗಮಿಸಿ ದರ್ಶನ ಪಡೆದು ಸಮಾಜದ ಮುಖಂಡರನ್ನು ಭೇಟಿಯಾಗಿ ಹೋಗಿದ್ದರು.
ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಅಧ್ಯಕ್ಷತೆವಹಿಸಿದ್ದರು. ರಾಜ್ಯಧ್ಯಕ್ಷ ಚಂದ್ರಕಾಂತ ಭಂಡಾರಿ, ನಾರಾಯಣ ಸಿಂಗಾಡೆ, ರಾಮು ಮಿರ್ಜಿ, ಸುನೀಲ ಮಾನು, ಸಮಾಜದ ಮಹಿಳಾ ಅಧ್ಯಕ್ಷೆ ಮಂಜುಳಾ ಎಸ್.ಕೆಂದೂಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.