ಕಲಬುರಗಿ : ಮಳಖೇಡ ಮಠಕ್ಕೆ ಕನ್ನ ಹಾಕಿದ ಕಳ್ಳರು ಕದ್ದೊಯ್ದದ್ದು ಏನು ಗೊತ್ತಾ?
ಕಲಬುರಗಿ : ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಉತ್ತರಾಧಿ ಮಠಕ್ಕೆ ರಾತ್ರಿ ವೇಳೆ ಕಳ್ಳರು ಕನ್ನ ಹಾಕಿದ್ದಾರೆ. ಮಠದ ಹಿಂಬಾಗಿಲ ಬೀಗ ಮುರಿದು ಮಠಕ್ಕೆ ಎಂಟ್ರಿ ಆಗಿರುವ ಕಳ್ಳರ ಗುಂಪು ಮಠದಲ್ಲಿನ ಹುಂಡಿಗೆ ಕನ್ನ ಹಾಕಿದೆ. ಹುಂಡಿ ಒಡೆದು 5ಲಕ್ಷ ರೂಪಾಯಿ ನಗದು ದೋಚಿದೆ. ಅಲ್ಲದೆ ಸುಮಾರು 25 ಕೆಜಿಯ ಬೆಳ್ಳಿ ಕವಚ ಹಾಗೂ ಅಂದಾಜು 20ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಮಳಖೇಡ ಮಠದಲ್ಲಿ ಕಳ್ಳತನ ನಡೆದದ್ದು ಇದೇ ಮೊದಲಸಲವೇನಲ್ಲ. ಕಳೆದ ಎರಡು ವರ್ಷಗಳ ಹಿಂದೆಯೂ ಸಹ ಇದೇ ರೀತಿ ಕಳ್ಳತನ ಆಗಿತ್ತು. ಆದರೆ, ಅಂದು ಕಳ್ಳತನ ಮಾಡಿದವರು ಯಾರು ಎಂಬುದು ಈವರೆಗೆ ಪತ್ತೆ ಆಗಿಲ್ಲ. ಹೀಗಾಗಿ, ಕಳ್ಳರು ಮತ್ತೊಮ್ಮೆ ಮಠಕ್ಕೆ ಕನ್ನ ಹಾಕಿ ತಮ್ಮ ಕೈ ಚಳಕವನ್ನು ತೋರಿದ್ದಾರೆ. ಈಗಲಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿ. ಮಠಕ್ಕೆ ಕನ್ನ ಹಾಕಿದ ಕಳ್ಳರನ್ನು ಹಿಡಿದು ತಕ್ಕ ಶಾಸ್ತಿ ಮಾಡಲಿ ಎಂದು ಮಠದ ಭಕ್ತರು ಆಗ್ರಹಿಸಿದ್ದಾರೆ. ಮಳಖೇಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.