ವಿನಯ ವಿಶೇಷ

ಭೂಮಿಯಲ್ಲಿ ಪತ್ತೆಯಾದ ‘ಮಜಾರ್’ ಎತ್ತರ ಬೆಳೆಯುತ್ತಿದೆಯಂತೆ..?

ಭೂಮಿ ಅಗೆಯುವಾಗ ಪತ್ತೆಯಾದ ಗೋರಿ ಅಚ್ಚರಿ ಮೂಡಿಸುತ್ತಿದೆಯೇ..!

ಮಲ್ಲಿಕಾರ್ಜುನ ಮುದನೂರ

ಯಾದಗಿರಿಃ ಸಗರನಾಡು ಸಂತ, ಶರಣರ ಸೋಫಿಗಳ ಬೀಡು. ಇಲ್ಲಿ ಹಲವಾರು ಶರಣರು, ಸೋಫಿ ಸಂತರ ಪವಾಡ, ಸೃಷ್ಠಿಸಿರುವ ಕಥೆಗಳನ್ನು, ಜನಪದ ಹಾಡು, ಪುರಾಣ, ಪ್ರವಚನಗಳಲ್ಲಿ ಇಂದಿಗೂ ಕಾಣಬಹುದು.

12 ನೇ ಶತಮಾನದ ಹಲವು ಶರಣರು ಈ ಸಗರನಾಡಿನಿಂದಲೇ ಹೊರಹೊಮ್ಮಿದ್ದಾರೆ. ಸಗರನ ಸೋಫಿ ಸರ್ಮದ್ ಸಾಬ, ಗೋಗಿಯ ಚಂದಾ ಹುಸೇನಿ ಸೇರಿದಂತೆ ಮುದನೂರಿನ ದೇವರ ದಾಸಿಮಯ್ಯ, ಕೆಂಭಾವಿಯ ಬೋಗಣ್ಣ, ಶಹಾಪುರದ ಚರಬಸವೇಶ್ವರ ತಾತಾ, ದಿಗ್ಗಿಯ ಸಂಗಮೇಶ್ವರರು ಸಾಕಷ್ಟು ಶರಣರು, ಸೋಫಿ ಸಂತರು ಸಗರನಾಡಿನಲ್ಲಿ ಹುಟ್ಟಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಅವರ ಪವಾಡ, ಕಥೆಗಳು ದಂತಕಥೆಗಳಾಗಿ ಇತಿಹಾಸ ಪುಟ ಸೇರಿವೆ.

ಇಂತಹ ಭೂ ಪ್ರದೇಶದಲ್ಲಿ ಮತ್ತೇ ಈಗ ಕಳೆದ ಮೂರು ದಿನಗಳಿಂದ ಪವಾಡ, ಕಥೆ ಹೇಳುವ ಭೂಮಿಯಲ್ಲಿ ಪತ್ತೆಯಾದ ‘ಮಜಾರ್’ ಒಂದು ನಿತ್ಯ ಒಂದಿಲ್ಲೊಂದು ಅಚ್ಚರಿ ಮೂಡಿಸುತ್ತಿದೆ. ಹೌದು.. ಜಿಲ್ಲೆಯ ಶಹಾಪುರ ನಗರದ ಹಳೇ ತರಕಾರಿ ಮಾರ್ಕೇಟ್ ಹತ್ತಿರದ ಹಜರತ್ ಸಯ್ಯದ್ ಸಾಲರ್ ಅಹ್ಮದ್ ಗಾಜಿ ದರ್ಗಾದ ಪ್ರದೇಶದಲ್ಲಿ ಮಳಿಗೆ ನಿರ್ಮಾಣ ವೇಳೆ ಕಾಲಂ ಹಾಕಲು ಭೂಮಿ ಅಗೆಯುತ್ತಿರುವಾಗ ಮಂಗಳವಾರ ಪತ್ತೆಯಾದ ಮಜಾರ್ (ಗೋರಿ) ಮಣ್ಣಿನಲ್ಲಿ ಸುಗಂಧ ವಾಸನೆ ಬೀರಿರುವ ಸುದ್ದಿ  ಹರಡಿ ಸಾಕಷ್ಟು ಜನರು ಸೇರಿದ್ದರು.

ಅಲ್ಲದೆ ಸುವಾಸನೆ ಬೀರುತ್ತಿರುವ ಮಣ್ಣನ್ನು ನೂರಾರು ಜನರು ತಮ್ಮ ಕೈ ಮುಷ್ಟಿಯಲ್ಲಿ ಹಿಡಿದುಕೊಂಡು ಭಕ್ತಿಯಿಂದಲೇ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಆದರೆ, ಬುಧವಾರ ಆ ಮಜಾರ್ ಸುತ್ತಲಿನ ಮಣ್ಣು ಪೂರ್ಣವಾಗಿ ತೆಗೆದು ಹಾಕಲಾಗಿದೆ. ಈಗ ಸಂಪೂರ್ಣ ಗೋರಿ ಹೊರಬಿದ್ದಿದ್ದೆ. ಆಗ ಇನ್ನಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನ ತಂಡೋಪ ತಂಡವಾಗಿ ಬಂದ ಜನಸ್ತೋಮ ಹೂವಿನ ಚಾದಾರ್, ಬಟ್ಟೆ ಗಲೀಫ್ ಹೊದಿಸಿ, ಫಲ ಪುಷ್ಪಗಳನ್ನು ಅರ್ಪಿಸಿ ದರ್ಶನ ಪಡೆಯುತ್ತಿದ್ದಾರೆ.

ಅಲ್ಲದೆ ಬುಧವಾರ ಅಚ್ಚರಿ ಸಂಗತಿ ಎಂದರೆ ಆ ‘ಮಜಾರ್’ ಮಂಗಳವಾರ ಕಂಡಿರುವದಕ್ಕಿಂತ ಈಗ ಸುಮಾರು ಒಂದು ಫೀಟ್‍ನಷ್ಟು ಎತ್ತರಕ್ಕೆ ಬೆಳೆದಿದೆ ಎಂಬ ಸುದ್ದಿ ಹರಡಿದೆ. ಹೀಗಾಗಿ ಬುಧವಾರ ಸಂಜೆ ಇನ್ನಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅದನ್ನು ಅಳತೆ ಮಾಡುವಲ್ಲಿ ಕೆಲವರು ಮಗ್ನರಾಗಿದ್ದರು.

ಮಂಗಳವಾರ ಭೂ-ಮಧ್ಯದಲ್ಲಿ ಕಾಣಿಸಿಕೊಂಡ ‘ಮಜಾರ್’ ಇಂದು ಎತ್ತರವಾಗಿ ಬೆಳೆದಿದೆ ಎಂಬುದು ಭಕ್ತರ ಅನಿಸಿಕೆಯಾಗಿದೆ. ಮಂಗಳವಾರ ನೋಡಿದ ಭಕ್ತರೆಲ್ಲರೂ ಇಂದು ಗೋರಿ ಬೆಳೆದಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ದರ್ಗಾ ಮುತಾವಲಿ ರಫೀಕ್ ಕಂಠಿ ಹೇಳಿಕೆ ಪ್ರಕಾರ ಮಜಾರ್ ನಿಜಕ್ಕೂ ಎತ್ತರಕ್ಕೆ ಬೆಳೆದಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂದು ಮಜಾರ್‍ನ ಅಳತೆ ಮಾಡಿ ಬರೆದಿಟ್ಟುಕೊಂಡ ಅವರು, ನಾಳೆ ಅಳತೆ ಮಾಡಿ ನೋಡೋಣ ಎಂದು ತಿಳಿಸಿದ್ದಾರೆ.

ಬಂದ ಭಕ್ತರೆಲ್ಲರೂ ಭಕ್ತಿಯಿಂದಲೇ ಕೈಮುಗಿದು ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಏನೇನ್ ಅಚ್ಚರಿ ಕಂಡು ಬರುತ್ತದೆ ಎಂಬುದನ್ನು ಕಾಯ್ದು ನೋಡಬೇಕು ಎಂದು ಸೇರಿದ್ದ ಜನರು ಮಾತನಾಡುತ್ತಿದ್ದಾರೆ.

ಈ ಬಗ್ಗೆ ಪ್ರಗತಿಪರರು ಯಾರೊಬ್ಬರು ಅಲ್ಲಿಗೆ ಭೇಟಿ ನೀಡಿಲ್ಲ. ಈ ಕುರಿತು ನಿಜ ಸ್ಥಿತಿ ಏನೆಂಬುದನ್ನು ಸ್ಪಷ್ಟಪಡಿಸಿಬೇಕಿದೆ. ನಗರದಲ್ಲಿ ಇಷ್ಟೆಲ್ಲ ನಡೆದರೂ ಯಾವೊಬ್ಬ ಅಧಿಕಾರಿಯು ಇತ್ತ ಗಮನ ಹರಿಸಿಲ್ಲ ಎಂಬುದು ಕೆಲವರ ವಾದ.

ಕೂಡಲೇ ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ನೀಡಿ ಇಲ್ಲಿನ ಸತ್ಯಾಂಶ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ. ನಂಬಿಕೆಗೆ ಮಸಿ ಬಳಿಯದೆ ಪ್ರಸ್ತುತ ನಿಜ ಸ್ಥಿತಿ ಅರಿಯಬೇಕಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಹಳೇ ಮಂದಿಯ ಪ್ರಕಾರ ಗಾಜಿ ದರ್ಗಾದ ಸುತ್ತಲೂ ಸಾಕಷ್ಟು ಗೋರಿಗಳಿದ್ದವು. ಮುತಾವಲಿ ಮನೆತನದವರ ಗೋರಿಗಳು ಅಲ್ಲಿಯೇ ಇವೆ. ಕಾಲಾನುಕ್ರಮ ಅಲ್ಲಿ ಯಾರು ವಾಸ ಮಾಡದ ಕಾರಣ ಕೆಲವು ಮಣ್ಣಲ್ಲಿ ಮುಚ್ಚಿ ಹೋಗಿರಬಹುದು. ಈಗ ಪತ್ತೆಯಾಗಿವೆ ಎಂಬುದು ಕೆಲವರ ಅಭಿಪ್ರಾಯ. ಗೋರಿಯಲ್ಲಿ ಈ ಮೊದಲು ಗಂಧ, ಸುವಾಸನೆ ಭರಿತ ದ್ರವಗಳನ್ನು ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ.

Related Articles

One Comment

  1. ಉತ್ತಮ ಮಣ್ಣಿನಲ್ಲಿ ಸುವಾಸನೆ ಸಹಜ ಸರ್, ಕೆಲವೊಮ್ಮೆ ಮಳೆ ಬರುವಾಗ ಸುವಸನೆಯು ಬರುವ ಹಾಗೆ ಬಂದಿರಬಹುದು. ಆದರೆ ಈ ಗೋರಿ ಬೆಳೆಯುತ್ತಿದ್ದೆ ಎನ್ನುವುದು ಸುಳ್ಳು.

Leave a Reply

Your email address will not be published. Required fields are marked *

Back to top button