ಭೂಮಿಯಲ್ಲಿ ಪತ್ತೆಯಾದ ಓಲ್ಡ್ ಮಜಾರ್ ಬಳಿ ಫ್ರೆಶ್ ಸುವಾಸನೆಯ ಅಚ್ಚರಿ!
-ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ಸಗರನಾಡಿನ ಶಹಾಫುರದಲ್ಲಿ ಅನೇಕ ಸೂಫಿ, ಸಂತರು, ಶರಣರು, ನೆಲೆಸಿದ್ದರು. ಪವಾಡಗಳ ಮೂಲಕ ಜನರ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು. ಜಾತಿ-ಮತ ಬೇಧವಿಲ್ಲದೆ ಎಲ್ಲರೊಳಗೊಂದಾಗಿ ಸಾಮರಸ್ಯದ ಸಂದೇಶವನ್ನು ಸಾರಿದ್ದರು. ಅಂತೆಯೇ ಇಂದಿಗೂ ಈ ಭಾಗದ ಜನ ಪವಾಡ ಪುರುಷರನ್ನು ನೆನೆದು ಭಕ್ತಿಯ ನಮನ ಸಲ್ಲಿಸುತ್ತಾರೆ. ಸೂಫಿ-ಸಂತರ ಶುಭಾಶೀರ್ವಾದದಿಂದಲೇ ಒಳಿತಾಗುತ್ತಿದೆ ಎಂದು ಭಾವಿಸುತ್ತಾರೆ. ಸಗರನಾಡಿನ ಜನರ ನಂಬಿಕೆಗೆ ಪುಷ್ಠಿ ನೀಡುವ ವಿಸ್ಮಯಕಾರಿ ಘಟನೆಯೊಂದು ನಗರದ ಹಳೇ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿಂದು ನಡೆದಿದೆ.
ಮಾರುಕಟ್ಟೆ ಪ್ರದೇಶದ ಹಜರತ್ ಸಯ್ಯದ್ ಸಾಲರ್ ಅಹ್ಮದ್ ಗಾಜಿ ದರ್ಗಾ ದರ್ಗಾದ ಆವರಣದಲ್ಲಿ ನೂತನ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಾಲಂ ಹಾಕಲೆಂದು ಭೂಮಿ ಅಗೆದಾಗ ಮಜಾರ್ ಪತ್ತೆಯಾಗಿದೆ. ದೊಡ್ಡ ಕಟ್ಟೆ, ಕಟ್ಟೆ ಮೇಲೆ ಮಜಾರ್ ಕಂಡು ಬಂದಿದ್ದು ಕಟ್ಟೆ ಸುತ್ತ ಅಗೆದಂತೆಲ್ಲಾ ಸುವಾಸನೆ ಹರಡಿದೆ. ಪರಿಣಾಮ ಕಾರ್ಮಿಕರು ಚಕಿತರಾಗಿದ್ದು ಕ್ಷಣಾರ್ಧದಲ್ಲಿ ವಿಸ್ಮಯಕಾರಿ ಸುದ್ದಿ ನಗರದೆಲ್ಲೆಡೆ ಹಬ್ಬಿದೆ. ಪರಿಣಾಮ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದು ಭಕ್ತಿಯ ನಮನ ಸಲ್ಲಿಸುತ್ತಿದ್ದಾರೆ. ಕೆಲವರು ಹಿಡಿ ಮಣ್ಣನ್ನು ಪೂಜಿಸಲು ಮನೆಗೆ ಒಯ್ಯುತ್ತಿದ್ದಾರೆ.
ಸುಮಾರು 600 ವರ್ಷಗಳಷ್ಟು ಪುರಾತನ ಕಾಲದ ಹಜರತ್ ಸಯ್ಯದ್ ಸಾಲರ್ ಅಹ್ಮದ್ ಗಾಜಿ ದರ್ಗಾದಲ್ಲಿ ಮಜಾರ್ ಪತ್ತೆಯಾಗಿದೆ. ಅಲ್ಲದೆ ಮಜಾರ್ ಸುತ್ತಲಿನ ಮಣ್ಣು ಸುವಾಸನೆ ಬೀರುತ್ತಿರುವುದು ಪವಾಡವಲ್ಲದೆ ಮತ್ತಿನ್ನೇನು ಎಂದು ಜನ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮತಬೇಧ ಮರೆತು ಪವಾಡವನ್ನು ಕಣ್ಮನ ತುಂಬಿಕೊಳ್ಳಲು ಜನಸಾಗರವೇ ದರ್ಗಾದತ್ತ ಧಾವಿಸುತ್ತಿದೆ.
ಕಾರ್ಮಿಕರು ಮಣ್ಣಿನಲ್ಲಿ ಸುವಾಸನೆ ಬರುತ್ತಿದೆ ಎಂದರು. ಆಗ ಮತ್ತಷ್ಟು ಮಣ್ಣು ಅಗೆದಾಗ ಮಜಾರ್ ಪತ್ತೆಯಾಯಿತು. ಮಣ್ಣು ಅಗೆದಂತೆ ಗಂಧದ ಸುವಾಸನೆ ಹೆಚ್ಚುತ್ತಿದೆ. ಸದ್ಯಕ್ಕೆ ಅಷ್ಟಕ್ಕೆ ಕೆಲಸ ನಿಲ್ಲಿಸಿದ್ದೇವೆ.
-ರಫೀಕ್ ಕಂಠಿ. ದರ್ಗಾದ ಮುತಾವಲಿ. ಶಹಾಪುರ.
ಯಾವ ಕಾಲದಲ್ಲಿ ಮಜಾರ್ ಮುಳುಗಡೆಯಾಗಿದೆಯೋ ಗೊತ್ತಿಲ್ಲ. ಹಳೇಕಾಲದ ಮಜಾರ ಸುತ್ತಲಿನ ಮಣ್ಣಿನಲ್ಲಿ ಸುವಾಸನೆ
ಬರುತ್ತಿರುವುದು ಆಶ್ಚರ್ಯವೆನಿಸಿದೆ. ನೋಡಲು ಬರುತ್ತಿರುವ ಭಕ್ತಾಧಿಗಳೆಲ್ಲರೂ ಮುಷ್ಟಿಯಲ್ಲಿ ಮಣ್ಣು ಹಿಡಿದು ಸುವಾಸನೆ ನೋಡಿ ಮನೆಗೆ ಒಯ್ಯುತ್ತಿದ್ದಾರೆ.
-ಶಕೀಲ್ ಮುಲ್ಲಾ. ನಾಗರಿಕ.