”ಹೆಂಡತಿ ಮಕ್ಕಳು ಸೇರಿ ಯಾರನ್ನೂ ನಂಬುವ ಸ್ಥಿತಿಯಿಲ್ಲ” : ಸಿದ್ದುಗೆ ಎಂ.ಬಿ.ಪಾಟೀಲ್ ಗುದ್ದು?
ವಿಜಯಪುರ : ನಾನು ಅತಿಯಾಗಿ ನಂಬಿದವರಿಂದಲೇ ನನಗೆ ಅನ್ಯಾಯ ಆಗಿದೆ. ಇನ್ನು ಮುಂದೆ ಹೆಂಡತಿ ಮಕ್ಕಳು ಸೇರಿದಂತೆ ಯಾರೊಬ್ಬರನ್ನೂ ನಂಬುವ ಸ್ಥಿತಿಯಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಎಂ.ಬಿ.ಪಾಟೀಲ್ ಪರೋಕ್ಷವಾಗಿ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದ್ದಾರೆ.
ದೆಹಲಿಯಿಂದ ಹಿಂದಿರುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿ ಆಗಿರುವ ಎಲ್ಲಾ ತಪ್ಪುಗಳ ಬಗ್ಗೆ ಹೇಳಿದ್ದೇನೆ. ಡಿಸಿಎಂ, ಸಚಿವ ಸ್ಥಾನ, ಕೆಪಿಸಿಸಿ ಅದ್ಯಕ್ಷ ಸ್ಥಾನ ಯಾವುದನ್ನೂ ನಾನು ಕೇಳಿಲ್ಲ. ಒಬ್ಬರಿಗೊಂದು ನ್ಯಾಯ ಎಂಬಂತಾಗಿದ್ದು ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಆಗಿದೆ.
ಐದು ವರ್ಷ ಸಚಿವನಾಗಿದ್ದ ಕಾರಣಕ್ಕೆ ನನ್ನನ್ನು ಕೈಬಿಡಲಾಗಿದೆ ಅನ್ನುವುದಾದರೆ ದೇಶಪಾಂಡೆ, ಕೆ.ಜೆ.ಜಾರ್ಜ್, ಸೇರಿದಂತೆ ಅನೇಕರಿಗೆ ಸಚಿವ ಸ್ಥಾನ ನೀಡಲಾಗಿದೆ. ನನಗೊಂದು ಮಾನದಂಡ ಬೇರೆಯವರಿಗೆ ಮತ್ತೊಂದು ಮಾನದಂಡ ಮಾಡಲಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ. ಆ ಮೂಲಕ ಸಮರ ಚಾಲ್ತಿಯಲ್ಲಿರುವುದರ ಸುಳಿವು ನೀಡಿದ್ದಾರೆ.