ಪ್ರಮುಖ ಸುದ್ದಿ

ಅನಗತ್ಯ ಅಲೆದಾಟ, ವಿಳಂಬ ನೀತಿಗೆ ಅಧಿಕಾರಿಗಳ ವಿರುದ್ಧ ಕ್ರಮ- ಚಿಕ್ಕಮಠ

ಯಾದಗಿರಿ ಲೋಕಾಯುಕ್ತರಿಂದ ದೂರು ಸ್ವೀಕಾರ

ನೀಡಿದ ದೂರುಗಳಿಗೆ ಬೇಕಾಬಿಟ್ಟಿ ಉತ್ತರ ನೀಡಿದ್ದಲ್ಲಿ ಸೂಕ್ತ ಕ್ರಮ ಲೋಕಾಯುಕ್ತರ ಎಚ್ಚರಿಕೆ

ಯಾದಗಿರಿ,ಶಹಾಪುರಃ ಸಾರ್ವಜನಿಕರು ಯಾವುದೇ ಕೆಲಸದ ನಿಮಿತ್ತ ಆಯಾ ಇಲಾಖೆಗೆ ಬಂದ ಅವರ ಸಮರ್ಪಕವಾಗಿ ಕೆಲಸ ಮಾಡಿಕೊಡುವದು ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಗಳ ಕರ್ತವ್ಯ. ಅದು ಬಿಟ್ಟು ವಿನಃ ಕಾರಣಕ್ಕೆ ಅವರನ್ನು ಅಲೆದಾಡಿಸುವದು ವಿಳಂಬ ನೀತಿ ಅನುಸರಿಸುವದು ಸರಿಯಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಮುಂಬರುವ ದಿನಗಳಲ್ಲಿ ಅಧಿಕಾರಿಗಳು ಅದನ್ನೆ ಮುಂದುವರೆಸಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‍ಪಿ ವಿ.ಬಿ.ಚಿಕ್ಕಮಠ ಎಚ್ಚರಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಸಾರ್ವತ್ರಿಕ ದೂರು ಸ್ವೀಕಾರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳು ಜಾರಿಯಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಬೇಜವಬ್ದಾರಿ ನಿರ್ಲಕ್ಷ ಕಂಡು ಬರುತ್ತಿದೆ. ಯಾವುದೇ ಇಲಾಖೆಯಾಗಲಿ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಯಾವುದೇ ಯೋಜನೆಯ ಸಫಲತೆ ಸಾಕಾರವಾಗುವವರೆಗೂ ಅದನ್ನು ನಿಭಾಯಿಸುವ ನಿರ್ವಹಿಸುವ ಕರ್ತವ್ಯ ಅಧಿಕಾರಿಗಳದ್ದಾಗಿದೆ.

ಕಳೆದ ಐದಾರು ವರ್ಷಗಳಿಂದ ಸಾಕಷ್ಟು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಸಾರ್ವಜನಿಕರಿಂದ ನೂರಾರು ದೂರುಗಳು ಬಂದಿದ್ದು, ಅಸಮರ್ಪಕ ಅವ್ಯವಸ್ಥೆಯಿಂದ ಕಾಮಗಾರಿಗಳು ಅರ್ಧ ಕೆಲಸಗಳಾಗಿ ಸ್ಥಗಿತಗೊಂಡಿವೆ. ಅವುಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು. ನಿರ್ವಹಣೆ ನಿಭಾಯಿಸುವ ಜವಬ್ದಾರಿಯಿಂದ ಅಧಿಕಾರಿಗಳು ನುಣಚಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಇಲಾಖಾವಾರು ಸಂಪರ್ಕ ಪಡೆದುಕೊಂಡು ಆಯಾ ಬಾಕಿ ಕೆಲಸಗಳನ್ನು ಫಾಲೋಅಪ್ ಮಾಡಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಯಲ್ಲೂ ಸಭೆಗಳು ಜಾಸ್ತಿ ನಡೆಯುತ್ತವೆ ಆದರೆ ಕೆಲಸಗಳು ಆಗಲ್ಲ. ಬರಿ ಸಭೆ ನಡೆಸಿದರೂ ಕೆಲಸಗಳನ್ನು ನಿರ್ವಹಿಸುವದು ಯಾರು. ಯಾವ ಕೆಲಸ ಎಲ್ಲಿಗೆ ಬಂದು ನಿಂತಿದೆ ಯಾವ ಹಂತ ತಲುಪಿದೆ ಎಂಬುದನ್ನು ಯಾವ ಅಧಿಕಾರಿಗಳಿಗೂ ಗೊತ್ತಿಲ್ಲ. ಅಲ್ಲದೆ ಸಕಾಲದಲ್ಲಿ ಸಾಕಷ್ಟು ಗೊಂದಲ ಸೃಷ್ಠಿಸಲಾಗಿದೆ. ನಿಗದಿತ ಸಮಯದಲ್ಲಿ ಸಕಾಲದ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂಬ ಅಪವಾದಗಳಿವೆ.

ಕೇಳಿದರೆ ಅಧಿಕಾರಿಗಳು ಸಕಾಲದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಯಾವುದೋ ಒಂದು ಕಾರಣ ನೀಡಿ ರದ್ದುಪಡಿಸಲಾಗುತ್ತದೆ. ಯಾವುದೇ ಅರ್ಜಿಗೆ ಮರಳಿ ಉತ್ತರಿಸಬೇಕಿದ್ದಲ್ಲಿ ಅದು ಕಾನೂನಾತ್ಮಕವಾಗಿರಬೇಕು. ಉದಾಹರಣೆಗೆ ಒಂದು ದೂರಿನಲ್ಲಿ ವಂಶಾವಳಿಗೆ ಸಲ್ಲಿಸಿದೆ ಅರ್ಜಿಗೆ ಪಂಚನಾಮೆ ವರದಿ ಲಗತ್ತಿಸಿಲ್ಲ ಎಂದು ರದ್ದು ಪಡಿಸಲಾಗಿದೆ. ಪಂಚನಾಮೆ ಯಾರು ಮಾಡಬೇಕು ಅಧಿಕಾರಿಗಳು ತಾನೇ ಮತ್ತೇ ಇಂತಹ ಅಸಂಬದ್ಧ ಕಾರಣ ನೀಡಿ ರದ್ದು ಪಡಿಸುವದು ಎಷ್ಟರ ಮಟ್ಟಿಗೆ ಸರಿ ಎಂದು ಕಂದಾಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಉಪಸ್ಥಿತರಿದ್ದ ತಹಶೀಲ್ದಾರರಿಗೆ ಸಕಾಲ, ವಂಶಾವಳಿ ಜವಬ್ದಾರಿ ಬೇರೆಯವರ ಜವಬ್ದಾರಿ ಇದೆ ಎಂದು ನೀವು ಸುಮ್ಮನಾಗಬೇಡಿ ನೀವು ಇವೆಲ್ಲವನ್ನು ನೋಡಿತ್ತಿರಬೇಕೆಂದು ತಿಳಿಸಿದರು. ಅದೇ ರೀತಿ ಜೆಸ್ಕಾಂ ಮತ್ತು ಗಂಗಾ ಕಲ್ಯಾಣ ಯೋಜನೆ ಅಧಿಕಾರಿಗಳ ಕಾರ್ಯ ವೈಖರಿಯನ್ನು ವಿಚಾರಿಸಿ ಇಲಾಖಾವಾರು ಸಂಪರ್ಕ ಸಾಧಿಸಿ ಕೊಳವೆ ಬಾವಿ ಕೊರೆಯುವ ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕವಾಗಿ ವಿಚಾರಿಸಿ ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೆಲಸ ಪೂರ್ಣವಾಗಿಸುವದು ಯೋಜನೆಯ ಅಧಿಕಾರಿಗಳ ಕೆಲಸ ಎಂದು ಎಚ್ಚರಿಸಿದರು.

ಕೆಲವು ಇಲಾಖೆಯಲ್ಲಿ ಅಧಿಕಾರಿವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ಸುಖಾಸುಮ್ಮನೆ ಅಲೆದಾಡಿಸುತ್ತಿರುವದು ಬೆಳಕಿಗೆ ಬಂದಿದೆ. ಇದೆಲ್ಲ ನಡೆಯಬಾರದು. ಕಾನೂನು ರೀತ್ಯ ನಿಯಮಗಳನ್ನು ಅನುಸರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಮುಂಬುರವ ದಿನಗಳಲ್ಲಿ ಅಧಿಕಾರಿಗಳು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಬೇಕು ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಹಾರಣಗೇರಾ ಕುಡಿಯುವ ನೀರಿನ ಕೊರತೆ ಮತ್ತು ಇತರೆ ದೂರುಗಳನ್ನು ಸ್ವೀಕರಿಸಿ ಸಂಬಂಧಿಸಿದ ಅಧಿಕರಿಗಳನ್ನು ತರಾಟೆಗೆ ತೆಗೆದುಕೊಂಡು ಅವುಗಳನ್ನು ಪರಿಹಾರಕ್ಕೆ ಸೂಚಿಸಿದರು. ಅಲ್ಲದೆ ನಿತ್ಯ ಪತ್ರಿಕೆಯಲ್ಲಿ ಸಾಕಷ್ಟು ಸಮಸ್ಯೆಗಳ ಕುರಿತು ಬರೆಯಲಾಗುತ್ತಿದೆ. ಅವುಗಳತ್ತ ಗಮನ ಹರಿಸಬೇಕು. ಸ್ಥಳ ಪರಿಶೀಲನೆ ಮಾಡುವ ಮೂಲಕ ತಕ್ಷಣ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಲೋಕಾಯುಕ್ತ ಪಿಐ ಗುರುರಾಜ, ತಹಶೀಲ್ದಾರ ಜಗನ್ನಾಥರಡ್ಡಿ, ತಾಪಂ ಇಓ ಜಗನ್ನಾಥ ಮೂರ್ತಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ ಉಪಸ್ಥಿತರಿದ್ದರು. ಸಭೆಯಲ್ಲಿ ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ, ಗೃಹ ಮಂಡಳಿ ಎಇಇ ಶರಣಗೌಡ ಪಾಟೀಲ್, ಸಿಡಿಪಿಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button