ಹೇಳಿ ಸ್ವಾಮಿ, ಯಾರು ಹೆಚ್ಚು ಕಾಮಿ…?
ಆ ಸ್ವಾಮಿಗಳು ಮಾಡಬಾರದ್ದನ್ನು ಮಾಡಿದರು, ಈ ಮಾಧ್ಯಮಗಳು ತೋರ ಬಾರದ್ದನ್ನು ತೋರಿದವು!
ಬೆಂಗಳೂರಿನ ಮದ್ದೇವಣಪುರ ಮಠದ ದಯಾನಂದ ಸ್ವಾಮೀಜಿ ಎಂಬ ಸ್ವಾಮಿ ಚಿತ್ರನಟಿಯೊಬ್ಬಳ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ತುಣುಕೊಂದು ಬಹಿರಂಗವಾಗಿದೆ. ಸ್ವಾಮಿಯ ವಿಡಿಯೋ ತುಣುಕು ಬಹಿರಂಗವಾಗಿದ್ದೇ ತಡ ಕೆಲ ಸುದ್ದಿ ವಾಹಿನಿಗಳು ಸ್ಪರ್ದೆಗೆ ಬಿದ್ದವರಂತೆ ರಾಸಲೀಲೆಯ ವಿಡಿಯೋ ತುಣುಕನ್ನು ಪ್ರಸಾರ ಮಾಡಿವೆ. ಕೆಲ ಮಾಧ್ಯಮಗಳು ನಮ್ಮಲ್ಲೇ ಮೊದಲು, ಎಕ್ಸಕ್ಲೂಸಿವ್ ಅಂತೆಲ್ಲಾ ಹೇಳಿಕೊಂಡವು. ರೋಚಕ ಹೆಡ್ ಲೈನ್ ನೀಡಿ ಸುದ್ದಿ ಬಿತ್ತರಿಸಿದವು. ಅದರಲ್ಲೂ ಚಾಲಾಕಿತನ ತೋರಿಸಿರುವ ಮಾಧ್ಯಮದವರು ಎಲ್ಲವನ್ನು ತೋರಿಸಿಯೂ ನಾವೇನೂ ತೋರಿಸಿಲ್ಲ ಎಂಬಂತೆ ರಾಸಲೀಲೆಯ ದೃಶ್ಯದ ಮೇಲೆ ಕೊಂಚ ಬ್ಲರ್ ಮಾಡಿದರು. ಆದರೆ, ಒಂದೆರಡು ಮಾಧ್ಯಮಗಳು ಮಾತ್ರ ನಾವು ಸುದ್ದಿ ಮಾತ್ರ ಪ್ರಕಟಿಸುತ್ತೇವೆ. ರಾಸಲೀಲೆಯ ವಿಡಿಯೋ ಬಿತ್ತರಿಸುವುದಿಲ್ಲ ಎಂದು ಘೋಷಿಸಿದ್ದು ಸ್ವಲ್ಪ ಸಮಾಧಾನದ ಸಂಗತಿ.
ಜವಬ್ದಾರಿಯುತ ಸ್ಥಾನದಲ್ಲಿರುವವರು, ಜನರಿಗೆ ಮಾದರಿ ಆಗಿರುವವರು ಇಂಥ ಕೃತ್ಯಗಳನ್ನು ಎಸಗಿದಾಗ ಮಾಧ್ಯಮಗಳು ಅದನ್ನು ದೊಡ್ಡದಾಗಿ ಎತ್ತಿ ತೋರಿಸುವುದು ಮಾಧ್ಯಮದ ಕರ್ತವ್ಯವೇ ಸರಿ. ತಪ್ಪು-ಒಪ್ಪುಗಳನ್ನು ಸಮಾಜಕ್ಕೆ ಎತ್ತಿ ತೋರಿಸುವುದು ಮಾಧ್ಯಮದ ಜವಬ್ದಾರಿಯೂ ಹೌದು. ಆದರೆ, ತಪ್ಪು ಎತ್ತಿ ತೋರಿಸಿ ಜನ ಜಾಗೃತಿ ಮೂಡಿಸುವ ಭರದಲ್ಲಿ ಬೆಡ್ ರೂಮ್ ಸೀನ್ ಗಳನ್ನು ತೋರಿಸುವುದು ಎಷ್ಟು ಸರಿ. ಸಮಾಜದ ಮೇಲೆ, ಮಹಿಳೆಯರು, ಮಕ್ಕಳ ಮೇಲೆ ಈ ದೃಶ್ಯಗಳು ಯಾವ ರೀತಿ ದುಷ್ಪರಿಣಾಮ ಬೀರಲಿವೆ ಎಂಬುದನ್ನು ಯೋಚಿಸಬೇಕಿದೆ. ಆ ಸ್ವಾಮಿ ತನ್ನ ಸ್ಥಾನಮಾನವನ್ನು ಮರೆತು ಒಪ್ಪಿತ ಮಹಿಳೆಯ ಜೊತೆಗೆ ರಾಸಲೀಲೆ ನಡೆಸಿದ. ಅಥವಾ ಆಮಿಷವೊಡ್ಡಿ ಬಳಸಿಕೊಂಡ, ಅಥವಾ ಹನಿಟ್ರ್ಯಾಪ್ ಮೂಲಕ ಸಿಲುಕಿಸಲಾಯಿತು ಎಂದಾದರೆ ಅಂಥ ರಾಸಲೀಲೆಯ ದೃಶ್ಯಗಳನ್ನು ತೋರಿಸದೆಯೇ ಸುದ್ದಿ ಬಿತ್ತರಿಸಬಹುದು ಅಲ್ಲವೇ. ಆ ಮೂಲಕವೂ ಜನಜಾಗೃತಿ ಮೂಡಿಸಬಹುದು, ಸರ್ಕಾರ, ಸಂಭಂಧಿತ ಅಧಿಕಾರಿಗಳ ಗಮನ ಸೆಳೆಯಬಹುದಾಗಿದೆ ಎಂಬುದು ನಾಡಿನ ಪ್ರಗ್ನಾವಂತ ಸಮುದಾಯದ ಅಭಿಪ್ರಾಯವಾಗಿದೆ.
ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸಿದ ರಾಸಲೀಲೆ ಪ್ರಕರಣದಿಂದ ಸುದ್ದಿ ಟೀವಿಗಳಿಗೆ ಅದೇನು ಟಿಆರ್ ಪಿ ಹೆಚ್ಚುತ್ತದೆಯೋ ಗೊತ್ತಿಲ್ಲ. ಯಾಕೆಂದರೆ, ಯಾರಿಗೆ ಕೇಳಿದರೂ ಇಂದು ಸುದ್ದಿ ವಾಹಿನಿಗಳನ್ನು ನೋಡುವಂತಿಲ್ಲ ಬಿಡಿ ಅನ್ನೋ ಮಾತು ಸಹಜವಾಗಿದೆ. ಮನೆಗಳಲ್ಲಿ ರಾಸಲೀಲಿ ಸುದ್ದಿ ನೋಡುತ್ತಿದ್ದರೆ ಮಹಿಳೆಯರು ದುರ್ಗುಟ್ಟಿಕೊಂಡು ನೋಡಿ ರಿಮೋಟ್ ಕಿತ್ತುಕೊಂಡು ಚಾನಲ್ ಬದಲಿಸಿದ ಪ್ರಸಂಗಗಳು ನಡೆದಿವೆ. ಹೀಗಾಗಿ, ಇನ್ನಾದರೂ ಸುದ್ದಿ ವಾಹಿನಿಗಳ ಮುಖ್ಯಸ್ಥರು ಇಂಥ ರಾಸಲೀಲೆಯ ವಿಡಿಯೋಗಳನ್ನು ಬಿತ್ತರಿಸದಿರಲಿ. ಸರ್ಕಾರ ಕೂಡ ಇಂಥ ಪ್ರಕರಣಗಳು ನಡೆದಾಗ ತಕ್ಷಣಕ್ಕೆ ಸ್ಪಂದಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಆ ಮೂಲಕ ರಾಸಲೀಲೆಯಂಥ ನಾಗರೀಕ ವಿರೋಧಿ ತುಣುಕುಗಳು ಟೀವಿಗಳಲ್ಲಿ ದಿನಗಟ್ಟಲೆ ಪ್ರಸಾರವಾಗದಂತೆ ಕ್ರಮ ಕೈಗೊಳ್ಳಲಿ ಎಂಬುದು ನಾಗರೀಕ ಸಮಾಜದ ಕಳಕಳಿಯ ಮನವಿಯಾಗಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಕರೆಸಿಕೊಳ್ಳುವ ಮಾಧ್ಯಮರಂಗಕ್ಕೆ ತನ್ನದೇ ಆದ ಗೌರವವಿದೆ. ಜನ ಸಹ ಅಧಿಕಾರಿಗಳು, ರಾಜಕಾರಣಿಗಳಿಗಿಂತ ಹೆಚ್ಚು ನಂಬಿಕೆಯನ್ನು ಮಾಧ್ಯಮದ ಮಂದಿ ಮೇಲಿಟ್ಟುಕೊಂಡಿದ್ದಾರೆ. ಅಂತೆಯೇ ಅನೇಕ ಸಲ ಮಾಧ್ಯಮಗಳು ಜನಪರ ಕೆಲಸ ಮಾಡಿವೆ. ಸರ್ಕಾರ ಮತ್ತು ಸಮಾಜದ ಕಣ್ಣು ತೆರೆಸಿವೆ. ಆದರೆ, ಇತ್ತೀಚೆಗೆ ಮಾಧ್ಯಮ ಒಂದು ಉದ್ಯಮವಾಗಿದ್ದು ನೈತಿಕ ಅಧಪತನದತ್ತ ಸಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ, ಮಾಧ್ಯಮಗಳು ಕನಿಷ್ಟ ಪಕ್ಷ ಸೂಕ್ಷ್ಮ ವಿಚಾರಗಳಲ್ಲಿ ಸಾಮಾಜಿಕ ಬದ್ಧತೆ ತೋರಬೇಕಿದೆ. ಹೆಚ್ಚು ಹೆಚ್ಚು ಜನಪರ, ಸಮಾಜಮುಖಿ ಕಾರ್ಯಗಳ ಮೂಲಕ ಮಾಧ್ಯಮಗಳು ಸದಾಕಾಲ ಜನರ ದನಿಯಾಗಿರಲಿ. ಭ್ರಷ್ಟರು, ಕಳ್ಳ-ಕಾಕರಿಗೆ ಸಿಂಹಸ್ವಪ್ನವಾಗಿರಲಿ. ಆದರೆ, ಮಾಧ್ಯಮೋದ್ಯಮ ಅಭಿವೃದ್ಧಿಯ ಭರಾಟೆಯಲ್ಲಿ ಜನರ ನಂಬಿಕೆಯನ್ನು ಕಳೆದುಕೊಳ್ಳದಿರಲಿ ಎಂಬುದು ನಮ್ಮ ಆಶಯ.
-ಸಂ
👍