ಪ್ರಮುಖ ಸುದ್ದಿ

ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಿ-ಸಚಿವ ಚವ್ಹಾಣ ತಾಕೀತು

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವ ಪ್ರಭು ಚವ್ಹಾಣ ಸಭೆ

ಯಾದಗಿರಿಃ ಹಿಂದುಳಿದ ಜಿಲ್ಲೆಯಿಂದ ಮುಂದುವರೆದ ಜಿಲ್ಲೆಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಕೆಲಸ ಮಾಡಬೇಕು ಎಂದು ಪಶುಸಂಗೋಪನೆ ಸಚಿವ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಕೆಲವರು ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಂದ ಯಾದಗಿರಿಗೆ ಬರುತ್ತಿರುವುದಾಗಿ ತಿಳಿದುಬಂದಿದೆ. ಜಿಲ್ಲಾಡಳಿತ ಭವನದ ಹಿಂದುಗಡೆ ನೌಕರರಿಗಾಗಿ ನಿರ್ಮಿಸಿದ ವಸತಿಗೃಹಗಳಲ್ಲಿ ವಾಸವಿರಬೇಕು. ಸರ್ಕಾರಿ ವೇಳಾ ಪಟ್ಟಿಯ ಅನುಸಾರ ಕಚೇರಿಗೆ ಬರಬೇಕು. ಇಲಾಖಾ ಮುಖ್ಯಸ್ಥರು ಬಯೋಮೆಟ್ರಿಕ್ ಹಾಜರಾತಿಗೆ ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರ ಕುಂದುಕೊರತೆ, ಸಮಸ್ಯೆಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಜನರ ತೆರಿಗೆಯ ಹಣದಿಂದ ಸಂಬಳ ಪಡೆಯುವ ನಾವು ಅವರ ಕೆಲಸ ಮಾಡಿಕೊಡಲು ಏನು ಸಮಸ್ಯೆ? ಎಂದು ಅವರು ಪ್ರಶ್ನಿಸಿದರು.

ಪ್ರತಿಯೊಂದು ಇಲಾಖೆಯನ್ನು ಖುದ್ದಾಗಿ ಪರಿಶೀಲಿಸುತ್ತೇನೆ. ಹಾಜರಾತಿ ಕಡ್ಡಾಯವಾಗಿರಬೇಕು. ಕೆಲ ಕಚೇರಿಗಳಲ್ಲಿ ಮಧ್ಯಾಹ್ನದ ಹಾಜರಾತಿಯನ್ನು ಬೆಳಿಗ್ಗೆಯೇ ಹಾಕುತ್ತಿರುವುದು ಕಂಡುಬಂದಿದೆ. ಈ ರೀತಿ ಕಂಡುಬಂದರೆ ಇಲಾಖಾ ಮುಖ್ಯಸ್ಥರು ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಬೇಕು.

ನಿಯಮಬಾಹಿರವಾಗಿ ಕೆಲಸ ಮಾಡುವ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಜಿಲ್ಲೆಯಲ್ಲಿ ಖಾಲಿ ಹುದ್ದೆಗಳ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ಗಮನಕ್ಕೆ ಬಂದಿದೆ. ಖಾಲಿ ಹುದ್ದೆಗಳ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಭರ್ತಿಗೆ ಒತ್ತಾಯಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ವಿವಿಧ ನಿಗಮಗಳಿಗೆ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರಿಂದ ನಿಗಮಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮತ್ತು ಪ್ರಗತಿ ಪರಿಶೀಲನೆಗೆ ತೊಂದರೆಯಾಗುತ್ತಿದೆ. ಕಾರಣ ಜಿಲ್ಲೆಯ ವಿವಿಧ ನಿಗಮಗಳಿಗೆ ಜಿಲ್ಲೆಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪ್ರಭಾರ ವಹಿಸಲಾಗುವುದು ಎಂದು ತಿಳಿಸಿದರು.

ತಿರಸ್ಕೃತ ರೈತರ ಆತ್ಮಹತ್ಯೆ ಪ್ರಕರಣ ಪರಿಶೀಲಿಸಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳಿದ್ದು, 3 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 5 ಪ್ರಕರಣಗಳಿಗೆ ಎಫ್‍ಎಸ್‍ಎಲ್ ವರದಿ ಬಾಕಿ ಇದ್ದು, 5 ತಿರಸ್ಕøತವಾಗಿವೆ ಎಂಬುದಾಗಿ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರಿಂದ ಮಾಹಿತಿ ಪಡೆದ ಸಚಿವರು, ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಶೀಘ್ರ ಪರಿಹಾರ ವಿತರಿಸಬೇಕು.

ತಿರಸ್ಕರಿಸಿದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಎಂದು ಸೂಚಿಸಿದರು.

ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿ: ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತ ಪ್ರಧಾನಮಂತ್ರಿಗಳ ಕನಸಾಗಿದೆ. ಹಾಗಾಗಿ, ಕಚೇರಿ ಹಾಗೂ ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡಬೇಕು. ಜಿಲ್ಲೆಯ ಯಾವುದೇ ಗ್ರಾಮ, ತಾಲ್ಲೂಕು ಕೇಂದ್ರ, ಜಿಲ್ಲಾ ಕಚೇರಿ, ನಗರಸಭೆ, ಪುರಸಭೆ, ಶಾಲಾ-ಕಾಲೇಜು ಹಾಗೂ ವಸತಿನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಲಾಗುವುದು. ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಕೂಡ ಭೇಟಿ ನೀಡಬೇಕು ಮತ್ತು ವರದಿ ನೀಡಬೇಕು ಎಂದು ಸಚಿವರು ಹೇಳಿದರು.

ಶಾಸಕರಾದ ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಗುರುನಾಥ ಎನ್.ಗೌಡಪ್ಪನವರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button