ಸುರಪುರದ ಬಿಜೆಪಿ ಶಾಸಕ ರಾಜೂಗೌಡರಿಗೆ ಮಂತ್ರಿ ಪಟ್ಟ ಗ್ಯಾರಂಟಿ!
ವಿನಯ ಮುದನೂರ್
ಯಾದಗಿರಿ ರಾಜ್ಯದ ಮೂವತ್ತನೇ ಜಿಲ್ಲೆಯಾಗಿ ದಶಕವೇ ಕಳೆದಿದೆ. ಆದರೆ, ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ನಾಮಕಾವಾಸ್ತೆ ಮಾತ್ರ ಯಾದಗಿರಿ ಜಿಲ್ಲೆ ಎಂದು ಘೋಷಿಸಲಾಗಿದ್ದು ಈವರೆಗಿನ ರಾಜ್ಯ ಸರ್ಕಾರಗಳು ರಾಜ್ಯದ ಎರಡನೇ ಚಿಕ್ಕ ಜಿಲ್ಲೆಯನ್ನು ಕಡೆಗಣಿಸಿವೆ ಎಂಬುದು ಈ ಭಾಗದ ಜನರ ಆರೋಪವಾಗಿದೆ. ಹಿಂದುಳಿದ ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿ ಮತ್ತು ಉಸ್ತುವಾರಿ ನೀಡಬೇಕೆಂಬ ಕೂಗು ಜೋರಾಗಿದೆ.
ಸುರಪುರ ಶಾಸಕ ರಾಜೂಗೌಡರಿಗೆ ಕಳೆದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಬಿಜೆಪಿ ಎಸ್ಟಿ ಘಟಕದ ರಾಜ್ಯದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ನಾಯಕ ಸಮುದಾಯದ ಪ್ರೀತಿ ಗಳಿಸಿದ್ದಾರೆ. ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದು ಅಪಾರ ಯುವ ಅಭಿಮಾನಿಗಳು, ಗೆಳೆಯರನ್ನು ಹೊಂದಿದ್ದಾರೆ. ಅಭಿವೃದ್ಧಿಪರವಾದ ಜನಾನುರಾಗಿ ರಾಜೂಗೌಡ ಯುವ ನಾಯಕರಾಗಿದ್ದು ಉತ್ಸಾಹದಿಂದ ಜಿಲ್ಲೆ, ರಾಜ್ಯ ಸುತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬಲ್ಲವರಾದ ಕಾರಣ ರಾಜೂಗೌಡರೇ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನಕ್ಕೆ ಫಿಟ್ ಅಂಡ್ ಫೈನ್ ಎಂಬ ವಾದ ಕಮಲ ಪಕ್ಷದಲ್ಲಿ ಕೇಳಿ ಬರುತ್ತಿದೆ.
ಇನ್ನು ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಯಾದಗಿರಿಯಿಂದ ವೆಂಕಟರೆಡ್ಡಿ ಮುದ್ನಾಳ್ , ಸುರಪುರದಿಂದ ರಾಜೂಗೌಡ ಮಾತ್ರ ಬಿಜೆಪಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಶಹಾಪುರದಿಂದ ಶರಣಬಸ್ಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ ನಿಂದ, ಗುರುಮಠಕಲ್ ಕ್ಷೇತ್ರದಿಂದ ನಾಗನಗೌಡ ಕಂದಕೂರ ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದಾರೆ. ವೆಂಟಕರೆಡ್ಡಿ ಮುದ್ನಾಳ್ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿದ್ದಾರೆ. ರಾಜೂಗೌಡ ಮೂರನೇ ಬಾರಿಗೆ ಶಾಸಕರಾಗಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಮಂತ್ರಿ ಪದವಿ ಪಡೆಯುವಲ್ಲಿ ಸಫಲರಾಗಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿ.ಎಸ್.ಯಡಿಯೂರಪ್ಪ ತಮ್ಮದೇ ಆದ ಸಂಪರ್ಕವನ್ನು ಹೊಂದಿದ್ದು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ, ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕಂದಕೂರ ಅವರು ಯಡಿಯೂರಪ್ಪ ಅವರ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡುವ ಮೂಲಕ ಭಾರೀ ಸುದ್ದಿ ಮಾಡಿದ್ದರು. ಆಪರೇಷನ್ ಕಮಲ ಆಡಿಯೋ ಯಡಿಯೂರಪ್ಪ ವರ್ಚಸ್ಸಿಗೆ ದೊಡ್ಡ ಡ್ಯಾಮೇಜ್ ಮಾಡಿದ್ದು ಈಗ ಇತಿಹಾಸ. ಡ್ಯಾಮೇಜ್ ಕಂಟ್ರೋಲ್ ಮಾಡಲು ಜಿಲ್ಲೆಯಲ್ಲಿ ಪ್ರಭಾವಿಯೂ ಆಗಿರುವ ಯಂಗ್ & ಡೈನಾಮಿಕ್ ಶಾಸಕ ರಾಜೂಗೌಡರಿಗೆ ಮಂತ್ರಿಗಿರಿ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂಬಂಶ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ನಾಯಕ ಸಮುದಾಯದ ಪ್ರಮುಖ ಮುಖಂಡರಾದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು, ಬೆಳಗಾವಿ ಜಿಲ್ಲೆ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದ ಶಿವನಗೌಡ ನಾಯಕ ಸಹ ಮಂತ್ರಿಗಿರಿಯ ರೇಸ್ ನಲ್ಲಿದ್ದಾರೆ. ಆದರೆ, ಹಿಂದುಳಿದ ಯಾದಗಿರಿ ಜಿಲ್ಲೆ ಕೋಟಾದಡಿ ರಾಜೂಗೌಡರು ಮಂತ್ರಿ ಪದವಿ ಪಡೆಯುವುದು ಬಹುತೇಕ ಪಕ್ಕಾ ಎಂಬಂಶ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಅತೃಪ್ತ ಶಾಸಕರ ಭವಿಷ್ಯ ಮತ್ತು ಬಿಜೆಪಿಯಲ್ಲಿ ಸ್ಥಾನಮಾನ ನೀಡುವ ಬಗ್ಗೆ, ಬಹುಮತ ಸಾಬೀತು ತಂತ್ರ ಹಾಗೂ ಸಂಪುಟ ರಚನೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸೋಮವಾರದಂದು ಯಡಿಯೂರಪ್ಪ ಬಹುಮತ ಸಾಬೀತು ಮಾಡಿದ ಬಳಿಕವಷ್ಟೇ ಯಾರೆಲ್ಲಾ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದು ಖಚಿತವಾಗಲಿದೆ.