ಪ್ರಧಾನಿ ಮೋದಿ ವಿರುದ್ದ ಅಸಂವಿಧಾನಿಕ ಪದ ಬಳಸಿದ ಸಚಿವ!
ಸಚಿವರ ‘ರೋಷಾ’ವೇಶದ ಭಾಷಣ!
ಬೆಂಗಳೂರು: ಸಚಿವ ರೋಷನ್ ಬೇಗ್ ಪ್ರಧಾನ ನರೇಂದ್ರ ಮೋದಿ ಮೇಲೆ ಅದೆಂಥಾ ಕೋಪ ಇದೆಯೋ ಗೊತ್ತಿಲ್ಲ. ಪುಲಕೇಶಿ ನಗರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಸಭೆಯಲ್ಲಿ ತಮಿಳಿಗರು ಹೆಚ್ಚಾಗಿರೋದ್ರಿಂದ ಅಲ್ಲಿನ ತಮಿಳಿಗರನ್ನು ಮೆಚ್ಚಿಸಲು ತಮಿಳು ಭಾಷೆಯಲ್ಲೇ ಭಾಚಣ ಮಾಡಿದ ಸಚಿವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜನರ ಚಪ್ಪಾಳೆ ಕೇಳಿ ಮೈದುಂಬಿಕೊಂಡ ಸಚಿವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಚಾಮಗೋಚರವಾಗಿ ನಾಲಿಗೆ ಹರಿಬಿಟ್ಟಿದ್ದಾರೆ.
ಮೊದಲಿಗೆ ನೋಟು ರದ್ದತಿ, ಜಿಎಸ್ ಟಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಪ್ರಧಾನಿ ಅವರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಬಗ್ಗೆಯೂ ಟೀಕಿಸಿದ್ದಾರೆ. ಆ ಮೂಲಕ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಸಚಿವರ ರೋಷಾವೇಶ ಕಂಡು ಜನರೂ ಕೇಕೆ ಹಾಕಿದ್ದಾರೆ. ಪರಿಣಾಮ ಮತ್ತಷ್ಟು ಹಿಗ್ಗಿದ ಸಚಿವ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಎಂಬುವುದನ್ನೂ ಮರೆತು ಅವಾಚ್ಯ ಶಬ್ದ ಬಳಸಿ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸಚಿವರು ಬಳಸಿದ ಅಸಭ್ಯ ಪದ ಇಲ್ಲಿ ಪ್ರಕಟಿಸಲು ಆಗದು. ಸಚಿವರ ಬಾಯಿಂದ ಹೊರಬಿದ್ದ ಆ ಪದ ಕೇಳಿ ಚಪ್ಪಾಳೆ ಹಾಕುತ್ತಿದ್ದ ಸಭಿಕರೇ ಒಂದು ಕ್ಷಣ ಅವಕ್ಕಾಗಿದ್ದಾರೆ. ಮೋದಿ ಪ್ರಧಾನಿ ಅನ್ನುವುದನ್ನು ಮರೆತಿದ್ದರೂ ಪರವಾಗಿಲ್ಲ. ರೋಷನ್ ಬೇಗ್ ಅವರು ತಾವೊಬ್ಬ ಸಚಿವ ಅನ್ನೋದನ್ನು ಮರೆತು ಕೀಳು ಮಟ್ಟದ ಪದ ಬಳಕೆ ಮಾಡಿದ್ದು ಈಗ ವಿವಾದಕ್ಕೆ ಈಡಾಗಿದೆ.