ಅಲ್ಪಸಂಖ್ಯಾತ ನಿಗಮದ ಶೇರು ಬಂಡವಾಳ 608 ಕೋಟಿಗೆ ಹೆಚ್ಚಳ- ಸಚಿವ ಚವ್ಹಾಣ
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ವೇಗಕ್ಕೆ ಸಹಕಾರ
ಯಾದಗಿರಿಃ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಷೇರು ಬಂಡವಾಳವನ್ನು ರೂ.150 ಕೋಟಿಯಿಂದ ರೂ.608.40 ಕೋಟಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಇದರಿಂದ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ವೇಗ ದೊರೆಯಲಿದೆ ಎಂದು ಪಶುಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಚವ್ಹಾಣ್ ಹರ್ಷ ವ್ಯಕ್ತ ಪಡಿಸಿದರು.
ಈ ನಿಗಮದಿಂದ ಅಲ್ಪಸಂಖ್ಯತರ ಅಭಿವೃದ್ಧಿಗಾಗಿ ಶೈಕ್ಷಣಿಕ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಏತ ನೀರಾವರಿ ಯೋಜನೆ ಹಾಗೂ ಕೌಶಲ್ಯ ಅಭಿವೃದ್ಧಿಯಂತಹ ಉಪಯುಕ್ತ ಯೋಜನೆಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಲಾಗಿವೆ.
ಪ್ರಸ್ತುತ ನಿಗಮದ ಅಧಿಕೃತ ಷೇರು ಬಂಡವಾಳವು 150 ಕೋಟಿ ಇದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರವು ಈವರೆಗೆ 608.40 ಕೋಟಿಗಳಷ್ಟು ಬಂಡವಾಳವನ್ನು ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲದ ರೂಪದಲ್ಲಿ ಫಲಾನುಭವಿಗಳಿಗೆ ಪಾವತಿಸಲಾಗಿರುತ್ತದೆ.
ಪಾವತಿಸಿದ ಷೇರು ಬಂಡವಾಳ ರಾಜ್ಯಸರ್ಕಾರ ಹೂಡಿರುತ್ತದೆ. ಕಂಪನಿ ಕಾಯ್ದೆ 2013ರ ಪ್ರಕಾರ ಪಾವತಿಯಾದ ಬಂಡವಾಳವು ಅಧಿಕೃತ ಷೇರು ಬಂಡವಾಳವನ್ನು ಮೀರುವಂತಿಲ್ಲ. ಆದ್ದರಿಂದ ಕೆಎಂಡಿಸಿಯ ಅಧಿಕೃತ ಷೇರು ಬಂಡವಾಳನ್ನು 150 ಕೋಟಿಯಿಂದ 608.40 ಕೋಟಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟು ಷೇರು ಬಂಡವಾಳದಲ್ಲಿ ಶೇ 75ರಷ್ಟು ಬಂಡವಾಳವನ್ನು ಶಿಕ್ಷಣಕ್ಕಾಗಿ ಅರಿವು ಯೋಜನೆ ಅಡಿಯಲ್ಲಿ ಬಳಸಲಾಗುತ್ತದೆ.