ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಗುರು ಪಾಟೀಲ್ ಧರಣಿ : ಫಲ ನೀಡದ ಸಚಿವ ಖರ್ಗೆ ಭೇಟಿ
ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಗುರು ಪಾಟೀಲ್ ಧರಣಿ
ಯಾದಗಿರಿಃ ಶಹಾಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿ ಬರುವ ಸುರಪುರ ತಾಲೂಕಿನ 12 ಗ್ರಾಮಗಳನ್ನು ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಕೈಗೊಂಡಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ.
ಆದರೆ ಸಮರ್ಪಕ ಭರವಸೆ ಬಾರದ ಹಿನ್ನೆಲೆಯಲ್ಲಿ ಶಾಸಕರು ಧರಣಿ ಮುಂದುವರೆಸಿದ್ದಾರೆ ಎಂದು ಧರಣಿ ನಿರತರು ತಿಳಿಸಿದ್ದಾರೆ. ಬೂದಿಹಾಳ-ಪೀರಾಫುರ ಏತ ನೀರಾವರಿ ಯೋಜನೆಯಡಿ ಕೆಲವೇ ಗ್ರಾಮಗಳಿಗೆ ನೀರುಣಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದೇ ಭಾಗದಲ್ಲಿ ಬರುವ ನನ್ನ ಮತಕ್ಷೇತ್ರದ ಐನಾಪೂರ, ಮಲ್ಕಾಪುರ, ದೋರನಹಳ್ಳಿ, ಬೇವಿನಹಾಳ, ಕಾಚಾಪುರ, ಆಲ್ದಾಳ, ಎಂ.ಬೊಮ್ಮನಳ್ಳಿ, ಚಿಂಚೋಳಿ, ವಂದಗನೂರ ಗ್ರಾಮಗಳನ್ನು ಕೈ ಬಿಡಲಾಗಿದೆ. ಈ ಗ್ರಾಮಗಳ ರೈತರು ಯಾವ ಅನ್ಯಾಯ ಮಾಡಿದ್ದಾರೆ. ಈ ಗ್ರಾಮದ ರೈತರಿಗೂ ಅನುಕೂಲ ಕಲ್ಪಿಸಬೇಕೆಂದು ಶಾಸಕ ಗುರು ಪಾಟೀಲ್ ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಫಲ ನೀಡದ ಕಾರಣ ಧರಣಿ ಮುಂದುವರೆದಿದೆ. ಬೇಡಿಕೆ ಈಡೇರಿಕೆವರೆಗೂ ಧರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ದಿನ ಮುಂದೂಡಿದಂತೆ ಇನ್ನೂ ಹೋರಾಟ ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸಚಿವರ ಜತೆ ಜಿಲ್ಲಾಧಿಕಾರಿ ಜೆ.ಮಂಜುನಾಥ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.