ಜನಮನಪ್ರಮುಖ ಸುದ್ದಿ

ರಾಜೀನಾಮೆಗೆ ಸಿದ್ಧರಿದ್ದೇವೆ – ಸುರಪುರ ಬಿಜೆಪಿ ಶಾಸಕ ರಾಜೂಗೌಡ

ಚಿತ್ರದುರ್ಗ : ರಾಜ್ಯ ಸರ್ಕಾರ ಎಸ್ಟಿ ಮೀಸಲಾತಿ ಹೆಚ್ಚಳಗೊಳಿಸದೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದಲ್ಲಿ ರಾಜೀನಾಮೆಗೆ ಸಿದ್ಧರಿದ್ದೇವೆ ಎಂದು ಚಿತ್ರದುರ್ಗದಲ್ಲಿ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಹೇಳಿದ್ದಾರೆ. ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿಶ್ರೀ ನೇತೃತ್ವದಲ್ಲಿ ದಾವಣಗೆರೆಯ ರಾಜನಹಳ್ಳಿಯಿಂದ ರಾಜಧಾನಿವರೆಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಎಸ್ಟಿ ಮೀಸಲಾತಿ ಇರುವ ಕಾರಣಕ್ಕೆ ರಾಜ್ಯದಲ್ಲಿ 15 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ನಾವು ಶಾಸಕರಾಗಿದ್ದೇವೆ. ಇನ್ನೆರಡು ಸಾಮಾನ್ಯ ಕ್ಷೇತ್ರಗಳಲ್ಲೂ ನಮ್ಮ ಸಮುದಾಯದ ಇಬ್ಬರು ಶಾಸಕರು ಆಯ್ಕೆ ಆಗಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ಎಸ್ಟಿ ಮೀಸಲಾತಿ ಶೇಕಡಾ 7.5ರಷ್ಟು ನೀಡಿದ್ದರೂ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳಗೊಳಿಸಿಲ್ಲ. ಈ ಬಗ್ಗೆ ವಿಧಾನಸಭೆ ಕಲಾಪದಲ್ಲೂ ಚರ್ಚೆಗೆ ಅವಕಾಶ ಕೇಳಿದ್ದೇವೆ. ಅಂತೆಯೇ ಕೋರ್ಟ್ ನಲ್ಲೂ ಸಹ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಇಷ್ಟರಲ್ಲೇ ಎಸ್ಟಿ ಮೀಸಲು ಹೆಚ್ಚಳದ ತೀರ್ಪು ನಮ್ಮಪರವಾಗಿ ಹೊರಬೀಳುವ ನಿರೀಕ್ಷೆಯಿದೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತೇವೆ. ನ್ಯಾಯಕ್ಕಾಗಿ ವಾಲ್ಮೀಕಿ ಶ್ರೀಗಳು ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ಮಾಡುತ್ತಿದ್ದು ಸಮುದಾಯದ ಶಾಸಕರೆಲ್ಲರ ಬೆಂಬಲವಿದೆ. ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ವಾಲ್ಮೀಕಿಶ್ರೀ ಸೂಚಿಸಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಹ ನಾವೆಲ್ಲಾ ಸಿದ್ಧರಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಯುತವಾಗಿ ಕೇಳುತ್ತಿದ್ದೇವೆ ಹೊರತು ಬೇರೆಯವರ ಮೀಸಲಾತಿ ಕಸಿದು ಕೊಡಿ ಎಂದು ಕೇಳಿಲ್ಲ. ಯಾವುದೇ ಸಮುದಾಯವನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೂ ಸಹ ಮೀಸಲಾತಿ ಹೆಚ್ಚಿಸಿ ಜನಸಂಖ್ಯೆಗನುಗುಣವಾಗಿ ನೀಡಬೇಕೆಂಬುದು ನಮ್ಮ ಬೇಡಿಕೆ ಎಂದು ಶಾಸಕ ರಾಜೂಗೌಡ ತಿಳಿಸಿದರು.

ಮುರುಘಾಮಠದ ಆವರಣದಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿಶ್ರೀ, ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರಶ್ರೀ, ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button